Namma Metro: ನಮ್ಮ ಮೆಟ್ರೋಗಾಗಿ ಚಾಲಕ ರಹಿತ ರೈಲು ಉತ್ಪಾದನೆ ಆರಂಭಿಸಿದ ಬಿಇಎಂಎಲ್
ನಮ್ಮ ಮೆಟ್ರೋದ ಮುಂಬರುವ ಮಾರ್ಗಗಳಾದ ನೀಲಿ ಮತ್ತು ಗುಲಾಬಿ ಮಾರ್ಗಗಳಲ್ಲಿ ಚಾಲಕ ರಹಿತ ರೈಲುಗಳು ಸಂಚರಿಸಲಿದ್ದು, ಇದಕ್ಕಾಗಿ ಬಿಇಎಂಎಲ್ ನಮ್ಮ ಚಾಲಕ ರಹಿತ ಮೆಟ್ರೋ ರೈಲುಗಳ ತಯಾರಿಯನ್ನು ಆರಂಭಿಸಿದೆ. ಶನಿವಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ಮತ್ತು ರೋಲಿಂಗ್ ಸ್ಟಾಕ್ ನಿರ್ದೇಶಕ ಎನ್‌ಎಂ ಧೋಕ್ ನಮ್ಮ ಮೆಟ್ರೋ ಚಾಳಕ ರಹಿತ ರೈಲುಗಳ ಉತ್ಪಾದನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ಸಿವಿ ರಾಮನ್ ನಗರದ ಬಳಿ ಇರುವ ಬಿಇಎಂಎಲ್ ಕಚೇರಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಮತ್ತು ಹಲವು ಅಧಿಕಾರಿಗಳು ಭಾಗವಹಿಸಿದ್ದರು ಎಂದು ಬಿಎಂಆರ್ ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಇಎಂಎಲ್ ಆಗಸ್ಟ್ 2023ರಲ್ಲಿ ನಮ್ಮ ಮೆಟ್ರೋದ ಅತಿ ದೊಡ್ಡ ಕೋಚ್ ಒಪ್ಪಂದವನ್ನು ಪಡೆದುಕೊಂಡಿದೆ. 3,177 ಕೋಟಿ ರೂಪಾಯಿಗೆ ಬಿಡ್ ಮಾಡಿದ್ದು, ಚಾಲಕ ರಹಿತ ರೈಲುಗಳನ್ನು ಪೂರೈಕೆ ಮಾಡಲಿದೆ. ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಇದಕ್ಕೆ ಧನ ಸಹಾಯ ಮಾಡುತ್ತಿದೆ.
ಉತ್ಪಾನೆ ಮತ್ತು ನಿರ್ವಹಣೆ
ಈ ಒಪ್ಪಂದದ ಪ್ರಕಾರ ಬಿಇಎಂಎಲ್ 318 ಕೋಚ್‌ಗಳು ಅಂದರೆ 53 ಟ್ರೈನ್‌ಸೆಟ್‌ಗಳನ್ನು ವಿನ್ಯಾಸ, ತಯಾರಿಕೆ ಮಾಡಿ ಪೂರೈಸುತ್ತದೆ. ಮಾತ್ರವಲ್ಲದೆ ಇವುಗಳ ಪರೀಕ್ಷೆ ನಡೆಸುವುದು ಮತ್ತು 15 ವರ್ಷಗಳವರೆಗಿನ ನಿರ್ವಹಣೆ ಹೊಣೆಯನ್ನು ಕೂಡ ನಿಭಾಯಿಸಲಿದೆ.
ಸದ್ಯ ಹಳದಿ ಮಾರ್ಗಕ್ಕೆ ಚೀನಾದಿಂದ ಚಾಲಕ ರಹಿತ ಮೆಟ್ರೋ ರೈಲುಗಳನ್ನು ಪೂರೈಕೆ ಮಾಡಲಾಗುತ್ತಿದೆ. ತೀತಾಘರ್ ನಿಂದ ಕೂಡ ಹಳದಿ ಮಾರ್ಗಕ್ಕಾಗಿ ಚಾಲಕ ರಹಿತ ಮೆಟ್ರೋ ರೈಲು ಸೆಟ್‌ಗಳು ಪೂರೈಕೆಯಾಗಲಿವೆ. ಹಳದಿ ಮಾರ್ಗವು ಡಿಸೆಂಬರ್ ವೇಳೆಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.
ಪಿಂಕ್ ಲೈನ್, ಬ್ಲೂ ಲೈನ್ ಉದ್ಘಾಟನೆ ಯಾವಾಗ?
ಗುಲಾಬಿ ಮಾರ್ಗ (Pink Line) ಮೊದಲ ಹಂತದಲ್ಲಿ ಕಾಳೇನ ಅಗ್ರಹಾರ-ನಾಗವಾರ 21.26 ಕಿಮೀ ರೈಲು ಮಾರ್ಗ, 2ನೇ ಹಂತದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್-ಕೆಆರ್ ಪುರ 19 ಕಿಮೀ ಮಾರ್ಗಗಳಿಗಾಗಿ 16 ರೈಲು ಸೆಟ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಉಳಿದ 21 ರೈಲು ಸೆಟ್‌ಗಳನ್ನು ನೀಲಿ ಮಾರ್ಗದ ಕೆಆರ್ ಪುರ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ಸಂಚರಿಸಲು ನಿರ್ಮಾಣ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಅತಿ ಉದ್ದದ ಸುರಂಗ ಮಾರ್ಗವನ್ನು ಒಳಗೊಂಡಿರುವ ಪಿಂಕ್ ಲೈನ್ 2025ರ ಡಿಸೆಂಬರ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಬಿಇಎಂಎಲ್ ನಿರ್ಮಾಣ ಮಾಡುತ್ತಿರುವ ಎಲ್ಲಾ ಕೋಚ್‌ಗಳು ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ಅನ್ನು ಹೊಂದಿದೆ, ಇದು ಸಿಗ್ನಲಿಂಗ್ ವ್ಯವಸ್ಥೆಯಾಗಿದ್ದು, ಲೊಕೊ ಪೈಲಟ್‌ಗಳಿಲ್ಲದೆ 90 ಸೆಕೆಂಡ್‌ಗಳ ಅಂತರದಲ್ಲಿ ಮೆಟ್ರೋ ರೈಲುಗಳು ಸಂಚರಿಸಲು ಅನುವು ಮಾಡಿಕೊಡಲಿದೆ.
ಬೆಂಗಳೂರಿನಲ್ಲಿರುವ ಬಿಇಎಂಎಲ್‌ನ ಆಂತರಿಕ ಎಂಜಿನಿಯರಿಂಗ್ ತಂಡಗಳಿಂದ ರೈಲುಸೆಟ್‌ಗಳನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಿ, ನಿರ್ಮಾಣ ಮಾಡಲಾಗುತ್ತದೆ. ರೈಲುಗಳನ್ನು ಹೈ-ಟೆನ್ಸೈಲ್ ಆಸ್ಟೆನಿಟಿಕ್ ಸ್ಟೇನ್‌ಲೆಸ್ ಸ್ಟೀಲ್ ಬಳಸಿ ನಿರ್ಮಿಸಲಾಗುವುದು ಮತ್ತು ಪ್ರತಿ ಕೋಚ್‌ನಲ್ಲಿ ಎರಡು ಹವಾನಿಯಂತ್ರಣಗಳನ್ನು ಅಳವಡಿಸಲಾಗುತ್ತದೆ. 2025 ರ ಆರಂಭದಿಂದ 2026ರ ಡಿಸೆಂಬರ್ ವೇಳೆಗೆ ಎಲ್ಲಾ ರೈಲುಗಳನ್ನು ಪೂರೈಕೆ ಮಾಡುವ ನಿರೀಕ್ಷೆ ಇದೆ. ಪ್ರತಿ ತಿಂಗಳಿಗೆ ಎರಡು ಅಥವಾ ಮೂರು ರೈಲು ಪೂರೈಸುವ ಗುರಿ ಹೊಂದಲಾಗಿದೆ.












Click it and Unblock the Notifications