Bengaluru Airport: ರಾಜಧಾನಿಯಿಂದ ಶೀಘ್ರವೇ 02 ಹೊಸ ವಿದೇಶಿ ಮಾರ್ಗಗಳಿಗೆ ವಿಮಾನ ಸೇವೆ
ಬೆಂಗಳೂರು, ಆಗಸ್ಟ್ 29: ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಬೇರೆ ಬೇರೆ ದೇಶಗಳಿಗೆ ವಿಮಾನಗಳು ಸೇವೆ ನೀಡುತ್ತಿವೆ. ನಿತ್ಯ ಸಹಸ್ರಾರು ಸಂಖ್ಯೆ ಪ್ರಯಾಣಿಕರಿಗೆ ವಿಮಾನ ಸೇವೆ ನೀಡುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾನ (KIA) ಶೀಘ್ರವೇ ಜಪಾನ್‌ನ ಎರಡು ಪ್ರಮುಖ ನಡೆಗಳಿಗೆ ಸೇವೆ ನೀಡುವ ನಿರೀಕ್ಷೆಗಳು ಇವೆ. ವಿಚಾರ ಸದ್ಯ ಚರ್ಚೆ ಹಂತದಲ್ಲಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಶುಕ್ರವಾರ ಅಧಿಕೃತ ಮಾಹಿತಿ ನೀಡಿದ್ದಾರೆ.
ಜಪಾನ್ ದೇಶದ ಪ್ರಮುಖ ಕೈಗಾರಿಕಾ ನಗರಗಳಾಗಿರುವ ಒಸಾಕಾ ಮತ್ತು ನಗೋಯಾ ನಗರಗಳಿಗೆ ಬೆಂಗಳೂರಿನಿಂದ ನೇರ ವಿಮಾನಸೇವೆ ಆರಂಭಿಸುವ ಚಿಂತನೆ ಇದೆ. ಈ ಕುರಿತು ಬೆಂಗಳೂರಿನಲ್ಲಿ ಇರುವ ಆ ದೇಶದ ಕಾನ್ಸುಲ್ ಜನರಲ್ ನಕಾನೆ ಸುಟೋಮು ಅವರೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಚರ್ಚೆ ನಡೆಸಿದರು. ಬಳಿಕ ಈ ಬಗ್ಗೆ ತಿಳಿಸಿದರು.

ಸಭೆ ನಂತರ ಮಾತನಾಡಿದ ಅವರು, ಜಪಾನ್ ಜತೆ ಬಂಡವಾಳ ಹೂಡಿಕೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಬಂಧ, ಹಾಗೂ ಭಾಷಾ ಕಲಿಕೆಯಂತಹ ಕೌಶಲ್ಯ ಬಲವರ್ಧನೆಗೆ ರಾಜ್ಯ ಸರಕಾರದ ಮೂಲಕ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಸೆಪ್ಟಂಬರ್ 6ರರಿಂದ ಹತ್ತು ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದರು.
7,500 ಕೋಟಿ ರೂ. ಬಂಡವಾಳ ಹೂಡಿಕೆ
ರಾಜಧಾನಿ ಬೆಂಗಳೂರಿನಿಂದ ಜಪಾನ್‌ನ ರಾಜಧಾನಿ ಟೋಕಿಯೋಗೆ ಮಾತ್ರ ನೇರ ವಿಮಾನ ಸೌಲಭ್ಯ ಇದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಪಾನಿನ ಹಲವು ಕಂಪನಿಗಳು ಡೇಟಾ ಸೆಂಟರ್, ಮ್ಯಾನಫ್ಯಾಕ್ಚರಿಂಗ್, ಲಾಜಿಸ್ಟಿಕ್ಸ್ ಮುಂತಾದ ವಲಯಗಳಲ್ಲಿ ರಾಜ್ಯದಲ್ಲಿ 7,500 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿವೆ. ಹೀಗಾಗಿ ಅಲ್ಲಿನ ಕೈಗಾರಿಕಾ ನಗರಗಳಾದ ಒಸಾಕಾ ಮತ್ತು ನಗೋಯಾಗೆ ನಮ್ಮಲ್ಲಿಂದ ನೇರ ವಿಮಾನ ಸೇವೆ ಆರಂಭಿಸಬೇಕಾದ ಅಗತ್ಯವಿದೆ ಎಂದು ಅವರು ವಿವರಿಸಿದರು.
ನಮ್ಮಲ್ಲಿ ಹಲವರಿಗೆ ಜಪಾನಿನ ಕಂಪನಿಗಳು ಕೆಲಸ ಕೊಡುತ್ತಿವೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿರುವ ವಿಟಿಯು ತರಹದ ವಿಶ್ವವಿದ್ಯಾಲಯಗಳಲ್ಲಿ ಜಪಾನಿ ಭಾಷೆ ಕಲಿಕೆಗೆ ಒಡಂಬಡಿಕೆ ಮಾಡಿಕೊಳ್ಳುವುದು ಪರಿಣಾಮಕಾರಿಯಾಗಲಿದೆ. ಆದ್ದರಿಂದ ಜಪಾನ್ ಭೇಟಿಯ ಸಮಯದಲ್ಲಿ ಅಲ್ಲಿನ ಒಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಜಪಾನಿನ 1,400 ಕಂಪನಿಗಳು ಭಾರತದಲ್ಲಿವೆ. ಇದರಲ್ಲಿ ಅರ್ಧದಷ್ಟು ಕಂಪನಿಗಳು ತಯಾರಿಕೆ ವಲಯವೊಂದರಲ್ಲೇ ಸಕ್ರಿಯವಾಗಿವೆ. ಭಾರತದಲ್ಲಿನ ಎಫ್.ಡಿ.ಐ ಹೂಡಿಕೆಯಲ್ಲಿ ಜಪಾನ್ ಐದನೆಯ ಸ್ಥಾನದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಎರಡೂ ದೇಶಗಳ ನಡುವೆ 13 ಬಿಲಿಯನ್ ಡಾಲರ್ ಮೊತ್ತದ 170 ಒಡಂಬಡಿಕೆಗಳು ಜರುಗಿವೆ. ಜಪಾನ್ ಮತ್ತು ರಾಜ್ಯದ ನಡುವಿನ ವ್ಯವಹಾರ ಪ್ರಕ್ರಿಯೆಗಳ ನಿರ್ವಹಣೆಗೆ ಟೋಕಿಯೋದಲ್ಲಿ ಪ್ರಪ್ರಥಮ ಬಿಸಿಐಸಿ ಕಚೇರಿ ಆರಂಭವಾಗಿದೆ ಎಂದು ತಿಳಿಸಿದರು.












Click it and Unblock the Notifications