ಮನೆ ಮಾರಾಟ ಹೆಸರಿನಲ್ಲಿ ಚಿತ್ರ ನಿರ್ದೇಶಕ ನಾಗಶೇಖರ್ ಗೆ 50 ಲಕ್ಷ ರೂ. ವಂಚನೆ
ಬೆಂಗಳೂರು ಡಿ. 25: ಸ್ಟಾರ್ ಡೈರೆಕ್ಟರ್‌ಗೆ 50 ಲಕ್ಷ ರೂ. ವಂಚನೆ: ಠಾಣೆ ಮೆಟ್ಟಿಲೇರಿದ ನಾಗಶೇಖರ್. ಗಮನ ಬೇರಡೆ ಸೆಳೆದು ಹಣ ದೋಚುವ ತಮಿಳುನಾಡಿನ ರಾಂಜಿನಗರ ಚೋರ್ ಗ್ಯಾಂಗ್ ಬಂಧನ. ಗಾಂಜಾ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ.
ನಿರ್ದೇಶಕ ನಾಗಶೇಖರ್ ಗೆ ವಂಚನೆ:
ಮನೆ ಖರೀದಿ ಮಾಡಲು ಮುಂಗಡ ಹಣ ಕೊಟ್ಟು ಕನ್ನಡ ಚಿತ್ರ ನಿರ್ದೇಶಕ ನಾಗಶೇಖರ್ 50 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಇದೀಗ ಹಣ ಕೊಡಿಸಿ ಎಂದು ನಾಗಶೇಖರ್ ಆರ್.ಆರ್. ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೈನಾ, ಅಮರ್, ಮಾಸ್ತಿಗುಡಿ ಮತ್ತಿತರ ಖ್ಯಾತ ಕನ್ನಡ ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ರಾಜರಾಜೇಶ್ವರಿ ನಗರದ ಜಯಣ್ಣ ಲೇಔಟ್ ನಲ್ಲಿ ಮೀನಾ ಮತ್ತು ರಾಜಶೇಖರ್ ಅವರಿಗೆ ಸೇರಿದ 2.70 ಕೋಟಿ ರೂ.ಗೆ ಖರೀದಿ ಮಾಡಿ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಹಂತ ಹಂತವಾಗಿ 50 ಲಕ್ಷ ರೂ. ಪಾವತಿ ಮಾಡಿದ್ದರು. ಮನೆ ಮಾರಾಟ ಸಂಬಂಧ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಅದೇ ಮನೆಯನ್ನು ಮೀನಾ ಮತ್ತು ರಾಜಶೇಖರ್ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ವಿಚಾರ ತಿಳಿದ ನಾಗಶೇಖರ್ ಹಣ ವಾಪಸು ಕೊಡುವಂತೆ ಕೇಳಿದಾಗ ಹಣ ಕೊಟ್ಟಿಲ್ಲ. ಇದೀಗ ಮೀನಾ ಮತ್ತು ರಾಜಶೇಖರ್ ವಿರುದ್ಧ ನಾಗಶೇಖರ್ ವಂಚನೆ ದೂರು ನೀಡಿದ್ದಾರೆ.

ರಾಂಜಿ ಗಾಂಗ್ ಅಂದರ್:
ಸಾರ್ವಜನಿಕರ ಗಮನ ಬೇರಡೆ ಸೆಳೆದು ಬೆಳೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ ತಮಿಳುನಾಡು ಮೂಲದ ರಾಂಜಿನಗರ ಚೋರ್ ಗ್ಯಾಂಗ್ ಸದಸ್ಯರನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮುರುಳಿ, ಗೋಪಾಲ್, ಮೂರ್ತಿ, ಸೆಂಥಿಲ್, ಮುರುಘಾನಂದನ್, ರಜನಿಕಾಂತ್, ವೆಂಕಟೇಶ್, ಸುಬ್ರಮಣಿ, ಶಿವಕುಮಾರ್, ಸುಂದರ್ ರಾಜನ್ ಹಾಗೂ ಕುಮಾರ್ ಬಂಧಿತ ಆರೋಪಿಗಳು. ಪ್ರವಾಸಿ ತಾಣಗಳಲ್ಲಿ ಕೈಚಳಕ ತೋರುತ್ತಿದ್ದರು. ಕಾರು ಚಾಲಕರನ್ನು ಟಾರ್ಗೆಟ್ ಮಾಡಿ ಲ್ಯಾಪ್‌ಟಾಪ್, ಕ್ಯಾಮರಾ, ಮ್ಯೂಸಿಕ್ ಸಿಸ್ಟಂ ಕದ್ದು ಎಸ್ಕೇಪ್ ಆಗುತ್ತಿದ್ದರು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಏಳು ಲ್ಯಾಪ್‌ಟಾಪ್, ಐಪಾಡ್, ಕ್ಯಾಮರಾ, ಐವತ್ತು ಸಾವಿರ ನಗದು ಸೇರಿ ಏಳು ಲಕ್ಷ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.

ಸ್ನೇಹಿತನಿಂದಲೇ ಯುವಕನ ಹತ್ಯೆ:
ಗಾಂಜಾ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಹತ್ಯೆ ಮಾಡಲಾಗಿದೆ. ಮಿನ್ಯುಸ್ ( 18) ಮೃತ ದುರ್ದೈವಿ. ಹಲಸೂರು ಠಾಣಾ ವ್ಯಾಪ್ತಿಯ ಎಮ್. ವಿ. ಗಾರ್ಡನ್ ನಲ್ಲಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಜತೆ ಜಗಳ ತೆಗೆದಿದ್ದಾನೆ. ಈ ವೇಳೆ ಅಪರೇಷನ್ ಬ್ಲೇಡ್ ನಿಂದ ಕುತ್ತಿಗೆಗೆ ಬಿಗಿದಿದ್ದು, ಗಾಯಗೊಂಡ ಮಿನ್ಯೂಸ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಮರ್ಫಿ ಟೌನ್ ನಲ್ಲಿ ಸಂತೋಷ್ ಎಂಬಾತನ ಜತೆ ಜಗಳ ಮಾಡಿದ್ದ ಮಿನ್ಯೂಸ್ ಇದೇ ವಿಚಾರಕ್ಕೆ ಕೊಲೆಯಾಗಿರಬಹುದು ಶಂಕಿಸಲಾಗಿದೆ. ಹಲಸೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications