ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಥೆ 2 : ಆವಲಹಳ್ಳಿ ಪೆಟ್ರೋಲ್ ಬಂಕ್ ವೃತ್ತದ ವೃತ್ತಾಂತ

By Prasad
|
Google Oneindia Kannada News

ಧೋಧೋ ಮಳೆ ಸುರಿಯುತ್ತಿದ್ದರೂ ಸಂಪೂರ್ಣವಾಗಿ ನೆಂದುಕೊಂಡು ವಾಹನ ಸಂಚಾರವನ್ನು ನಿಯಂತ್ರಿಸುವ ಕಾನ್ಸ್‌ಟೇಬಲ್ ಗಳನ್ನು ನೋಡಿರುತ್ತೀರಿ. ಕಿತ್ತುಹೋಗಿರುವ ರಸ್ತೆಯನ್ನು ತಾನೇ ಸ್ವತಃ ನಿಂತು ಸರಿಪಡಿಸುವ ಚಿತ್ರವನ್ನೂ ನೋಡಿರುತ್ತೀರಿ. ನಟ್ಟನಡರಾತ್ರಿಯಲ್ಲಿ ಗರ್ಭಿಣಿಯನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸಿದ ಪೇದೆಯನ್ನೂ ಕಂಡಿದ್ದೀರಿ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರಿಗಿಂತ, ಬರೀ ಧೂಳಿನಿಂದ ತುಂಬಿರುವ ರಸ್ತೆಯಲ್ಲಿ ಬಿಸಿಲು, ಮಳೆ, ಚಳಿಯೆನ್ನದೆ, ಖೊಕ್ ಖೊಕ್ ಕೆಮ್ಮುತ್ತ ವಾಹನ ಸಂಚಾರವನ್ನು ನಿಯಂತ್ರಿಸುವ ಟ್ರಾಫಿಕ್ ಪೊಲೀಸರ್ ಕೆಲಸ ತುಂಬಾ ಕಷ್ಟದ್ದು. ಕಣ್ಣಲ್ಲಿ ಕಣ್ಣಿಟ್ಟು ಯಾರು ನಿಯಮ ಗಾಳಿಗೆ ತೂರುತ್ತಾರೆ ಎಂಬ ಬಗ್ಗೆ ನಿಗಾ ಇಡಲೇಬೇಕಾಗುತ್ತದೆ.

Bengalurina Kathegalu : Avalahalli junction and traffic jam

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕೂಡ ಟ್ರಾಫಿಕ್ ಪೊಲೀಸರು ಅಷ್ಟೇ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಟ್ವೀಟ್ ಮಾಡಿದರೆ ಸಾಕು ಅದಕ್ಕೆ ತಕ್ಕ ಉತ್ತರ ತಿರುಗಿಬಂದಿರುತ್ತದೆ. ಈ ಕಾರಣದಿಂದಾಗಿ ಹಿಂದೆಂದಿಗಿಂತಲೂ ಪೊಲೀಸರು ಜನರಿಗೆ ಹತ್ತಿರವಾಗಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಈ ಥ್ಯಾಂಕ್ಲೆಸ್ ಜಾಬ್ ಮಾಡುತ್ತಿರುವುದಕ್ಕೆ ಅವರಿಗೆ ಧನ್ಯವಾದದ ಜೊತೆ ಹ್ಯಾಟ್ಸಾಫ್ ಹೇಳಲೇಬೇಕು.

ಆದರೆ....

ಇಲ್ಲಿ ಕೆಲವೊಂದು ವೃತ್ತಗಳಿವೆ. ಅಲ್ಲಿ ನಮ್ಮ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ಆಯುಕ್ತರಾಗಿರುವ ಸನ್ಮಾನ್ಯ ಆರ್ ಹಿತೇಂದ್ರ ಅವರು ಸಂಜೆ ಸಮಯದಲ್ಲಿ ಒಂದು ಸುತ್ತು ಹಾಕ್ಕೊಂಡು ಬರಲಿ. ಬೇಕಿದ್ದರೆ ಮಾರುವೇಷದಲ್ಲಿ ತಮ್ಮ ಸಿಬ್ಬಂದಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆಂದು ಸ್ವತಃ ಪರೀಕ್ಷೆ ಮಾಡಿ ನೋಡಲಿ.

Bengalurina Kathegalu : Avalahalli junction and traffic jam

ಆಗ ಅವರಿಗೇ ಗೊತ್ತಾಗುತ್ತದೆ ಅಲ್ಲಿ ನೆಟ್ಟಿರುವ ಬೋರ್ಡುಗಳನ್ನು ಕಿತ್ತುಬಿಸಾಡದೆ ಬೇರೆ ವಿಧಿಯಿಲ್ಲ ಅಥವಾ ಆ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಟ್ರಾಫಿಕ್ ಪೊಲೀಸರನ್ನು ಮನೆಗೆ ಕಳುಹಿಸದೆ ಬೇರೆ ವಿಧಿಯಿಲ್ಲ ಎಂದು.

ಒಂದು ವೃತ್ತದ ವೃತ್ತಾಂತ : ಆವಲಹಳ್ಳಿ ಜಂಕ್ಷನ್

ಹನುಮಂತನಗರದ ಕಡೆಯಿಂದ ಒಂದು ರಸ್ತೆ, ಗಿರಿನಗರದ ಕಡೆಯಿಂದ ಮತ್ತೊಂದು ಹಾಗು ನಾಯಂಡಹಳ್ಳಿ ಬಳಿಯಿಂದ ಮಗದೊಂದು ರಸ್ತೆ ಅಲ್ಲಿ ಬಂದು ಸೇರುತ್ತವೆ. ಇನ್ನೊಂದು ರಸ್ತೆ ಆವಲಹಳ್ಳಿ ಜಂಕ್ಷನ್ ನಿಂದ ಮೈಸೂರು ರಸ್ತೆ ಕಡೆಗೆ ಹೋಗುತ್ತದೆ. ಉಳಿದ ಮೂರು ರಸ್ತೆಗಳು ಟೂವೇ ಇಲ್ಲದೆ, ಮೈಸೂರು ರಸ್ತೆ ಕಡೆಗೆ ಸಾಗುವ ರಸ್ತೆ ಒನ್ ವೇ.

ಎಸ್ಸಾರ್ ಪೆಟ್ರೋಲ್ ಬಂಕ್ ಇರುವ ಇನ್ನೊಂದು ಬದಿಯಲ್ಲಿ ಒಂದು ಬೋರ್ಡನ್ನು ಟ್ರಾಫಿಕ್ ಪೊಲೀಸರು ಲಗತ್ತಿಸಿದ್ದಾರೆ. 'ಪ್ರವೇಶ ನಿಷೇಧಿಸಿದೆ - No Entry'. ಯಾವ ನಾಗರಿಕ ಈ ರೂಲೀಸನ್ನು ಪಾಲಿಸುತ್ತಿದ್ದಾನೆ ಎಂದು ಒಂದಾದರೂ ದಿನ ಬಂದು ಸನ್ಮಾನ್ಯ ಆಯುಕ್ತರು ಬಂದು ನೋಡಿದ್ದಾರಾ? ಹೋಗಲಿ, ಅಲ್ಲಿ ನೋ ಎಂಟ್ರಿ ಬೋರ್ಡ್ ಇದೆಯೆಂದು ವಾಹನ ಸವಾರರು ಆ ರಸ್ತೆಯಲ್ಲಿ ಹೋಗುವುದನ್ನು ನಿಲ್ಲಿಸಿದ್ದಾರಾ?

Bengalurina Kathegalu : Avalahalli junction and traffic jam

ಬೈಕು, ಕಾರು, ಬಸ್ಸು, ಟೆಂಪೋಗಳು ಆವಲಹಳ್ಳಿ ಜಂಕ್ಷನ್ ನಿಂದ ನುಗ್ಗಿ, ಒನ್ ವೇನಲ್ಲಿ ತೂರಿಕೊಂಡು ಮೈಸೂರು ರಸ್ತೆ ಕಡೆಗೆ ಸಾಗುತ್ತಿವೆ. ಇದು ದಿನನಿತ್ಯದ ಚಿತ್ರಣ. ಪ್ರತಿನಿತ್ಯ ಅಲ್ಲಿ ಟ್ರಾಫಿಕ್ ಜಾಮ್. ಆಕಡೆಯಿಂದ ಇವನು ಮೊದಲು ಹೋಗಬೇಕು, ಇವನು ಹೋಗಲು ಅವನು ಬಿಡುವುದಿಲ್ಲ. ಮಧ್ಯದಲ್ಲಿ ಅಲ್ಲೆಂದಲೋ ಆಟೋವೊಂದು ನುಗ್ಗಿ ಎಲ್ಲ ವಾಹನಗಳನ್ನು ಲಾಕ್ ಮಾಡಿ ನಿಂತುಬಿಡುತ್ತದೆ.

ಅಲ್ಲಿಗೆ ಗೋವಿಂದ ಗೋವಿಂದ. ಇಂಪಾಸಿಬಲ್, ಮಿಸುಕಾಡಲೂ ಸಾಧ್ಯವಿಲ್ಲದಂಥ ವಾಹನ ದಟ್ಟಣೆ. ಆಂಬ್ಯುಲನ್ಸ್ ಬಂದರಂತೂ ನಮೋನ್ನಮಃ. ಅಷ್ಟರಲ್ಲಿ ಅದೆಲ್ಲವನ್ನು ನೋಡುತ್ತಿರುವ ಕೆಲ ಯುವಕರು ತಾವೇ ಟ್ರಾಫಿಕ್ ಪೊಲೀಸರಾಗುತ್ತಾರೆ. ರೀ ನಿಲ್ರೀ, ಯಾಕೆ ನುಗ್ತೀರಾ, ಹೋಗೋಕಾಗುತ್ತಾ, ಯೋ ಸ್ವಲ್ಪ ತಡ್ಕೊಳ್ಳಪ್ಪ, ಯಾಕೆ ಅವಸರ, ಅವನ್ಯಾವೋನಯ್ಯಾ ಅವನು ನುಗ್ಗೋನು, ಅಲ್ಲೇ ತಡೆಹಿಡ್ಕೊ... ಅಂತ ತಮಗೆ ತಾವೇ ಡೈಲಾಗ್ ಹೊಡೆಯುತ್ತ ಸಂಚಾರ ನಿಯಂತ್ರಿಸಲು ಆರಂಭಿಸುತ್ತಾರೆ.

Bengalurina Kathegalu : Avalahalli junction and traffic jam

ಸುಮಾರು ಹತ್ಹದಿನೈದಿಪ್ಪತ್ತೈದು ನಿಮಿಷಗಳ ಹೋರಾಟದ ನಂತರ ತಹಬದಿಗೆ ಬರುತ್ತದೆ. ತಾತ್ಕಾಲಿಕ 'ಪೊಲೀಸರು' ತಮ್ಮ ಕೆಲಸ ಮುಗಿಸಿ, ಬೆವರು ಒರೆಸಿಕೊಂಡು ಮನೆಗಳತ್ತ ಸಾಗುತ್ತಾರೆ. ಅಸಲಿ ಪೊಲೀಸರು ಎಲ್ಲಿರ್ತಾರೆ, ಎಂದಾದರೂ ಅವರನ್ನು ಆ ಜಂಕ್ಷನ್ನಿನಲ್ಲಿ ಕಂಡಿದ್ದೀರಾ? ಎಂದಾದರೂ ವಾಹನ ನಿಯಂತ್ರಿಸುವುದನ್ನು ಗಮನಿಸಿದ್ದೀರಾ? ಕೆಲಬಾರಿ ನಾಯಂಡಹಳ್ಳಿ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವವರನ್ನು ಅಡ್ಡಗಟ್ಟಲು ನಿಂತಿರುತ್ತಾರೆ. ಆದರೆ ಆವಲಹಳ್ಳಿ ಪೆಟ್ರೋಲ್ ಬಂಕ್ ಜಂಕ್ಷನ್ನಿನಲ್ಲಿ?

ಹೇಗಿದ್ದರೂ ಟ್ರಾಫಿಕ್ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸ್ನೇಹಪರರು, ಕೂಡಲೆ ಜನರ ಆಶೋತ್ತರಗಳಿಗೆ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದು ಬಗೆದು, ಇಲ್ಲಿ ದಿನನಿತ್ಯ ವಾಹನ ಸವಾರರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಮೂರು ಟ್ವೀಟ್ ಮಾಡಲಾಗಿತ್ತು. ಇಲಾಖೆ ಹ್ಯಾಂಡಲ್, ಆಯುಕ್ತರ ಹ್ಯಾಂಡಲ್ ಗೂ ಟ್ಯಾಗ್ ಮಾಡಲಾಗಿತ್ತು. ಒಂದೇ ಒಂದು ಉತ್ತರ, ಪ್ರತಿಸ್ಪಂದನೆ ಬಂದ್ರೆ ಕೇಳಿ.

ಹೀಗಂತ, ಬರೀ ಟ್ರಾಫಿಕ್ ಪೊಲೀಸರನ್ನೇ ಬೈಯುತ್ತ ಕೂಡಲು ಈ ಲೇಖನ ಬರೆದಿಲ್ಲ. ಘನವೆತ್ತ ನಾಗರಿಕರು ಸಾಕಷ್ಟು ಕಾಣಿಕೆ ನೀಡುತ್ತಿದ್ದಾರೆ. ಸಂಚಾರ ನಿಯಮಗಳ ಬಗ್ಗೆ ನಮ್ಮ ಕೆಲ ಜನರಿಗೆ ನಯಾ ಪೈಸೆ ಕಿಮ್ಮತ್ತಿಲ್ಲ. ಪೊಲೀಸ್ ಅಲ್ಲೇ ಇದ್ದರೂ ಆತನ ಕಣ್ಮುಂದೆಯೇ ಹಾಯ್ ಎಂದು ಹೋಗುತ್ತಿರುತ್ತಾರೆ. ಪೊಲೀಸ್ ಪೇದೆ 'ಪ್ಯಾದೆ' ಥರ ನಿಂತಿರುತ್ತಾನೆ.

ಪ್ರಜ್ಞಾವಂತ ಜನರು ಕೂಡ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಇಂಥ ತೊಂದರೆಗಳು ಬರುವುದೇ ಇಲ್ಲ ಅಲ್ಲವೆ? ಜನರು ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕಿದ್ದರೆ, ಅವರು ಪಾಲಿಸುವಂತೆ ಕಠಿಣ ಕ್ರಮಗಳನ್ನು ಕೂಡ ಪೊಲೀಸರು ತೆಗೆದುಕೊಳ್ಳಬೇಕಲ್ಲವೆ? ಈಗ ಹೇಳಿ ಯಾರದು ತಪ್ಪು? ಜನರದೋ, ಸಂಚಾರಿ ಪೊಲೀಸರದೋ? No Entry ಬೋರ್ಡ್ ಇದ್ದರೆಷ್ಟು ಬಿಟ್ಟರೆಷ್ಟು?

ಈಗ ಒಂದು ವೃತ್ತದ ವೃತ್ತಾಂತ ಬರೆದಿದ್ದೇವೆ. ಇನ್ನೊಂದು ದಿನ ಸೌತ್ ಎಂಡ್ ಸರ್ಕಲ್ ಬಗ್ಗೆ ಬರೆಯಲೇಬೇಕು. ಬರೆಯಲು ಕೂಡ ಅಷ್ಟೊಂದು ಸಂಗತಿಗಳಿವೆ.

English summary
Bengalurina Kathegalu 2 : Have you ever driven your vehicle from Hanumanthnagar to Nayandahalli or Girinagar to Nayandahalli? If not travel once in the evening on any day. Everyday traffic jam is happening but police will never be there to control it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X