'ಬೆಂಗಳೂರು ಚಲೋ': ರಾಜಧಾನಿಯಲ್ಲಿ ಮೊಳಗಿದ ಅಸಂಘಟಿತ ಕಾರ್ಮಿಕರ ಧ್ವನಿ
ಬೆಂಗಳೂರು, ಸೆಪ್ಟೆಂಬರ್ 4: ಅಸಂಘಟಿತ ಕಾರ್ಮಿಕರ ವಿವಿಧ ಬೇಡಿಕೆಗಳ ಇಡೇರಿಕೆಗೆ ಒತ್ತಾಯಿಸಿ ಸೋಮವಾರ ವಿವಿಧ ವಲಯಗಳು ಕಾರ್ಮಿಕರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಪ್ರತಿಭಟನಾಕಾರರು ರೈಲ್ವೇ ನಿಲ್ದಾಣದಿಂದ ಜಾಥಾ ಹೊರಟು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜಮಾವಣೆಗೊಂಡರು. ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದರು.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಈ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಅಂಗನವಾಡಿ ಕಾರ್ಯಕರ್ತೆಯರೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕೇಂದ್ರ ಸರಕಾರ ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಜಾರಿಗೆ ತರುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಮುಖ್ಯವಾಗಿ ಕಟ್ಟಡ ಕಾರ್ಮಿಕರು, ಗ್ರಾಮ ಪಂಚಾಯಿತಿ ನೌಕರರು, ವಸತಿ ಶಾಲೆಯಲ್ಲಿ ದುಡಿಯುತ್ತಿರುವ ನೌಕರರು, ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರು, ರಾಜ್ಯದ ನಾಲ್ಕೂ ಸಾರಿಗೆ ನಿಗಮ, ಕೈಗಾರಿಕೆ, ಕೃಷಿ, ಗಣಿ, ಬೀಡಿ, ಪ್ಲಾಂಟೇಷನ್ ಕಾರ್ಮಿಕರು ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಕಾರ್ಮಿಕರು ಸರಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟರು. ಹಟ್ಟಿ ಚಿನ್ನದ ಗಣಿ ಕಂಪನಿಯನ್ನು 'ಕರ್ನಾಟಕ ರಾಜ್ಯ ಗಣಿಗಾರಿಕೆ ನಿಗಮ'ವನ್ನಾಗಿ ಪರಿವರ್ತಿಸಿ ಗುರುತಿಸಲಾದ 14 ಬ್ಲಾಕ್‌ಗಳಲ್ಲಿ ಗಣಿಗಾರಿಕೆ ಆರಂಭಿಸಬೇಕು, ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಮೆಟ್ರೋ ರೈಲು ಕಾರ್ಮಿಕರಿಗೆ ಯೂನಿಯನ್ ರಚನೆಗೆ ಅವಕಾಶ ನೀಡಬೇಕು, ಗಲಭೆ ವೇಳೆ ಗಾರ್ಮೆಂಟ್ ಕಾರ್ಮಿಕರ ಮೇಲೆ ಹಾಕಿರುವ ಕ್ರಿಮಿನಲ್ ಕೇಸ್ ಹಿಂಪಡೆಯಬೇಕು, ಕೃಷಿ ಕಾರ್ಮಿಕರಿಗೆ ಭದ್ರತೆ, ವಿಶೇಶ್ವರಯ್ಯ ಕಾರ್ಖಾನೆಗೆ ಅದಿರು ಪೂರೈಸಿ ಪುನಶ್ಚೇತನ, ಮೈಸೂರು ಕಾಗದ ಕಾರ್ಖಾನೆ ಪುನರಾರಂಭ, ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರತಿಭಟನಾಕಾರರು ಮಂಡಿಸಿದ್ದಾರೆ.












Click it and Unblock the Notifications