ಬೆಂಗಳೂರಲ್ಲಿ ಆಟೋ ಮಿನಿಮಮ್ ಚಾರ್ಜ್ ₹100! ಮೆಜೆಸ್ಟಿಕ್ to ಮಲ್ಲಿಗೆ ಆಸ್ಪತ್ರೆಗೆ ಬರಲು ₹120...
ಬೆಂಗಳೂರು, ಜುಲೈ 09: ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಡೆಯುತ್ತಿರುವ ದಂಡ ಹೇರಿಕೆ ಕ್ರಮಗಳ ಹೊರತಾಗಿಯು ಆಟೋ ಚಾಲಕರು ಮನಬಂದ ದರ ಪಡೆಯುತ್ತಿದ್ದಾರೆ. ಸರ್ಕಾರ ನಿಗದಿ ಮಾಡಿದ ದರಕ್ಕಿಂತಲೂ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಮುಂದುವರಿದಿದೆ. ಕೆಲವು ಆಟೋ ಚಾಲಕರು ಕೇಳುವ ಪ್ರಯಾಣ ದರಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಇಂತದ್ದೆ ಮತ್ತೊಂದು ಪ್ರಕರಣ ಇತ್ತೀಚೆಗೆ ನಡೆದಿದ್ದು, ಅದರ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಭಾರೀ ಜನಾಕ್ರೋಶ ವ್ಯಕ್ತವಾಗಿದೆ.
ಆಟೋ ಚಾಲಕರ ಬಹುದಿನಗಳ ಪ್ರಯಾಣ ದರ ಏರಿಕೆಗೆ ಇತ್ತೀಚೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಆಟೋ ಕನಿಷ್ಠ ದರವನ್ನು 30ರಿಂದ 36 ರೂಪಾಯಿಗೆ ಹಾಗೂ ಪ್ರತಿ ಕಿಲೋ ಮೀಟರ್ ದರವನ್ನು 18 ರೂಪಾಯಿಗೆ ಏರಿಕೆ ಮಾಡುವ ಆಟೋ ಚಾಲಕ ಪ್ರಸ್ತಾವನೆಗೆ ಒಪ್ಪಿದ್ದಾರೆ. ಇದರ ಬೆನ್ನಲ್ಲೆ ಕಾನೂನು ಬಾಹಿರ ಆಟೋಗಳ ಸಂಚಾರಕ್ಕೆ ಕಡಿಹಾನ ಹಾಕಲಾಗುತ್ತಿದೆ. ಹೀಗಿದ್ದರೂ ಅಂಜದೇ, ಕಾನೂನಿನ ಭಯವಿಲ್ಲದೇ ಮೂರು ಪಟ್ಟು ಹೆಚ್ಚಿನ ಹಣ ವಸೂಲಿಗೆ ಮುಂದಾಗಿರುವುದು ಪತ್ತೆ ಆಗಿದೆ.

ಮಿನಿಮಮ್ ಚಾರ್ಜೇ 100 ರೂಪಾಯಿ ಇದೆ: ಚಾಲಕ
ವೈರಲ್ ಆದ ವಿಡಿಯೋದಲ್ಲಿ, ''ಮೆಜೆಸ್ಟಿಕ್‌ನಿಂದ ರೇಸ್‌ಕೋರ್ಸ್ ರಸ್ತೆಯಲ್ಲಿನ ಮಲ್ಲಿಗೆ ಆಸ್ಪತ್ರೆಗೆ ಬರುವಂತೆ ಪ್ರಯಾಣಿಕರೊಬ್ಬರು ಆಟೋ ಚಾಲಕನನ್ನು ಕೇಳುತ್ತಾರೆ. ಅದಕ್ಕೆ ಚಾಲಕ 100 ರೂಪಾಯಿ ಕೊಡಿ. ಲೋಕಲ್ ಎಲ್ಲೆ ಬಂದರೂ 100 ರೂಪಾಯಿ ಇರೋದು. ಎಲ್ಲರು ಇಲ್ಲಿಗೆ ಬಂದು ಬೀಳ್ತಾರೆ. ಬೇಕಾದ್ರೆ ನೀನೇ ನೋಡು, ಮೆಜೆಸ್ಟಿಕ್‌ನಿಂದ ರೈಲ್ವೆ ಸ್ಟೇಷನ್‌ಗೆ ಹೋದ್ರು, ಚಿಕ್ಕಪೇಟೆಗೆ ಹೋದ್ರು 100 ರೂಪಾಯಿ ಇದೆ. ಮಲ್ಲಿಗೆ ಆಸ್ಪತ್ರೆಗೆ ಬರಲು 120 ರೂಪಾಯಿ'' ಎಂದು ಹೇಳುವ ವಿಡಿಯೋ ವೈರಲ್ ಆಗಿದೆ.
''30 ರೂಪಾಯಿಗೆ ಯಾರು ಬರಲ್ಲ. ನೀವು ನಡೆದುಕೊಂಡು ಹೋದ್ರೆ ಇಲ್ಲೇ ಸಮೀಪವೇ ಇದೆ. ಆದರೆ ಆಟೋ ರಸ್ತೆ ಮೂಲಕ ಬರಬೇಕಲ್ಲ. ಹೀಗಾಗಿ 100 ರೂಪಾಯಿ. ನೀನೆಷ್ಟು ಕೊಡ್ತಿಯಾ 20 ರೂಪಾಯಿಯಾ?'' ಎಂದು ಪ್ರಯಾಣಿಕನಿಗೆ ಏಕವಚನದಲ್ಲಿ ಚಾಲಕ ಮಾತನಾಡಿದ್ದಾನೆ.

ಆ ಪ್ರಯಾಣಿಕ ಇಲ್ಲಿ ಮಿನಿಮಮ್ ಚಾರ್ಜ್ 100 ರೂಪಾಯಿ ಅಂತ ಕೇಳಿದ್ದಕ್ಕೆ ಹೌದು ಎಂದು ಚಾಲಕ ಹೇಳುತ್ತಾನೆ. ಈ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಹಾಗೂ RTO ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಮೆಜೆಸ್ಟಿಕ್ ಕಡೆಗೆ ಹೋಗಿ ಇಂತಹ ಆಟೋಗಳ ಮೇಲೆ ದಾಳಿ ಮಾಡಿ ಎಂದು ಜನರು ಆಗ್ರಹಿಸಿದ್ದಾರೆ. ಅನೇಕ ಕಾಮೆಂಟ್ ಮಾಡಿದ್ದಾರೆ.
RTO & ಪೊಲೀಸರು ಸುಮ್ಮನಿರುವುದೇಕೆ?
ಆತನ (ಆಟೋ ಚಾಲಕ) ಮಾತುಗಳನ್ನು ಗಮನಿಸಿದರೆ ಆತನಿಗೆ ಸಾರ್ವಜನಿಕರೊಡನೆ ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಜ್ಞಾನವೇ ಇಲ್ಲದಂತೆ ತೋರುತ್ತದೆ. ಹೆಚ್ಚುವರಿಯಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುವ ಇಂತಹ ಕೆಲವು ಆಟೋ ಚಾಲಕರ ವಿರುದ್ಧ ಬೆಂಗಳೂರು ಪೋಲಿಸ್ ಕ್ರಮಕೈಗೊಳ್ಳುತ್ತಿಲ್ಲವೇ?. ಬೆಂಗಳೂರಿನ ಆಟೋ ಚಾಲಕರ ಕುರಿತಾಗಿ ದಿನಕ್ಕೆ ಹತ್ತರಂತೆ ದೂರುಗಳು ಬಂದರೂ, ಈ ಸಮಸ್ಯೆಯನ್ನು ನಿಯಂತ್ರಿಸಲಾರದೇ ಹೋದರೇ?. ಇಂತಹ ಕೆಲವು ಆಟೋ ಚಾಲಕರಿಂದಾಗಿ, ಒಳ್ಳೆಯ ಆಟೋ ಚಾಲಕರಿಗೂ ಕೆಟ್ಟ ಹೆಸರು ಎಂದು ಮತ್ತೊಬ್ಬ ನೆಟ್ಟಿಗ ಕಿರಿ ಕಾರಿದ್ದಾರೆ.
ಇದಕ್ಕೆ ಜನ ರಾಪಿಡೋ, ಬೈಕ್ ಟ್ಯಾಕ್ಸಿ ಬೇಕೆನ್ನುತ್ತಾರೆ..
ಬೆಂಗಳೂರಲ್ಲಿ ನಮಗೆ ಗೊತ್ತಿರೋ ತರ ಎಲ್ಲಾರು ಒಂದು ವಿಡಿಯೋ ಮಾಡಿದ್ರೆ ನಿತ್ಯ ಇಂತಹ ಹೆಚ್ಚುವರಿ ಹಣ ವಸೂಲಿಕೋರರ 10,000 ವೀಡಿಯೋಗಳು ಆಗುತ್ತವೆ. ಆದರೆ ನಮ್ ಜನರು ಅಮಾಯಕರು. ವಿಡಿಯೋ ಮಾಡೋಕೆ ಹೆದರುತ್ತಾರೆ. ಕೆಲವರು ಪಾಪ ನಮಗೆ ಯಾಕ್ ಬೇಕು ಅಂತ ಮನ್ಸಲ್ಲೇ ಬೈಕೊಳ್ತಾರೆ ಅಷ್ಟೇ... ಎಂದು ಮತ್ತೊಬ್ಬರು ಜನರ ಅಸಹಾಯಕತೆಯನ್ನು ಕಾಮೆಂಟ್‌ನಲ್ಲಿ ತೋರ್ಪಡಿಸಿದ್ದಾರೆ. ಈ ಕಾರಣಕ್ಕೆ ರಾಪಿಡೋ, ಬೈಕ್ ಟ್ಯಾಕ್ಸಿ ಬೇಕು ಎಂದು ಜನರು ಕೇಳಿಕೊಳ್ಳುತ್ತಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಸರ್ಕಾರ ಇಂತಹ ಆಟೋಗಳ ವಿರುದ್ಧ ಕ್ರಮಕ್ಕೆ ಮುಂದಾದರೆ ಸರ್ಕಾರ BS6 ಆಟೋಗಳಿಗೆ ಪರ್ಮಿಟ್ ನೀಡಿಲ್ಲ. ದಯಮಾಡಿ ಮೂರು ತಿಂಗಳು ಅವಕಾಶ ಕೊಡುವಂತೆ ಎಎಪಿ ಕೇಳಿಕೊಂಡಿದೆ. ಇತ್ತ ಆಟೋ ಚಾಲಕರು ತಮ್ಮ ಹಳೇ ಚಾಳಿ ಮುಂದುವರಿಸಿ ಪ್ರಯಾಣಿಕರಿಂದ ಸುಲಿಗೆ ಮಾಡಿ, ಜೀವ ಹಿಂಡುತ್ತಿದ್ದಾರೆ.












Click it and Unblock the Notifications