ಮೇಯರ್ ಆಯ್ಕೆ ಹಕ್ಕು, ಬುಧವಾರ ಹೈಕೋರ್ಟ್‌ನಲ್ಲಿ ವಿಚಾರಣೆ
ಬೆಂಗಳೂರು, ಸೆಪ್ಟೆಂಬರ್, 08 : ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡಬಾರದು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ.
ಬಿಜೆಪಿಯ ಪಾಲಿಕೆ ಸದಸ್ಯರಾದ ಎಂ. ಪ್ರಮೀಳಾ, ಆರ್.ಪ್ರತಿಮಾ, ದೀಪಾ ನಾಗೇಶ್, ಉಮಾವತಿ ಪದ್ಮರಾಜ್, ಕುಮಾರಿ ಪಳನಿಕಾಂತ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಅವರಿದ್ದ ಏಕಸದಸ್ಯ ವಿಚಾರಣೆಯನ್ನು ಮುಂದೂಡಿತು. ಬುಧವಾರ ಅರ್ಜಿಯ ವಿಚಾರಣೆ ಪುನಃ ನಡೆಯುವ ಸಾಧ್ಯತೆ ಇದೆ. [ಶಾಸಕರು, ಸಂಸದರಿಗೆ ಮತದಾನದ ಹಕ್ಕು ಏಕೆ?]

ಬಿಬಿಎಂಪಿ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮತದಾನ ಮಾಡುವ ಹಕ್ಕು ನೀಡಬಾರದು ಎಂದು ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಸೆ.11ರ ಶುಕ್ರವಾರ ಮೇಯರ್ ಆಯ್ಕೆ ಚುನಾವಣೆ ಇದ್ದು, ಅಷ್ಟರೊಳಗೆ ಬಿಜೆಪಿ ಪರವಾಗಿ ತೀರ್ಪು ಬಂದರೆ ಮೇಯರ್ ಆಯ್ಕೆ ಲೆಕ್ಕಾಚಾರ ಬದಲಾವಣೆಯಾಗಲಿದೆ. [ಮೇಯರ್ ಹುದ್ದೆ ಮ್ಯಾಜಿಕ್ ನಂಬರ್ 131]
ಮೇಯರ್ ಮತ್ತು ಉಪ ಮೇಯರ್ ಪಟ್ಟ ಪಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಬಿಜೆಪಿಯವರು ಸದಸ್ಯರನ್ನು ಸೆಳೆಯಬಹುದು ಎಂಬ ಭೀತಿಯಲ್ಲಿ ಜೆಡಿಎಸ್ ಸದಸ್ಯರು ಕೇರಳ ಮತ್ತು ಕಾಂಗ್ರೆಸ್ ಸದಸ್ಯರು ಮಡಿಕೇರಿ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬಿಜೆಪಿಯ ಮೌನ : ಸೆಪ್ಟೆಂಬರ್ 11ರ ಶುಕ್ರವಾರ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದರೆ, ಬಿಜೆಪಿ ಇದುವರೆಗೂ ತನ್ನ ಕಾರ್ಯತಂತ್ರವೇನು? ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮೇಯರ್ ಆಯ್ಕೆಗೆ ಮ್ಯಾಜಿಕ್ ನಂಬರ್ 131. ಹೈಕೋರ್ಟ್ ತೀರ್ಪು ಬಿಜೆಪಿ ಪರವಾಗಿ ಬಂದರೆ, ಚುನಾವಣೆಯಲ್ಲಿ 100 ಸ್ಥಾನಗಳನ್ನು ಗಳಿಸಿರುವ ಪಕ್ಷ ಮೇಯರ್ ಗದ್ದುಗೆ ಏರಲಿದೆ.












Click it and Unblock the Notifications