Bengaluru Rain: 2015ರ ಬಳಿಕ ಮೊದಲ ಬಾರಿಗೆ ಹೊಸ ದಾಖಲೆ ಬರೆದ ಬೆಂಗಳೂರು ಮಳೆ
ಮುಂಗಾರು ಸಂಪೂರ್ಣವಾಗಿ ಕೈಕೊಟ್ಟ ಬಳಿಕ ಹಿಂಗಾರು ಕೃಪೆ ತೋರುತ್ತಿದೆ. ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು ಇಡೀ ನಗರ ತಂಪಾಗಿದೆ. ಇನ್ನು ಸೋಮವಾರ ರಾತ್ರಿ ನಗರದಲ್ಲಿ ಸುರಿದ ಮಳೆ ಹೊಸ ದಾಖಲೆ ಬರೆದಿದೆ.
2015ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ನಗರ ನವೆಂಬರ್ ತಿಂಗಳ ಅತ್ಯಂತ ತೇವವಾದ ದಿನವನ್ನು ಕಂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಯ ಅಂಕಿಅಂಶಗಳ ಪ್ರಕಾರ ಸೋಮವಾರ ರಾತ್ರಿ ನಗರದಲ್ಲಿ 7 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿದೆ.

ಮಂಗಳವಾರ ಕೂಡ ನಗರದಲ್ಲಿ ವ್ಯಾಪಕ ಮಳೆಯಾಗಿದೆ, ಮಂಗಳವಾರ ರಾತ್ರಿ ಕೂಡ ಧಾರಾಕಾರ ಮಳೆಯಾಗಿದ್ದು ಸಂಜೆ ವೇಳೆ 26.1 ಮಿಮೀ ಮಳೆ ದಾಖಲಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರು ಜನತೆ ಕಳೆದ ಎರಡು ದಿನಗಳಿಂದ ಮಳೆಯ ಖುಷಿಯನ್ನು ಅನುಭವಿಸುತ್ತಿದ್ದಾರೆ.
ಹೆಚ್ಚಿನ ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾದ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಸಂಜೆ ವೇಳೆ ಮಳೆ ಸುರಿದ ನಂತರ ಟ್ರಾಫಿಕ್ ಸಮಸ್ಯೆ ಕೂಡ ತೀವ್ರವಾಗಿತ್ತು, ಹಲವು ಕಡೆ ಅಂಡರ್ ಪಾಸ್‌ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿತ್ತು.
ವೇಗ ಪಡೆದುಕೊಂಡ ಈಶಾನ್ಯ ಮಾನ್ಸೂನ್
ಭಾರತದ ಪರ್ಯಾಯ ದ್ವೀಪದ ಮೇಲೆ ಚಲಿಸುವ ಮತ್ತು ಅರಬ್ಬಿ ಸಮುದ್ರದ ಲಕ್ಷದ್ವೀಪದಿಂದ ಬಂಗಾಳ ಕೊಲ್ಲಿಯವರೆಗೂ ವ್ಯಾಪಿಸಿರುವ ಟ್ರಫ್ ಪ್ರಭಾವದಿಂದ ಚಾಲ್ತಿಯಲ್ಲಿರುವ ಈಶಾನ್ಯ ಮಾನ್ಸೂನ್ ವೇಗವನ್ನು ಪಡೆದುಕೊಂಡಿತು, ನಗರದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ. ಯಲಹಂಕದಲ್ಲಿ ಅತಿ ಹೆಚ್ಚು 164 ಮಿಮೀ ಮಳೆಯಾಗಿದ್ದು, ಹಂಪಿನಗರದಲ್ಲಿ 101.5 ಮಿಮೀ ಮಳೆಯಾಗಿದೆ.
ಐಎಂಡಿ ಬೆಂಗಳೂರಿನ ಹಿರಿಯ ವಿಜ್ಞಾನಿ ಎ ಪ್ರಸಾದ್, "ರಾತ್ರಿಯ ಮಳೆಯು ದಾಖಲೆಯಲ್ಲದಿದ್ದರೂ, 2015 ರಿಂದ ಹಿಂದಿನ ಅತ್ಯಂತ ತೇವದ ನವೆಂಬರ್ ದಿನದ ಸಮೀಪಕ್ಕೆ ಬಂದಿದೆ" ಎಂದು ಹೇಳಿದರು. ನವೆಂಬರ್ 4, 2015 ರಂದು ನಗರದಲ್ಲಿ 9 ಸೆಂ.ಮೀ ಮಳೆಯಾಗಿತ್ತು ಎಂದು ಅವರು ಹೇಳಿದರು.
ಈ ಅವಧಿಯಲ್ಲಿ ಸಾಮಾನ್ಯವಾಗಿ 10 ಮಿಮೀ ಮಳೆ ಬೀಳುವ ಬೆಂಗಳೂರು ನಗರದ ಐದು ತಾಲ್ಲೂಕುಗಳಲ್ಲಿ ಸೋಮವಾರ 211.4 ಮಿಮೀ ಮಳೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಮಂಗಳವಾರ ಕೂಡ ಭಾರಿ ಮಳೆಯಾಗಿದ್ದು, ನವೆಂಬರ್ ತಿಂಗಳ ಮಳೆ ಮತ್ತೊಂದು ದಾಖಲೆ ಬರೆಯುವ ಸಾಧ್ಯತೆ ಇದೆ.












Click it and Unblock the Notifications