Bengaluru Water Shortage: ಮಾದರಿ ಆಯ್ತು ಅಪಾರ್ಟ್‌ಮೆಂಟ್‌ಗಳ 'ನೀರು ರಕ್ಷಣೆ' ಕ್ರಮಗಳು
ಬೆಂಗಳೂರು, ಮಾರ್ಚ್ 05: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ನೀರಿನ ಬಿಕ್ಕಟ್ಟು ಎದುರಾಗಿದೆ. ಸಮಸ್ಯೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನೀರಿನ ಟ್ಯಾಂಕರ್‌ಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು, ನೋಂದಣಿಗೆ ಸೂಚನೆ ನೀಡಿದೆ. ಈ ಮಧ್ಯೆ ಅಪಾರ್ಟ್‌ಮೆಂಟ್‌ಗಳು ನೀರಿನ ಮಿತ ಬಳಕೆ, ಸಂರಕ್ಷಣೆಗಾಗಿ ಕೈಗೊಂಡ ಕ್ರಮಗಳು ಇತರರಿಗೆ ಮಾದರಿ ಆಗಿವೆ.
ನಗರದ ಈ ವಸತಿ ಸಮುಚ್ಚಯಗಳು (ಅಪಾರ್ಟ್‌ಮೆಂಟ್ಸ್) ನೀರಿನ ಸಂರಕ್ಷಣೆಗಾಗಿ ಹಲವಾರು ಹೊಸ ನಿಯಮಗಳನ್ನು ರೂಪಿಸಿವೆ. ಇಲ್ಲಿನ ಬಹುತೇಕ ಎಲ್ಲ ಸಮುದಾಯಗಳು ಟ್ಯಾಂಕರ್ ನೀರನ್ನೆ ಆಶ್ರಯಿಸಿವೆ. ನೀರಿನ ಒತ್ತಡ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿವೆ. ಮಿತ ಬಳಕೆ ಮಾಡುತ್ತಿವೆ. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಪೂಲ್‌ಗಳನ್ನು ಮುಚ್ಚಲಾಗಿದೆ.

ಶುಕ್ರವಾರ ಕನಕಪುರ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಜಲ ಸಂಗ್ರಹವು ಸಂಪೂರ್ಣ ಖಾಲಿಯಾಗಿತ್ತು. ಇಲ್ಲಿ 2,500 ಯೂನಿಟ್‌ಗಳಿದ್ದು, ಈ ಅಪಾರ್ಟ್‌ಮೆಂಟ್‌ಗೆ ದಿನಕ್ಕೆ ಸುಮಾರು 150 ರಿಂದ 200 ನೀರಿನ ಟ್ಯಾಂಕರ್‌ಗಳು ಅಗತ್ಯವಿದೆ.
ನೀರು ಮಿತ ಬಳಕೆಗೆ ಪೂರೈಕೆಯ ಸಮಯ ಬದಲಾವಣೆ
ಈ ಅಪಾರ್ಟ್‌ಮೆಂಟ್ ನಿವಾಸಿಗಳು ಸುಮಾರು ಶೇಕಡಾ 75ರಷ್ಟು ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ನೀರು ಪೂರ್ಣ ಖಾಲಿಯಾದ ನಂತರ ಮಿತ ಬಳಕೆ ಉದ್ದೇಶದಿಂದ ನಿತ್ಯ ಬೆಳಿಗ್ಗೆ 6 ರಿಂದ 10 ಮತ್ತು ಸಂಜೆ 4 ರಿಂದ ರಾತ್ರಿ 9ರವರೆಗೆ ನೀರಿನ ಪೂರೈಕೆಯನ್ನು ಕಡಿತಗೊಳಿಸಿದ್ದೇವೆ.
ಈ ಕ್ರಮಗಳ ಮೂಲಕ ನಾವು 20% ನೀರಿನ ಉಳಿತಾಯ ಮಾಡುತ್ತಿದ್ದೇವೆ. ಈ ನೀರಿನ ರಕ್ಷಣೆ ಮಿತ ಬಳಕೆ ಬಗ್ಗೆ ನಿವಾಸಿಗಳಿಗೆ ಅರಿವು ಮೂಡಿಸುತ್ತಿದ್ದೇವೆ. ಈಜುಕೊಳವನ್ನು ಮುಚ್ಚಿದ್ದೇವೆ. ಮತ್ತು ನೀರಿನ ಅಗತ್ಯವಿರುವ ಅನಗತ್ಯ ಚಟುವಟಿಕೆಗಳನ್ನು ನಿಲ್ಲಿಸಿದ್ದೇವೆ ಎಂದು ಅಪಾರ್ಟ್‌ಮೆಂಟ್‌ನ ನಿವಾಸಿ ಕಲ್ಯಾಣ ಸಂಘದ (RWA) ಸದಸ್ಯರು ತಿಳಿಸಿದರು.
ಇದು ಎಚ್ಚರಿಕೆ ಗಂಟೆ ಎಂದು ಭಾವಿಸಿ
ಸದ್ಯ ಎದುರಾದ ನೀರಿನ ಬಿಕ್ಕಟ್ಟು ಶಾಸ್ವತವಲ್ಲ. ಆದರೆ ಬೇಸಿಗೆಯ ಕಾರಣ ನೀರು ಸಿಗುವವರೆಗೂ ಇದನ್ನೇ ಎಚ್ಚರಿಕೆ ಗಂಟೆ ಎಂದು ಭಾವಿಸಬೇಕು. ಎಚ್ಚರಿಕೆಯಿಂದ ನೀರನ್ನು ಬಳಸಬೇಕಿದೆ ಎಂದರು.
ಕೆಂಗೇರಿಯ ಮತ್ತೊಂದು ಅಪಾರ್ಟ್‌ಮೆಂಟ್ ನಲ್ಲಿ ರಾತ್ರಿಯ ಸಮಯದಲ್ಲಿ ನೀರನ್ನು ಪೂರೈಕೆಗೆ ನಿರ್ಧರಿಸಲಾಗಿದೆ. ಈ ಮೂಲಕ ನೀರಿನ ರಕ್ಷಣೆಗೆ ಸ್ವಯಂ ಪ್ರೇರಿತವಾಗಿ ಕ್ರಮ ರೂಪಿಸಲಾಗಿದೆ. ಅಲ್ಲದೇ ಅಪಾರ್ಟ್‌ಮೆಂಟ್‌ನ ಪ್ಲಂಬರಿಂಗ್ ವ್ಯಕ್ತಿಯು ಪ್ರತಿ ಮನೆಗೆ ಹೋಗಿ ನೀರಿನ ಸೋರಿಕೆ ಪರಿಶೀಲಿಸುತ್ತಿದ್ದಾರೆ ಎಂದು RWA ಸಂಘದ ಸದಸ್ಯರು ತಿಳಿಸಿದರು.
ನಗರದಾದ್ಯಂತ ಇರುವ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳನ್ನು ವಾರದಲ್ಲಿ ಆಗಾಗ್ಗೆ ತಮ್ಮ ಕಾರನ್ನು ತೊಳೆಯಬಾರದು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ವಾಟರ್ ಪ್ಯೂರಿಫೈಯರ್‌ಗಳಿಂದ ಬಿಡುಗಡೆಯಾಗುವ ನಿರುಪಯುಕ್ತ ನೀರನ್ನು ವಿವಿಧ ಉದ್ದೇಶಗಳಿಗಾಗಿ ಮರುಬಳಕೆ ಮಾಡಲಾಗುತ್ತಿದೆ. ಈ ಮೂಲಕ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯತೆಯನ್ನು ಕಡಿಮೆ ಮಾಡಲಾಗುತ್ತಿದೆ.
ನಿವಾಸಿಗಳಿಗೆ ನೀರು ಬಳಕೆಗೆ ಕೆಲ ನಿರ್ಬಂಧ
ಕೆಲ ಅಪಾರ್ಟ್‌ಮೆಂಟ್‌ಗಳಲ್ಲಿ ಮುಂಬರಲಿರುವ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನೀರು ಬಳಸದಂತೆ ಆಚರಣೆ ಮಾಡಲು ತಿಳಿಸಲಾಗಿದೆ. ನಾವು ಸಂಪೂರ್ಣವಾಗಿ ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಿಲ್ಲ ಮತ್ತು ಸ್ವಲ್ಪಮಟ್ಟಿಗೆ ಕಾವೇರಿ ನೀರನ್ನು ಪಡೆಯುತ್ತಿದ್ದೇವೆ. ಆದರೂ ಸಹಿತ ಇಲ್ಲಿನ ನಿವಾಸಿಗಳಿಗೆ, ನೀರು ಬಳಕೆಗೆ ಕೆಲವು ನಿರ್ಬಂಧ ವಿಧಿಸಲಾಗಿದೆ.
ನೀರಿಲ್ಲದೆ ಹೋಳಿ ಆಚರಿಸಲು, ಕಾರು ತೊಳೆಯುವುದನ್ನು ಕಡಿಮೆ ಮಾಡುವುದು, ನೀರು ಬಳಸಿ ಕಾರು ತೊಳೆಯುವ ಬದಲಿಗೆ ತೇವದ ಬಟ್ಟೆಯಲ್ಲಿ ಕಾರು ಒರೆಸಲು ಪ್ರಯತ್ನಿಸುವಂತೆ ನಿವಾಸಿಗಳನ್ನು ಕೇಳಿಕೊಳ್ಳಲಾಗಿದೆ ಎಂದು ವೈಟ್‌ಫೀಲ್ಡ್‌ನ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಮಾಹಿತಿ ನೀಡಿದರು.
ನೀರಿನ ಬವಣೆ ನೀಗಿಸಲು ಸರ್ಕಾರ ಒಂದು ಕಡೆ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ ಜನರು ಸ್ವಯಂಪ್ರೇರಿತವಾಗಿ ನೀರಿನ ರಕ್ಷಣಾತ್ಮಕ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಕೈ ಜೋಡಿಸಿದ್ದಾರೆ.












Click it and Unblock the Notifications