ಬೆಂಗಳೂರು ಕೆರೆಗಳಲ್ಲಿ ನಾಳೆಯಿಂದ ಈ ಕೆಲಸ ಮಾಡಲಿದೆ ಬಿಬಿಎಂಪಿ
ಬೆಂಗಳೂರು ಕೆರೆಗಳಿಂದಲೇ (ನದಿ ಹಾಗೂ ಜಲಮೂಲ) ಅಭಿವೃದ್ಧಿಯಾಗಿದ್ದ ನಗರ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಕೆರೆಗಳ ಸಂಖ್ಯೆ ಕಡಿಮೆಯಾಗುವುದು ಹಾಗೂ ಅತಿಕ್ರಮಣ, ಕೆರೆಗಳ ಸಂರಕ್ಷಣೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ. ಇದೀಗ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು) ಬೆಂಗಳೂರಿನ ಕೆರೆಗಳ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಹೊಸದೊಂದು ಅಭಿಯಾನವನ್ನೇ ಪ್ರಾರಂಭಿಸುತ್ತಿದೆ. ಅದರ ವಿವರ ಇಲ್ಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ (ಬಿಬಿಎಂಪಿಯಿಂದ ನಿರ್ಹವಣೆ ಮಾಡಲಾಗುತ್ತಿರುವ) ಕೆರೆಗಳಲ್ಲಿ ನಾಳೆಯಿಂದ ಅಂದರೆ ಅಕ್ಟೋಬರ್ 5ರಿಂದ ಒಂದು ವಾರಗಳ ಕಾಲ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ವಾರ್ಷಿಕ ನಿರ್ವಹಣೆಯಡಿ ಈ ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕೆರೆಗಳ ಸ್ವಚ್ಛತಾ ಅಭಿಯಾನವನ್ನು ನಿರ್ವಹಣೆ ಗುತ್ತಿಗೆದಾರರ ಕಾರ್ಮಿಕರು ಹಾಗೂ ಯಂತ್ರೋಪಕರಣಗಳನ್ನು ಉಪಯೋಗಿಸಿಕೊಂಡು ಮಾಡಲಾಗುತ್ತಿದೆ. ಇದಕ್ಕೆ ತೋಟಗಾರಿಕೆ ಹಾಗೂ ಮಳೆ ನೀರು ಚರಂಡಿ ವಿಭಾಗದ ವಾರ್ಷಿಕ ನಿರ್ವಹಣಾ ತಂಡಗಳು ಸಹ ಕೈಜೋಡಿಸಲಿವೆ ಎಂದು ಬಿಬಿಎಂಪಿ ಹೇಳಿದೆ.

ಕೆರೆಗಳ ಸ್ವಚ್ಛತಾ ಅಭಿಯಾನದ ಭಾಗವಾಗಿ ಕೆರೆಗಳ ಒಳಹರಿವು, ಹೊರಹರಿವಿನ (ಹೊರಗೆ ಹಾಗೂ ಒಳಭಾಗದಲ್ಲಿ)ಸ್ವಚ್ಛ ಮಾಡುವುದು, ಹೂಳು ತೆಗೆಯುವುದು, ಪಾದಾಚಾರಿ ಮಾರ್ಗಗಳಲ್ಲಿ ಪ್ಲಾಸ್ಟಿಕ್ ತೆಗೆಯುವುದು ಸೇರಿದಂತೆ ಸ್ವಚ್ಛತಾ ಕಾರ್ಯ ನಡೆಯಲಿದೆ. ಕೆರೆಯ ನೀರಿನ ಭಾಗದಲ್ಲಿ ಬೆಳೆದಿರುವ ಕಳೆಗಳನ್ನು ಸ್ವಚ್ಛಗೊಳಿಸುವಂತೆ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಗ್ಗದಾಸಪುರ ಕೆರೆಯ ಒತ್ತುವರಿ ತೆರವು: ಇನ್ನು ಬೆಂಗಳೂರಿನಲ್ಲಿರುವ (ಬಿಬಿಎಂಪಿ ವಶದಲ್ಲಿರುವ) ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನೂ ಬಿಬಿಎಂಪಿ ಈಗ ನಡೆಸುತ್ತಿದೆ. ಒತ್ತುವರಿ ಸರ್ವೆ ಹಾಗೂ ತೆರವು ಕೆಲಸ ನಡೆದಿದೆ. ಅದರಂತೆ ಪೂರ್ವ ವಲಯದ ಕಗ್ಗದಾಸಪುರ ಕೆರೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕೆರೆಯ ಸರ್ವೆ ಮಾಡಿದೆ. ಅದರಲ್ಲಿ 2.50 ಗುಂಟೆಯಲ್ಲಿ ಶೆಡ್ ಹಾಗೂ ಖಾಲಿ ಪ್ರದೇಶ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ. ಇದೀಗ ಬಿಬಿಎಂಪಿಯು 2.50 ಗುಂಟೆ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಿದೆ. ಈ ಒತ್ತುವರಿ ಪ್ರದೇಶದ ಮಾರುಕಟ್ಟೆ ಮೌಲ್ಯವು ಬರೋಬ್ಬರಿ 2 ಕೋಟಿ ರೂಪಾಯಿ ಆಗಿದೆ. ಇದೀಗ ಈ ಪ್ರದೇಶದಲ್ಲಿ ತಂತಿ ಬೇಲಿ ಅಳವಡಿವಡಿಸಿ ಭದ್ರತೆ ಕಲ್ಪಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚರ್ಚ್ ಸ್ಟ್ರೀಟ್ ರಸ್ತೆ: ಪಾದಚಾರಿ ಮಾರ್ಗ ಒತ್ತುವರಿ ತೆರವು
ಬೆಂಗಳೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾಗಿರುವ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಬಿಬಿಎಂಪಿಯ ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಅವರ ನೇತೃತ್ವದಲ್ಲಿ ಶುಕ್ರವಾರ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಈಗಾಗಲೇ ಅಂಗಡಿ,ಮಳಿಗೆಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ, ಕೆಲವರು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಚರ್ಚ್ ಸ್ಟ್ರೀಟ್ ರಸ್ತೆಯ ಎರಡೂ ಬದಿಯಲ್ಲಿರುವ ಅಂದಾಜು 50 ಅಂಗಡಿ,ಮಳಿಗೆಗಳು ಪಾದಚಾರಿ ಮಾರ್ಗ ಒತ್ತವರಿ ಮಾಡಿಕೊಂಡು, ಪಾದಚಾರಿ ಮಾರ್ಗದಲ್ಲಿರಿಸಿದ್ದ ವಸ್ತುಗಳನ್ನು ಶುಕ್ರವಾರ ತೆಗೆಯಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.











Click it and Unblock the Notifications