ಈ 4 ರಾಜ್ಯಗಳ ಪುರುಷರಿಗೆ ಕೆಲಸವಿಲ್ಲ ಎಂದಿದ್ದ ಬೆಂಗಳೂರು CEO ವಿರುದ್ಧ ಪೊಲೀಸ್ ದೂರು

ಬೆಂಗಳೂರು ಮೂಲದ A1 ಸ್ಪೋರ್ಟ್ಸ್ ವರ್ಲ್ಡ್ ಕಂಪನಿಯ ಸಿಇಒ ಕಾರ್ತಿಕ್ ಶೆಣೈ ಅವರ ವಿವಾದಾತ್ಮಕ ಹೈರಿಂಗ್‌ ಪೊಲಿಸಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಪುರುಷರಿಗೆ ತಮ್ಮ ಕಂಪನಿಯಲ್ಲಿ ಇನ್ನುಮುಂದೆ ಉದ್ಯೋಗ ನೀಡುವುದಿಲ್ಲ ಎಂದು ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಈ ಹೇಳಿಕೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೆಹಲಿ ಹೈಕೋರ್ಟ್ ವಕೀಲೆ ಆಕಾಂಕ್ಷಾ ಸಿಂಗ್ ಅವರು ಸಿಇಒ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

Bengaluru CEO Faces Police Complaint Against His Controversial Hiring Policy Banning Men from 4 States

ಸೆಪ್ಟೆಂಬರ್ 22ರಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಕಾರ್ತಿಕ್ ಶೆಣೈ, ಉತ್ತರ ಭಾರತದ ನಾಲ್ಕು ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಯಾವುದೇ ಪುರುಷ ಅಭ್ಯರ್ಥಿಗಳನ್ನ ತಮ್ಮ ಕಂಪನಿಗೆ ನೇಮಿಸಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದರು.

ಕಂಪನಿಯೊಳಗೆ ನಡೆದ ಸುದೀರ್ಘ ಚರ್ಚೆ ಹಾಗೂ ವಾದ-ವಿವಾದಗಳ ಬಳಿಕ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಈ ನಿರ್ಧಾರ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಭ್ಯರ್ಥಿಗಳ ಹುಟ್ಟೂರು ಹಾಗೂ ಲಿಂಗದ ಆಧಾರದ ಮೇಲೆ ಉದ್ಯೋಗವನ್ನ ನಿರಾಕರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.

ದೂರು ದಾಖಲಿಸಿದ ವಕೀಲೆ

ಸಿಇಒ ಅವರ ಈ ಪೋಸ್ಟ್ ವಿರುದ್ಧ ಇದೀಗ ದೆಹಲಿ ಹೈಕೋರ್ಟ್‌ನಲ್ಲಿ ವಕೀಲೆಯಾಗಿರುವ ಆಕಾಂಕ್ಷಾ ಸಿಂಗ್ ಅವರು ದೂರು ನೀಡಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾಗಿರುವ ಆಕಾಂಕ್ಷಾ, ಸಾಮಾನ್ಯ ನಾಗರಿಕಳಾಗಿ ಹಾಗೂ ವಕೀಲೆಯಾಗಿ ಈ ದೂರು ದಾಖಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಕಾರ್ತಿಕ್ ಶೆಣೈ ಅವರ ಹೇಳಿಕೆಯು ಈ ನಾಲ್ಕು ರಾಜ್ಯಗಳ ಜನರ ಬಗ್ಗೆ ದ್ವೇಷ, ಭಯ ಮತ್ತು ತಾರತಮ್ಯವನ್ನು ಉತ್ತೇಜಿಸುವಂತಿದೆ. ಇಂತಹ ಹೇಳಿಕೆಗಳು ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನಿಸುತ್ತವೆ. ಆದ್ದರಿಂದ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಸಿಇಒ ಕಾರ್ತಿಕ್ ಶೆಣೈ ಅವರ ಸಮರ್ಥನೆ ಏನು?

ತಮ್ಮ ನಿರ್ಧಾರಕ್ಕೆ ವ್ಯಕ್ತವಾದ ಟೀಕೆಗಳ ಬಳಿಕ ಕಾರ್ತಿಕ್ ಶೆಣೈ ಮತ್ತೊಂದು ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದರು. ಈ ಹಿಂದೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ನಾಲ್ಕು ರಾಜ್ಯಗಳ ಪೈಕಿ ಒಂದಕ್ಕೆ ಸೇರಿದ ಪುರುಷ ಉದ್ಯೋಗಿಯೊಬ್ಬ, ಕಂಪನಿಯ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದ. ಎರಡು ಬಾರಿ ಎಚ್ಚರಿಕೆ ನೀಡಿದರೂ ಆತನ ನಡವಳಿಕೆ ಬದಲಾಗಿರಲಿಲ್ಲ. ಆತ ಮಹಿಳಾ ಸಹೋದ್ಯೋಗಿಯ ಮೇಲೆ ದೈಹಿಕ ದೌರ್ಜನ್ಯಕ್ಕೂ ಯತ್ನಿಸಿದ್ದ.

ನಮ್ಮ ಕಂಪನಿಯು ಸಣ್ಣ ಮಕ್ಕಳ ಜೊತೆಯೂ ಕೆಲಸ ಮಾಡುವುದರಿಂದ, ಇಂತಹ ಮನಸ್ಥಿತಿ ಹೊಂದಿರುವ ಪುರುಷರಿಗೆ ಉದ್ಯೋಗ ನೀಡುವುದು ಅಪಾಯಕಾರಿ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದರು.

ಅಲ್ಲದೆ, ತಮ್ಮ ಕಂಪನಿಯಲ್ಲಿರುವ 32 ಉದ್ಯೋಗಿಗಳಲ್ಲಿ 14 ಮಂದಿ ಮಹಿಳೆಯರಿದ್ದು, 20 ಮಂದಿ ದಕ್ಷಿಣ ಭಾರತದ ಹೊರಗಿನ ರಾಜ್ಯದವರೇ ಆಗಿದ್ದಾರೆ ಎಂಬ ಅಂಕಿ-ಅಂಶವನ್ನೂ ನೀಡಿದ್ದರು.

ಉದ್ಯೋಗ ತಾರತಮ್ಯದ ಬಗ್ಗೆ ಭಾರಿ ಚರ್ಚೆ

ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ರಾಜ್ಯದ ಪುರುಷರನ್ನ ದೂಷಿಸುವುದು ಮತ್ತು ಅವರಿಗೆ ಏಕಾಏಕಿ ಉದ್ಯೋಗ ನಿರಾಕರಿಸುವುದು ತಾರತಮ್ಯದ ಪರಮಾವಧಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿಯಲ್ಲಿ ಮಹಿಳೆಯರ ಸುರಕ್ಷತೆ ಅತಿ ಮುಖ್ಯವಾದರೂ, ಯಾವುದೇ ಅಭ್ಯರ್ಥಿಯನ್ನ ನೇಮಿಸಿಕೊಳ್ಳುವಾಗ ಅವರ ವೈಯಕ್ತಿಕ ಹಿನ್ನೆಲೆ, ನಡವಳಿಕೆ ಮತ್ತು ಅರ್ಹತೆಯನ್ನು ಪರೀಕ್ಷಿಸಬೇಕೇ ಹೊರತು, ಅವರು ಯಾವ ರಾಜ್ಯದಿಂದ ಬಂದಿದ್ದಾರೆ ಎಂಬುದನ್ನಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

ಸದ್ಯ ಈ ಪ್ರಕರಣವು ಉದ್ಯೋಗ ಸ್ಥಳದಲ್ಲಿ ಮಹಿಳಾ ಸುರಕ್ಷತೆ ಮತ್ತು ಪ್ರಾದೇಶಿಕ ತಾರತಮ್ಯದ ನಡುವಿನ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+