₹3,000 ಕೋಟಿ ಬಫರ್ ರಸ್ತೆ ಯೋಜನೆಗೆ ಹಿನ್ನಡೆ! 425 ಕಿಮೀ ಪೈಕಿ ಬರೀ 10 ಕಿಮಿ ರಸ್ತೆ; ವಿಪಕ್ಷ ನಾಯಕ
ಬೆಂಗಳೂರು: ಬೆಂಗಳೂರು ಟ್ರಾಫಿಕ್ ನಿಯಂತ್ರಣ, ಪರ್ಯಾಯ ಮಾರ್ಗ ಹಾಗೂ ಇನ್ನಿತರ ಸದುದ್ದೇಶಗಳಿಂದ 3000 ಕೋಟಿ ರೂ. ವೆಚ್ಚದಲ್ಲಿ ಘೋಷಣೆ ಆಗಿದ್ದ 425 ಕಿ.ಮೀ ಬಫರ್ ರಸ್ತೆ ಯೋಜನೆ ಕುಂಟುತ್ತಿದೆ. ಶೇ.5ರಷ್ಟು ಕೆಲಸವು ಆಗಿಲ್ಲ. 'ಬ್ರ್ಯಾಂಡ್ ಬೆಂಗಳೂರು' ಉಪಕ್ರಮದಡಿ ಸರ್ಕಾರ ಕೈಗೊಂಡ ಯೋಜನೆಗೆ ಹಿನ್ನಡೆ ಆಗಿದೆ ಎಂಬ ದೂರುಗಳು ಕೇಳಿ ಬಂದಿವೆ.
ಇದೇ ವಿಚಾರವಾಗಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, 'ರಾಜ್ಯ ಸರ್ಕಾರ ಹೇಳಿದ್ದು 425 ಕಿ.ಮೀ. ರಸ್ತೆ ಮಾಡಿದ್ದು ಕೇವಲ 10 ಕಿ.ಮೀ. ರಸ್ತೆ. ಇದು ರಸ್ತೆಯಲ್ಲ, ಕಾಂಗ್ರೆಸ್ ಆಡಳಿತದ ಅವ್ಯವಸ್ಥೆ' ಕಿಡಿ ಕಾರಿದ್ದಾರೆ.

ಮುಂದುವರಿದು, 'ಈ ಸರ್ಕಾರ ಬೆಂಗಳೂರಿನ ಜನರಿಗೆ ಸುಗಮ ಸಂಚಾರದ ಭರವಸೆ ನೀಡಿ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರದ ಅಭಿವೃದ್ಧಿಯ ವೇಗ ಎಷ್ಟಿದೆ ಎಂಬುದಕ್ಕೆ ಬಫರ್ ರಸ್ತೆ ಯೋಜನೆಯೇ ಸಾಕ್ಷಿ!' ಎಂದು ಟೀಕಿಸಿದರು.
ವರ್ಷದ ಹಿಂದೆ ಘೋಷಣೆ ಆಗಿದ್ದ ಯೋಜನೆ
2025-26ನೇ ಸಾಲಿನ ಬಜೆಟ್‌ನಲ್ಲಿ 3,000 ಕೋಟಿ ವೆಚ್ಚದಲ್ಲಿ 425 ಕಿ.ಮೀ. ಉದ್ದದ ಬಫರ್ ರಸ್ತೆ ನಿರ್ಮಿಸುವುದಾಗಿ ಘೋಷಿಸಿದ್ದೀರಿ. ಆದರೆ, ಮೊದಲ ಹಂತದ ಕಾಮಗಾರಿಯಲ್ಲೇ ನಿಮ್ಮ ಸರ್ಕಾರದ ಆಡಳಿತ ವೈಫಲ್ಯ ಬಯಲಾಗಿದೆ. ಯೋಜನೆ ಪೈಕಿ ಮೊದಲ ಹಂತದಲ್ಲಿ ₹200 ಕೋಟಿ ವೆಚ್ಚದಲ್ಲಿ 67.69 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ ಮಾಡಲಾಗಿದೆ. ಸುಮಾರು ಏಳು ಟೆಂಡರ್ ಗಳು ಅಂತಿಮವಾಗಿ ಕಾರ್ಯಾದೇಶ ನೀಡಿ ತಿಂಗಳುಗಳು ಕಳೆದಿವೆ. ಆದರೆ ವಾಸ್ತವದಲ್ಲಿ ಕೆಲಸವೇ ಆಗಿಲ್ಲ.
ಮೊಲದ ಹಂತ ಯೋಜನೆ ಆರಂಭವಾಗಿ ಹಲವು ತಿಂಗಳು ಕಳೆದರೂ ಕೇವಲ 10 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಕಾಮಗಾರಿ ಆರಂಭವಾಗಿದೆ. ಜಾಗದ ಲಭ್ಯತೆ ಇದ್ದರೂ, ವಿಂಡ್ ಟನಲ್ ರಸ್ತೆಯಲ್ಲಿ HAL ಸಂಸ್ಥೆಯಿಂದಲೇ 51,367.29 ಚದರ ಮೀಟರ್ ಜಾಗ ಹಸ್ತಾಂತರವಾದರೂ ಕಾಮಗಾರಿ ಆರಂಭಿಸಲು ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅವರು ದೂರಿದರು.
ಹೆಚ್ಚುತ್ತಿರುವ ಟ್ರಾಫಿಕ್, ಯೋಜನೆಗಳ ಅನುಷ್ಠಾನವಿಲ್ಲ!
ಇತ್ತ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.50 ಕೋಟಿ ದಾಟಿದೆ. ಪ್ರತಿದಿನ 2,700ಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಸಂಚಾರ ದಟ್ಟಣೆ, ಪ್ರವಾಹ, ರಸ್ತೆ ಸಂಪರ್ಕದ ಸಮಸ್ಯೆಗಳಿಂದ ಜನರು ನಿತ್ಯ ಪರದಾಡುತ್ತಿದ್ದಾರೆ. ಆದರೆ ನಿಮ್ಮ ಸರ್ಕಾರ ಮಾತ್ರ ಘೋಷಣೆಗಳಲ್ಲೇ ಕಾಲ ಕಳೆಯುತ್ತಿದೆ. ಹಣವಿಲ್ಲ, ಅಭಿವೃದ್ಧಿಯಿಲ್ಲ, ಯೋಜನೆಗಳ ಅನುಷ್ಠಾನವಿಲ್ಲ! ಕಾಂಗ್ರೆಸ್ ಸರ್ಕಾರಕ್ಕೆ ಪ್ರಚಾರವೇ ಆದ್ಯತೆ, ಜನರ ಸಮಸ್ಯೆಗಳಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ ಎಂದು ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚುವುದನ್ನು ನಿಲ್ಲಿಸಿ. ಘೋಷಣೆ ಮಾಡಿದ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವ ತಾಕತ್ತಿಲ್ಲದಿದ್ದರೆ, ಮತ್ತಷ್ಟು ಸುಳ್ಳು ಭರವಸೆಗಳನ್ನು ನೀಡುವುದಾದರೂ ಏಕೆ?.
ಘೋಷಣೆ ಮಾತ್ರ ಇದೆ, ಯೋಜನೆ ಜಾರಿಯಿಲ್ಲ; ಪ್ರಚಾರ ಮಾತ್ರ ಇದೆ, ಅಭಿವೃದ್ಧಿಯಿಲ್ಲ ಎಂಬಂತಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತಿದೆ. ಬೆಂಗಳೂರಿನ ಜನರಿಗೆ ಉತ್ತರ ಕೊಡಿ ಮುಖ್ಯಮಂತ್ರಿಗಳೇ ಎಂದು ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಯೋಜನೆ ಘೋಷಣೆ ಆಗಿದ್ದೇಕೆ?
ನಗರದ ಕೆರೆ ಹಾಗೂ ರಾಜಕಾಲುವ ಬಫರ್ ಜಾಗದಲ್ಲಿ ರಸ್ತೆ ನಿರ್ಮಿಸಿದರೆ ವಾಹನಗಳಿಗೆ ಹೆಚ್ಚುವರಿ ರಸ್ತೆ ಸಿಕ್ಕಂತಾಗುತ್ತದೆ. ದಟ್ಟಣೆ ವೇಳೆ ಅನುಕೂಲವಾಗುವ ಜೊತೆಗೆ ಬಫರ್ ಪ್ರದೇಶ ಒತ್ತುವರಿ, ಅನಗತ್ಯ ಅತಿಕ್ರಮಣ, ನಿರ್ಮಾಣಗಳು ತಪ್ಪಲಿವೆ. ಪ್ರವಾಹ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಳೆ ನೀರು ಅಡ್ಡಿಯಾಗದಂತೆ ರಾಜಕಾಲುವೆ ಅಭಿವೃದ್ಧಿಗೊಳಿಸುವುದು ಸೇರಿದಂತೆ ಹಲವು ಮಹತ್ತರ ಉದ್ದೇಶಗಳಿಗೆ ಈ 425 ಕಿ.ಮೀ. ಬಫರ್ ರಸ್ತೆ ನಿರ್ಮಾಣ ಘೋಷಿಸಲಾಗಿತ್ತು. ಆದರೆ ನಿರೀಕ್ಷೆಯಂತೆ ಕಾಮಗಾರಿ ವೇಗ ಪಡೆದಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.


Click it and Unblock the Notifications
