Bengaluru Bus Accident: ಹೃದಯವಿದ್ರಾವಕ ಘಟನೆ: ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಇಬ್ಬರು ಪುಟಾಣಿ ಮಕ್ಕಳ ಸಾವು, ವಿಡಿಯೋ ವೈರಲ್
ಬೆಂಗಳೂರು: ಬೆಂಗಳೂರಿನಲ್ಲಿ ಪುಟಾಣಿ ಮಕ್ಕಳಿಬ್ಬರು ಖಾಸಗಿ ಶಾಲೆಯ ಬಸ್ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಸಂಭವಿಸಿರುವ ಈ ಭೀಕರ ಬಸ್ ಅಪಘಾತದ ದೃಶ್ಯಗಳಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಲ್ಲು ಹೃದಯವನ್ನೂ ಕರಗಿಸುವಂತೆ ಇದೆ. ಘಟನೆಯ ಹಿನ್ನೆಲೆಯ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಫೆಬ್ರವರಿ 11ರಂದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪುಟಾಣಿ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖಾಸಗಿ ಶಾಲೆಯೊಂದರ ಬಸ್ ಹರಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಹೆಣ್ಣೂರು ಸಂಚಾರ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಗರದ ಸಿಎಆರ್ ವಿಭಾಗದ ಕಾನ್ಸ್‌ಟೇಬಲ್ ನಾಗನಗೌಡ ಅವರ ಇಬ್ಬರು ಮಕ್ಕಳಾದ ವರ್ಷ (2), ಭಾನು (4) ಮೃತ ಮಕ್ಕಳು.

ಘಟನೆಯ ಹಿನ್ನೆಲೆ ಏನು ?
ನಗರದ ಸಿಎಆರ್ ವಿಭಾಗದ ಕಾನ್ಸ್‌ಟೇಬಲ್ ನಾಗನಗೌಡ ಅವರು ತಮ್ಮ ಇಬ್ಬರು ಮಕ್ಕಳನ್ನು ಎಂದಿಂತೆ ಬುಧವಾರ ಬೆಳಿಗ್ಗೆ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಅವರು ಹಾಲು ತರುವುದಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಥಣಿಸಂದ್ರದ ಮುಖ್ಯರಸ್ತೆಯ ಮುಂಭಾಗದಲ್ಲಿ ಎದುರುಗಡೆಯಿಂದ ಬಂದ ಖಾಸಗಿ ಶಾಲೆಯ ಬಸ್ ಏಕಾಏಕಿ ತಿರುವು ತೆಗೆದುಕೊಂಡಿದೆ. ಈ ವೇಳೆ ಸ್ಕೂಟರ್‌ನ ಮೇಲೆ ಬಸ್ ಚಕ್ರ ಹರಿದಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲು; ಆರೋಪಿ ಬಂಧನ
ಮಕ್ಕಳಾದ ವರ್ಷ ಹಾಗೂ ಭಾನು ಅವರ ಸಾವು ಹಾಗೂ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ಸಂಚಾರ ಪೊಲೀಸರು ಮಹಜರು ನಡೆಸಿದ್ದು, ಶಾಲೆಯ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಅಪಘಾತಕ್ಕೆ ಬಸ್ ಚಾಲಕನ ಅಜಾಗರೂಕ ಚಾಲನೆಯೇ ಕಾರಣ ಎಂದು ಪ್ರಾಥಮಿಕವಾಗಿ ಹೇಳಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ ?
ಇನ್ನು ಈ ಅಪಘಾತದ ದೃಶ್ಯಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಗನಗೌಡ ಅವರು ಶಾಲಾ ಬಸ್ ಬರುವುದನ್ನು ನೋಡಿ ಗಾಡಿ ನಿಲ್ಲಿಸಿದ್ದಾರೆ. ಬಸ್ ತಿರುವು ಪಡೆದುಕೊಳ್ಳಲಿ ಎಂದು ಕಾಯುವುದು ವೈರಲ್ ಆಗಿರುವ ವಿಡಿಯೋದಲ್ಲಿ ಇದೆ. ಆದರೆ ಬಸ್ ಚಾಲಕ ತಿರುವು ಪಡೆದುಕೊಳ್ಳುವುದಕ್ಕೆ ವಿಶಾಲವಾದ ಜಾಗವಿದ್ದರೂ, ಸಹ ಆ ಭಾಗದಲ್ಲಿ ತಿರುವು ಪಡೆದುಕೊಳ್ಳದೆ ಅಪಘಾತ ಮಾಡಿರುವುದು ವೈರಲ್ ವಿಡಿಯೋದಲ್ಲಿ ಇದೆ.
ಸಾರ್ವಜನಿಕರಿಂದ ತೀವ್ರ ಆಕ್ಷೇಪ
ಇನ್ನು ಈ ಪ್ರಕರಣಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಬಸ್ ಚಾಲಕ ಕುಡಿದು ವಾಹನ ಚಲಾಯಿಸಿರುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications