Bengaluru Rains: ಜನವರಿ 15ರವರೆಗೆ ನಗರದಲ್ಲಿ ಮಳೆ, ತೀವ್ರ ಚಳಿ ಹವಾಮಾನ ಮುನ್ಸೂಚನೆ
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು ಸೋಮವಾರ (ಜನವರಿ 12) ಸಂಜೆ ನಗರದ ಕೆಲವೆಡೆ ತುಂತುರು ಮಳೆ ಬಂದಿದ್ದು, ಚಳಿ ತೀವ್ರಗೊಂಡಿದೆ. ಮುಂದಿನ ಮೂರು ದಿನ ನಗರದಲ್ಲಿ ಅಲ್ಲಲ್ಲಿ ಹಗುರ ಮಳೆ ನಿರೀಕ್ಷೆ ಇದೆ. ಬೆಳಗ್ಗೆಯಿಂದಲೇ ಹಲವು ಬಡಾವಣೆಗಳಲ್ಲಿ ಮಬ್ಬು ಕವಿಯಲಿದೆ. ತಾಪಮಾನದಲ್ಲಿ ಕೊಂಚ ವ್ಯತ್ಯಾಸವಾಗಿದ್ದು, ತಂಪು ಗಾಳಿ ಬಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತ ಪ್ರಸರಣ ಪ್ರಸರಣದಿಂದಾಗಿ ವಾತಾವರಣದಲ್ಲಿ ದಿಢೀರ್ ಬದಲಾವಣೆಗಳು ಘೋಚರಿಸಿವೆ.
ಸಂಜೆ ನಾಲ್ಕು ಗಂಟೆ ಹೊತ್ತಿಗೆ ನಗರಾದ್ಯಂತ ಮೋಡ ಕವಿದ, ಮಂಜು ಮುಸುಕಿದ ರೀತಿಯ ವಾತಾವರಣ ನಿರ್ಮಾಣವಾಯಿತು. ಕೋರಮಂಗಲ, ಎಚ್‌ಎಸ್‌ಆರ್ ಬಡಾವಣೆ, ಹೆಬ್ಬಾಳ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ, ಡೈರಿ ವೃತ್ತ, ಲಾಲ್ ಬಾಗ್ ಸೇರಿದಂತೆ ಅಲ್ಲಲ್ಲಿ ಸೋನೆ ಮಳೆ ಆಯಿತು. ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಒಂದೆರಡು ದಿನ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಅದಕ್ಕೆ ಪೂರಕವೆಂಬಂತೆ ಇಂದು ಮೊದಲ ದಿನ ಮಳೆ ಆಗಿದೆ.

ನಗರದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯವಾಗಿದ್ದು, ಸಂಜೆ ಬೆಂಗಳೂರು ನಗರದಲ್ಲಿ 18 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋಟ್ (ಕೆಐಎಎಲ್) ಭಾಗದಲ್ಲಿ 17.2 ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ಎಚ್‌ಎಎಲ್‌ನಲ್ಲಿ 17.1ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡು ಬಂದಿದೆ.
ಜನವರಿ 15ರವರೆಗಿನ ಹವಾಮಾನ ಮುನ್ಸೂಚನೆ
ಜನವರಿ 15ರವರೆಗೆ ನಗರದಲ್ಲಿ ಇದೇ ರೀತಿಯ ಮಬ್ಬು ವಾತಾವರಣ ನಿರ್ಮಾಣವಾಗಲಿದೆ. ಬೆಳಗ್ಗೆ ಮತ್ತು ಸಂಜೆ ನಂತರ ಚಳಿ ಪ್ರಮಾಣ ಕೊಂಚ ಹೆಚ್ಚಾಗಲಿದೆ. ಮಧ್ಯಾಹ್ನ ಬಳಿಕ ಹಲವೆಡೆ ಹಗುರ ಮಳೆ ಆಗುವ ಸಾಧ್ಯತೆ ಇದೆ. ಗಮನಿಸಬೇಕಾದ ವಿಷಯವೆಂದರೆ ಕನಿಷ್ಠ ತಾಪಮಾನವು ಸಾಮಾನ್ಯವಾಗಿರಲಿದ್ದು, ಶೀತ ಅಲೆಯ ಯಾವುದೇ ಮುನ್ಸೂಚನೆ ಸದ್ಯಕ್ಕೆ ಇಲ್ಲ ಎಂದು ಹವಾಮಾನ ತಜ್ಞರ ವರದಿ ತಿಳಿಸಿದೆ.
ರಾಜ್ಯದ ಕೆಲವೆಡೆ ಚಳಿ, ಹಗುರ ಮಳೆ
ಬೆಂಗಳೂರಿನ ಗರಿಷ್ಠ ತಾಪಮಾನ ನೋಡುವುದಾದರೆ, 24 ರಿಂದ 26 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುವ ಸಾಧ್ಯತೆ ಇದೆ. ಜನವರಿ 16ರ ನಂತರ ಶುಷ್ಕ ವಾತಾವರಣ ಕಂಡು ಬರುವ ನಿರೀಕ್ಷೆ ಇದೆ. ಇನ್ನೂ ರಾಜ್ಯಾದ್ಯಂತ ಮುಂದಿನ ಮೂರು ದಿನ ಅದರಲ್ಲೂ ಉತ್ತರ ಒಳನಾಡಿನಲ್ಲಿ ಅತ್ಯಧಿಕ ಚಳಿ ಕಂಡು ಬರಲಿದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ದಿಢೀರ್ ಮಳೆಗೆ ಕಾರಣವೇನು?
ತಮಿಳುನಾಡು ಕರಾವಳಿ ಭಾಗದಲ್ಲಿ ಮನ್ನಾರ್ ಕೊಲ್ಲಿಯಲ್ಲಿ ಚಂಡಮಾರುತ ಪ್ರಸರಣ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು ಒಂದು ಕಿಲೋ ಮೀಟರ್ ಎತ್ತರದಲ್ಲಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಂಡರೆ ಹೆಚ್ಚಿನ ಮಳೆ ನಿರೀಕ್ಷಿಸಬಹುದು ಎಂದು ಸೋಮವಾರದ ಐಎಂಡಿ ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications