Bengaluru Rain: ಮಳೆಗೆ ಸೋತ ಬೆಂಗಳೂರು ಬಿಸಿಲು; ಇನ್ನೆರಡು ದಿನ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಬೆಂಗಳೂರು, ಮೇ. 04: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಜನ ಮಳೆ ಮತ್ತು ಮಣ್ಣಿನ ಸುವಾಸನೆಯನ್ನು ಅನುಭವಿಸುತ್ತಿದ್ದಾರೆ. ಮೊನ್ನೆ ಸುರಿದ ಮಳೆ ಬೆಂಗಳೂರಿಗರಲ್ಲಿ ಹೊಸ ಆಸೆ ಹುಟ್ಟಿಸಿದ್ದರೇ ನಿನ್ನೆ ಸುರಿದ ಮಳೆಗೆ ಜನ ಫಿದಾ ಆಗಿದ್ದಾರೆ. ಸುಮಾರು ಆರು ತಿಂಗಳ ಕಾಲ ನಗರದ ಜನರನ್ನು ಹೈರಾಣಾಗಿಸಿದ್ದ ಬಿಸಿಲು ನಿನ್ನೆ ಸೋಲು ಕಂಡಿದೆ.
ಹೌದು... ಬರೋಬ್ಬರಿ ಆರು ತಿಂಗಳ ಕಾಲ ಬೆಂಗಳೂರು ಶುಷ್ಕ ಹವಾಮಾನ ಕಂಡಿದೆ. ಕಳೆದ ಮೂರು ತಿಂಗಳು ಅನುಭವಿಸಲು ಸಾಧ್ಯವಿಲ್ಲದಷ್ಟು ತಾಪಮಾನ ಏರಿಕೆಯಾಗಿದೆ. ಹೀಗಾಗಿ ಜನ ಆಕಾಶದಲ್ಲಿ ಮೋಡಗಳನ್ನು ಹುಡುಕುವುದು ಅಭ್ಯಾಸ ಮಾಡಿಕೊಂಡಿದ್ದರು. ಅದಕ್ಕೆ ತಕ್ಕಂತೆ ಶುಕ್ರವಾರ (ಮೇ 3) ಬಿದ್ದ ಮಳೆಗೆ ಸಿಲಿಕಾನ್ ಸಿಟಿ ಜನ ಫುಲ್ ಖುಷಿಯಾಗಿದ್ದು, ಫ್ಯಾನ್, ಎಸಿ ಕಡಿಮೆ ಮಾಡಿ ನಿದ್ದೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಎರಡನೇ ದಿನ ಲಘುವಾಗಿ ಸಾಧಾರಣ ಮಳೆಯಾಗಿದೆ.

ನಾಯಂಡಹಳ್ಳಿಯಲ್ಲಿ ಅತಿ ಹೆಚ್ಚು ಮಳೆ
ಮೇ 3 ರಶುಕ್ರವಾರ ಮಧ್ಯಾಹ್ನದ ನಂತರ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ. ರಾತ್ರಿ 9.30 ರ ವೇಳೆಗೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವರುಣ ಮಿತ್ರ ಡ್ಯಾಶ್‌ಬೋರ್ಡ್‌ನ ಮಾಹಿತಿ ಹಂಚಿಕೊಂಡಿದೆ.
ಈ ಮಾಹಿತಿ ಪ್ರಕಾರ ನಗರದ ನಾಯಂಡಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 29.5 ಮಿಮೀ ಮಳೆಯಾಗಿದೆ. ರಾಜರಾಜೇಶ್ವರಿ ನಗರದಲ್ಲಿ 29 ಮಿಮೀ ಮಳೆಯಾಗಿದೆ. ನಗರದ ಇತರ 25 ವಾರ್ಡ್‌ಗಳಲ್ಲಿ 10 ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿದೆ. ನಿನ್ನೆ ಬಿದ್ದ ಮಳೆ ಬೆಂಗಳೂರಿನ ಸುಡು ಬೇಸಿಗೆಯ ಬಿಸಿಯಿಂದ ವಿರಾಮ ನೀಡಿದೆ.

ಮಳೆ ಬಂದರೂ ಕಡಿಮೆಯಾಗಿಲ್ಲ ತಾಪಮಾನ!
ಎರಡು ದಿನಗಳಿಂದ ನಗರದಲ್ಲಿ ಮಳೆ ಬರುತ್ತಿದ್ದರೂ ಕೂಡ ತಾಪಮಾನ ಕಡಿಮೆಯಾಗಿಲ್ಲ. ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಇದು ನಗರದಲ್ಲಿ ಸರಾಸರಿ ಮೇ ತಾಪಮಾನಕ್ಕಿಂತ ಸುಮಾರು ನಾಲ್ಕು ಡಿಗ್ರಿ ಹೆಚ್ಚಾಗಿದೆ. ಇದಕ್ಕೆ ಕಾರಣ ಮಳೆ ಸಂಜೆ ಅಥವಾ ಮಧ್ಯಾಹ್ನ ಬರುತ್ತಿದ್ದು, ಬೆಳಗ್ಗೆ ಬಿಸಿಲು ಹಾಗೆ ಇದೆ ಎನ್ನುವುದು.
"ಮಳೆಯು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆಯ ಸಮಯದಲ್ಲಿ ಪ್ರಾರಂಭವಾಗುವುದರಿಂದ, ನಗರದಲ್ಲಿ ಇನ್ನೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಆದರೆ, ಈ ಮಳೆಯಿಂದಾಗಿ ರಾತ್ರಿಯ ಕನಿಷ್ಠ ತಾಪಮಾನ ಸ್ವಲ್ಪ ಕಡಿಮೆಯಾಗಬಹುದು" ಎಂದು ಹಿರಿಯ ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಮಳೆ
ಇನ್ನು, ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಲಘು ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 38 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ.
ಮೇ 6 ರ ನಂತರ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡುತ್ತಿದ್ದು, ಇದರಿಂದ ನಗರದಲ್ಲಿ ತಾಪಮಾನವು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ಹೆಚ್ಚು ಮಳೆಯಾಗುತ್ತದೆ ಎಂದು ಈ ಹಿಂದೆಯೂ ಇಲಾಖೆ ತಿಳಿಸಿತ್ತು. ಸದ್ಯದ ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿದರೆ, ಮೇ ತಿಂಗಳಲ್ಲಿ ಹೆಚ್ಚಿನ ದಿನಗಳು ಮಳೆಯಾಗುವ ನಿರೀಕ್ಷೆಯಿದೆ.












Click it and Unblock the Notifications