Bengaluru–Chennai Expressway: ಟೋಲ್ ಇಲ್ಲದೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸಿ
ಎರಡು ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ 288 ಕಿ.ಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯು ಕರ್ನಾಟಕದ ಭಾಗದಲ್ಲಿ ಪೂರ್ಣಗೊಂಡಿರುವ ಹಿನ್ನೆಲೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ಎಕ್ಸ್‌ಪ್ರೆಸ್ ಕಾಮಗಾರಿ ಬೇರೆ ರಾಜ್ಯಗಳಲ್ಲೂ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಚೆನ್ನೈಗೆ ಕೇವಲ ಎರಡೂವರೆ ಗಂಟೆಯಲ್ಲಿ ಪ್ರಯಾಣಿಸಬಹುದು.
288 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ ಪೈಕಿ ಕರ್ನಾಟಕ ಭಾಗದಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಆ ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ. ಈ ವರ್ಷದೊಳಗೆ ಅಲ್ಲಿಯೂ ಈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇದೇ ವರ್ಷವೇ ಬೆಂಗಳೂರಿನಿಂದ ಚೆನ್ನೈಗೆ ಆರಾಮದಾಯಕ ಪ್ರಯಾಣದ ಭಾಗ್ಯ ಸಿಗುವ ಸಾಧ್ಯತೆ ಇದೆ.

ಬೆಂಗಳೂರು ಹಾಗೂ ಚೆನ್ನೈ ನಡುವೆ ಸಿದ್ಧವಾಗುತ್ತಿರುವ 288 ಕಿಲೋಮೀಟರ್ ಹೆದ್ದಾರಿ ಪೈಕಿ ಕರ್ನಾಟಕದಲ್ಲಿ 71 ಕಿ.ಮೀ, ಆಂಧ್ರ ಪ್ರದೇಶದಲ್ಲಿ 72 ಕಿಲೋಮೀಟರ್ ಹಾಗೂ ತಮಿಳುನಾಡಿನಲ್ಲಿ 145 ಕಿಲೋಮೀಟರ್ ದೂರದವರೆಗೆ ಈ ರಸ್ತೆ ಹಾದು ಹೋಗುತ್ತಿದೆ. ಆದರೆ ಕರ್ನಾಟಕದ ಭಾಗದಲ್ಲಿರುವ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡು ಸಂಚಾರಕ್ಕೂ ಮುಕ್ತವಾಗಿದೆ.
ಸದ್ಯ ಆಂಧ್ರಪ್ರದೇಶ, ತಮಿಳುನಾಡು ಭಾಗದಲ್ಲಿ ಕಾಮಗಾರಿ ಮುಗಿದು, ಈ ವರ್ಷಾಂತ್ಯಕ್ಕೆ ಸಂಪೂರ್ಣ ಮಾರ್ಗ ಸಿದ್ಧವಾಗಲಿದೆ. ಆ ಬಳಿಕ ಈ ಎಕ್ಸ್‌ಪ್ರೆಸ್‌ವೇ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು. ನಂತರ ಟೋಲ್ ಸಂಗ್ರಹ ಮಾಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಬೆಂಗಳೂರು ಗ್ರಾಮಾಂತರ ಭಾಗದ ಹೊಸಕೋಟೆ ಬಳಿ ಇರುವ ಇಂಟರ್ ಚೇಂಜ್‌ನಿಂದ ಈ ಎಕ್ಸ್‌ಪ್ರೆಸ್‌ವೇ ಶುರುವಾಗುತ್ತೆ. ಈಗ ಹೊಸಕೋಟೆ ಸ್ಯಾಟಲೈಟ್ ರಿಂಗ್ ರಸ್ತೆಯಿಂದ ಆಂಧ್ರಪ್ರದೇಶದ ಗಡಿಭಾಗವಾದ ಸುಂದರಪಾಳ್ಯದವರೆಗಿನ ಈ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದು, ವಾಹನಗಳು ಸಂಚರಿಸಬಹುದು. ಮಾಲೂರು, ಬಂಗಾರಪೇಟೆ ಹಾಗೂ ಸುಂದರಪಾಳ್ಯದಲ್ಲಿ ಈ ರಸ್ತೆಗೆ ಮೂರು ಇಂಟರ್ ಚೇಂಜ್‌ಗಳು ಕೂಡ ಇದ್ದು, ವಾಹನಗಳು ಗಂಟೆಗೆ 100 ಕಿಲೋಮೀಟರ್ ವೇಗ ಮಿತಿಯಲ್ಲಿ ಸಂಚರಿಸಬಹುದು.
ಸರ್ವೀಸ್ ರಸ್ತೆಗಳಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಸರ್ವೀಸ್ ರಸ್ತೆಗಳನ್ನು ನೀಡಿಲ್ಲ. ಯಾವುದೇ ಅಡಚಣೆಯಿಲ್ಲದೆ ಚೆನ್ನೈವರೆಗೆ ನೆಮ್ಮದಿಯಾಗಿ ಈ ರಸ್ತೆಯಲ್ಲಿ ಪ್ರಯಾಣಿಸಬಹುದು. ಹಾಗಾಗಿ ಬೇರೆ ಹೆದ್ದಾರಿಗಳಿಗೆ ಹೋಲಿಸಿದರೆ ಈ ರಸ್ತೆಯ ಟೋಲ್ ಶುಲ್ಕ ಕೂಡ ಅಧಿಕವಾಗಿರಲಿದೆ ಎಂದು ಹೇಳಲಾಗುತ್ತಿದೆ.

ಈ ಹೆದ್ದಾರಿ ಹಾದು ಹೋಗುವ ಮಾಲೂರು, ಬಂಗಾರಪೇಟೆ, ಬೇತಮಂಗಲ ಭಾಗದಲ್ಲಿ ರಸ್ತೆ ಪ್ರವೇಶಿಸಲು ಹಾಗೂ ನಿರ್ಗಮಿಸಲು ಅವಕಾಶ ಕಲ್ಪಿಸಲಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೈಟೆಕ್ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದೆ. ಹೊಸಕೋಟೆ, ಮಾಲೂರು, ಬಂಗಾರಪೇಟೆ, ಗೋಲ್ಡ್ ಫೀಲ್ಡ್, ಪಲಮನೇರು, ವೆಂಕಟಗಿರಿಕೋಟೆ, ಚಿತ್ತೂರು, ಬಂಗಾರುಪಾಲೆಂ, ರಾಣಿಪೇಟ್, ಶ್ರೀಪೆರಂಬದೂರ್ ಮಾರ್ಗವಾಗಿ ಇದು ಹಾದು ಹೋಗಲಿದೆ. ಸುಮಾರು 17,930 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ.












Click it and Unblock the Notifications