ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ನೆರೆಗೆ ಬಿಡಿಎ ನೇರ ಕಾರಣ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

|
Google Oneindia Kannada News

ಬೆಂಗಳೂರು, ಸೆ.14: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಇಂದಿನ ಎಲ್ಲ ಕರ್ಮಕಾಂಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ನಿಯಮ 69ರ ಅಡಿ ಅತಿವೃಷ್ಟಿ ಬಗ್ಗೆ ವಿಧಾನಸಭೆಯಲ್ಲಿ ಎಂದು ಸುದೀರ್ಘವಾಗಿ ಮಾತನಾಡಿದ ಅವರು, ಇದ್ದ ಎಲ್ಲಾ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿ, ಕಾಲುವೆಗಳನ್ನು ಮುಚ್ಚಿ ಬೆಂಗಳೂರು ಸೌಂದರ್ಯವನ್ನು ನಾಶ ಮಾಡಿತು ಎಂದು ಕಿಡಿಕಾರಿದರು.

ನಾನಂತೂ ಅಧಿಕಾರದಲ್ಲಿ ಇದ್ದಾಗ ಬೆಂಗಳೂರು ‌ನಗರ ವಿಷಯದಲ್ಲಿ ನಗರಕ್ಕೆ ಮಾರಕವಾಗುವ ಯಾವುದೇ ತೀರ್ಮಾನ ಎರಡೂ ಅವಧಿಯಲ್ಲೂ ನಾನು ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟ ಮಾತಗಳಲ್ಲಿ ಹೇಳಿದರು.

BDA is the direct cause of Bangalore flood: HD Kumaraswamy

ಮಳೆ ಅನಾಹುತ ಈಗಿನಿಂದ ಆಗಿದ್ದಲ್ಲ. 1999 ಈಚೆಗೆ ಐಟಿ ಕ್ಷೇತ್ರ ವೇಗವಾಗಿ ಬೆಳೆಯಲು ತೊಡಗಿತು. ಆಗ ಬೆಂಗಳೂರಿನ ಅಭಿವೃದ್ಧಿ ಬೇಕಾಬಿಟ್ಟಿ ದೊಡ್ಡ ಮಟ್ಟಿಗೆ ಆಯಿತು. ಮುಂದಾಗ ಬಹುದಾದ ಅನಾಹುತದ ಬಗ್ಗೆ ಯಾರೂ ಗಮನ ಕೊಟ್ಟಿಲ್ಲ ಎಂದು ಅವರು ಹೇಳಿದರು.

ಯಾವತ್ತು ಬಿಡಿಎ ಹುಟ್ಟಿಕೊಂಡಿತೋ ಆಗಲೇ ಬೆಂಗಳೂರಿಗೆ ಗಂಡಾಂತರ ಪ್ರಾರಂಭವಾಯಿತು. ಕೆರೆಗಳಿದ್ದಿದ್ದರೆ ಈ ರೀತಿ ನೆರೆ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಕೆರೆ ಅಭಿವೃದ್ಧಿಪಡಿಸಿದ್ದರೇ ನೀರಿನ ಸಮಸ್ಯೆನೇ ಆಗುತ್ತಿರಲಿಲ್ಲ. ಮೇಕೆದಾಟುಗೆ ಪಾದಯಾತ್ರೆ ಬೇಕಾಗಿತ್ತಾ? ಮೇಕೆದಾಟಿಗಾಗಿ ಪಾದಯಾತ್ರೆ ಮಾಡುವ ಅವಶ್ಯಕತೆನೇ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ವಿವರಿಸಿದರು.

ಕೆರೆ ಮುಚ್ಚಿ ನಿರ್ಮಿಸಲಾದ ಜೆಪಿ ನಗರ ಡಾಲರ್ಸ್ ಕಾಲೋನಿಯಲ್ಲಿ ಬಡವರಿಗೆ ನಿವೇಶನ ಕೊಟ್ಟಿದ್ದೀರಾ? ಅಲ್ಲಿ ಎಲ್ಲ ಐಎಎಸ್ ಅಧಿಕಾರಿಗಳು, ಶ್ರೀಮಂತರಿಗೆ ನಿವೇಶನ ಕೊಟ್ಡಿದ್ದೀರಿ. ಹಲವು ಕೆರೆಯನ್ನು ಮುಚ್ಚಿ ಹಾಕಿದ್ದಾರೆ. ಇದಕ್ಕೆಲ್ಲ ಕಾರಣ ಬಿಡಿಎ. ಬಿಡಿಎ ನಾಲ್ಕು ಸಾವಿರ ಎಕರೆ ಬಡಾವಣೆಗಾಗಿ ಭೂಮಿ ನೋಟಿಫೈ ಮಾಡುತ್ತದೆ. ಮತ್ತೆ ಯಾರಾದರು ಪ್ರಭಾವ ಬೀರಿದರೆ ಡಿನೋಟಿಫೈ ಮಾಡುತ್ತದೆ. ಆ ಪ್ರಾಧಿಕಾರಕ್ಕೆ ಒಂದು ಸ್ಪಷ್ಟತೆ ಇಲ್ಲ. ಒಂದು ನಿರ್ದಿಷ್ಟ ನೀಲನಕ್ಷೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.

ಒಂದು ಕಾಲದಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು. ಸಿಂಗಾಪುರ ಮಾಡಲು ಹೋಗಿಯೇ ಈ ತರ ಆಗಿದೆ ಎಂದು ಹಿಂದಿನ ಸರಕಾರಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು ಕುಮಾರಸ್ವಾಮಿ ಅವರು.

ತೆರವಿಗೆ ರಾತ್ರೋರಾತ್ರಿ ಜ್ಞಾನೋದಯ ಆಗಿದೆಯಾ?:

ನೆರೆ ವಿಷಯದಲ್ಲಿ ಬೆಂಗಳೂರಿಗೆ ಶಾಶ್ವತ ಪರಿಹಾರ ಬೇಕು. ಸಿಎಜಿ ವರದಿಯಲ್ಲಿ ಕಾಲುವೆ ಮುಚ್ಚಿರುವುದರಿಂದ ಈ ನೆರೆ ಸಮಸ್ಯೆ ಎದುರಾಗಿದೆ ಎಂದು ತಿಳಿಸಲಾಗಿದೆ. ಡ್ರೈನೇಜ್ ಕಟ್ಟಲು ಹಣ ಹೋಗುತ್ತಿದೆಯಾ? ಅಥವಾ ಡ್ರೈನೇಜ್ ನಲ್ಲೇ ಹಣ ಹರಿದು ಹೋಗುತ್ತಿದೆಯಾ? ಹಣದ ದುರ್ಬಳಕೆ ಮಾಡಬಾರದು. ಹಣ ಲೂಟಿ ಮಾಡಿದ ವರ ಮೇಲೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನಾವು ತಾಂತ್ರಿಕವಾಗಿ, ಆರ್ಥಿಕವಾಗಿ ಬೆಳೆದಿದ್ದೇವೆ. ಆದರೆ ಜನರ ಸಂಕಷ್ಟ ಪರಿಹರಿಸಲು ಏಕೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳಿಗೆ ರಾತ್ರೋರಾತ್ರಿ ನಿಮಗೆ ಜ್ಞಾನೋದಯ ಆಗಿದೆ. ಸಿಎಂ ಆದೇಶ ಕೊಟ್ಟ ಮೇಲೆ ಏಕೆ ಜ್ಞಾನೋದಾಯ ಆಗಿದೆ? ಇಷ್ಟು ದಿನ ಅಧಿಕಾರಿಗಳು ಏಕೆ ಏನೂ ಮಾಡಿಲ್ಲ? ಈ ದೇಶದ ಕಾನೂನು ಬರೀ ಶ್ರೀಮಂತರಿಗಾ? ಬಡವರಿಗೆ ಇಲ್ಲವಾ? ಮೂರು‌ನಾಲ್ಕು ದಿನ ಕಟ್ಟಡವನ್ನು ಒಡೆದರೆ ಆಗುವುದಿಲ್ಲ. ಮುಖ್ಯಮಂತ್ರಿಗಳು ಕಠಿಣವಾಗಿ ವರ್ತಿಸಬೇಕು. ಒಂದು ವಿಸ್ತೃತವಾದ ವರದಿ ತರಿಸಿ ಕ್ರಮ ಕೈಗೊಳ್ಳಬೇಕು. ಆದರೆ, ಮಾನವೀಯತೆಯಿಂದ ಬಡ ಕುಟುಂಬಗಳ ಬಗ್ಗೆ ಯೋಚಿಸಬೇಕು. ಇದು ಅವರು ಮಾಡಿದ ತಪ್ಪಲ್ಲ ಎಂದು ಅವರು ಹೇಳಿದರು.

English summary
Former Chief Minister H. D. Kumaraswamy directly accused the Bangalore Development Authority (BDA) of being responsible for all the rituals of Bangalore city built by Nadaprabhu Kempegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X