Auto Price: ಬೆಂಗಳೂರಿನಲ್ಲಿ ಸದ್ಯದಲ್ಲೇ ಆಟೋ ಪ್ರಯಾಣ ದರ ಏರಿಕೆ?
ಬೆಂಗಳೂರು, ಜೂನ್ 26: ರಾಜ್ಯದಲ್ಲಿ ಒಂದಾದ ಮೇಲೊಂದು ಬೆಲೆ ಏರಿಕೆ ಆಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಮೊದಲು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಬಳಿಕ ತರಕಾರಿ ಬೆಲೆ ಗಗನಕ್ಕೇರಿತ್ತು. ಹೂ-ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದ್ದು, ಇಂದಿನಿಂದ ಹಾಲಿನ ದರ ಕೂಡ ಹೆಚ್ಚಾಗಿದೆ.
ಈ ಎಲ್ಲಾ ದರ ಏರಿಕೆಯ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಆಟೋ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಆಟೋಮೀಟರ್ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘ ಒತ್ತಾಯ ಮಾಡಿದೆ ಎಂದು ತಿಳಿದು ಬಂದಿದೆ. ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗದ ಕಾರಣ ಚಾಲಕರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಕನಿಷ್ಠ ಆಟೋ ದರವನ್ನು ಕೂಡ ಹೆಚ್ಚಿಸುವಂತೆ ಸಂಘ ಒತ್ತಾಯಿಸಿದೆ.

ಬೆಂಗಳೂರಿನಲ್ಲಿ ಆಟೋ ರಿಕ್ಷಾ ದರವನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಷ್ಕರಿಸಲು ಕೋರಿದೆ. ಬೆಂಗಳೂರು ನಗರದಲ್ಲಿ ಆಟೋ ಮೀಟರ್ ದರ ಏರಿಕೆ ಮಾಡುವ ಅಧಿಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಮಿಟಿಗೆ ಮಾತ್ರ ಅವಕಾಶ ಇರುವುದರಿಂದ ಆಟೋ ಚಾಲಕರ ಸಂಘ ಇತ್ತೀಚಿಗೆ ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಪತ್ರ ಬರೆದು ಮೀಟರ್ ದರ ಏರಿಕೆಗೆ ಮನವಿ ಮಾಡಿದೆ.
ಪ್ರತಿ ವರ್ಷ ದರಗಳನ್ನು ಪರಿಷ್ಕರಿಸಿದರೆ, ಆಟೋ ಚಾಲಕರು ಪ್ರಯಾಣಿಕರಿಗೆ ಸೇವೆ ನಿರಾಕರಿಸುವುದನ್ನು ತಪ್ಪಿಸಬಹುದು. ಅಲ್ಲದೇ, ಚಾಲಕರು ಪ್ರಯಾಣಿಕರಿಗೆ ಮೀಟರ್ ಮೀರಿ ಅಧಿಕ ಶುಲ್ಕ ವಿಧಿಸುವ ದೂರುಗಳನ್ನು ಕಡಿಮೆ ಮಾಡಬಹುದು ಎಂದು ಆಟೋ ಚಾಲಕರ ಸಂಘ ಜಿಲ್ಲಾಧಿಕಾರಿಗಳಿಗೆ ಮಾಡಿದ ಮನವಿಯಲ್ಲಿ ತಿಳಿಸಿದೆ.

ಸದ್ಯ ಬೆಂಗಳೂರು ನಗರದಲ್ಲಿ ಕನಿಷ್ಠ 30 ರುಪಾಯಿ ಇದ್ದು, ಅದನ್ನು 40 ರುಪಾಯಿ ಮಾಡಬೇಕೆಂದು ಮನವಿ ಮಾಡಲಾಗಿದೆ. 3 ವರ್ಷಗಳ ಹಿಂದೆ ಈ ದರ ಪರಿಷ್ಕರಿಸಲಾಗಿತ್ತು ಇದೀಗ ಮತ್ತೆ ದರ ಏರಿಸಲು ಮನವಿ ಮಾಡಲಾಗಿದೆ.
ಆಟೋ ದರ ಪರಿಷ್ಕರಿಸಬೇಕಾದ ಅನಿವಾರ್ಯತೆಯೇನು..?
* ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ದರ ಹೆಚ್ಚಳವಾಗಿದ್ದು ಆಟೋ ಚಾಲಕರಿಗೆ ಆದಾಯದಷ್ಟೇ ಖರ್ಚು ಕೂಡ ಬರುತ್ತಿದೆ.
* ಶಕ್ತಿ ಯೋಜನೆಯಿಂದ ಮಹಿಳೆಯರು ಬಹುತೇಕವಾಗಿ ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಿದ್ದು, ಆಟೋ ಬಳಸುವವರ ಸಂಖ್ಯೆ ತೀರಾ ಕಡಿಮೆ ಆಗಿದೆ.
* ಆನ್‌ಲೈನ್ ಆಟೋ ಬುಕ್ಕಿಂಗ್ ಆ್ಯಪ್‌ಗಳು ಹೆಚ್ಚು ಬಳಕೆಯಾಗುತ್ತಿದ್ದು, ನೇರವಾಗಿ ಆಟೋ ಬಳಸುವವರ ಸಂಖ್ಯೆ ಕಡಿಮೆಯಾಗಿದೆ.
* ಆಟೋಗೆ ಬಳಸುವ ಮೆಕಾನಿಕಲ್ ವಸ್ತುಗಳ ದರ ಕೂಡ ಹೆಚ್ಚಾಗಿದೆ.
* ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ದರ ಗಗನ ಮುಟ್ಟಿದ್ದು, ಆಟೋ ಚಾಲಕರರು ಜೀವನ ಸರಿದೂಗಿಸಲು ದರ ಏರಿಕೆ ಅನಿವಾರ್ಯವಾಗಿದೆ.












Click it and Unblock the Notifications