ಬೆಂಗಳೂರು : ಉದ್ಯಮಿ ಮೇಲೆ ಗುಂಡಿನ ದಾಳಿ, ಶಾರ್ಪ್ ಶೂಟರ್ ಬಂಧನ
ಬೆಂಗಳೂರು, ಜುಲೈ 01 : ಬೆಂಗಳೂರಿನಲ್ಲಿ ನಡೆದಿದ್ದ ಉದ್ಯಮಿ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಾರ್ಪ್ ಶೂಟರ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಜೂನ್ 2ರಂದು ಉದ್ಯಮಿ ಮೇಲೆ ಗುಂಡಿನ ದಾಳಿ ನಡೆದಿತ್ತು.
ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭೂತಿ ಕುಮಾರ್ ಸಿಂಗ್(58), ಸುರಾಜ್ ಭಾನುಸಿಂಗ್(26), ರಾಜೇಂದ್ರ ಅಗರ್‌ವಾಲ್ ಅವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ರಾಜೇಂದ್ರ ಅಗರ್‌ವಾಲ್ ಕನ್ನಯ್ಯ ಲಾಲ್ ಕೊಲೆಗೆ ಸುಪಾರಿ ನೀಡಿದ್ದರು.
ಉದ್ಯಮದ ವೈಶಮ್ಯ : ಕನ್ನಯ್ಯ ಲಾಲ್ ಬೆಂಗಳೂರಿನಲ್ಲಿದ್ದರೂ ಬಿಹಾರದಲ್ಲಿ ಮುಸುಕಿನ ಜೋಳ ಮತ್ತು ಪಾಪ್ ಕಾರ್ನ್ ವ್ಯವಹಾರ ನಡೆಸುತ್ತಿದ್ದರು. ರಾಜೇಂದ್ರ ಅಗರ್‌ವಾಲ್ ಪಾಪ್ ಕಾರ್ನ್ ಉದ್ಯಮವನ್ನು ಬಿಟ್ಟುಕೊಡುವಂತೆ ಕನ್ನಯ್ಯ ಲಾಲ್‌ಗೆ ಸೂಚಿಸಿದ್ದರು.

ಆದರೆ, ಕನ್ನಯ್ಯ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಅವರನ್ನು ಹತ್ಯೆ ಮಾಡಲು ರಾಜೇಂದ್ರ ಅಗರ್‌ವಾಲ್ ವಿಭೂತಿ ಕುಮಾರ್‌ಗೆ ಸುಪಾರಿ ನೀಡಿದ್ದರು. ವಿಭೂತಿ ಕುಮಾರ್ ಸಿಂಗ್, ಸುರಾಜ್ ಭಾನುಸಿಂಗ್ ಜೊತೆ ಸೇರಿ ಕನ್ನಯ್ಯ ಹತ್ಯೆಗೆ ಬೆಂಗಳೂರಿಗೆ ಆಗಮಿಸಿದ್ದರು.
ಜೂನ್ 2ರಂದು ಕೋರಮಂಗಲದ ಆರ್ಕೇಡ್‌ನಲ್ಲಿ ಕನ್ನಯ್ಯ ಮೇಲೆ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದರು. ಆದರೆ, ಅಂದು ಅಲ್ಲಿ ಭಾರೀ ಜನರು ಇದ್ದ ಕಾರಣ ಗುಂಡು ಗುರಿತಪ್ಪಿತ್ತು. ಗುಂಡಿನ ದಾಳಿಯಿಂದ ಕನ್ನಯ್ಯ ಗಾಯಗೊಂಡಿದ್ದರು.
ದೂರು ನೀಡಿದ್ದರು : ಬೆಂಗಳೂರಿನಲ್ಲಿ ನೆಲೆಸಿದ್ದ ಕನ್ನಯ್ಯ ಲಾಲ್ ತಮಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ಎರಡು ತಿಂಗಳ ಹಿಂದೆ ದೂರು ನೀಡಿದ್ದರು. ಆದರೆ, ಪೊಲೀಸರು ಕ್ರಮ ಕೈಗೊಳ್ಳುವ ಮೊದಲೇ ಗುಂಡಿನ ದಾಳಿ ನಡೆದಿತ್ತು.












Click it and Unblock the Notifications