ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಕೋಲ್ಡ್ ಮಿಕ್ಸ್ ಬಳಕೆ
ಬೆಂಗಳೂರು, ಜೂನ್ 9: ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಸಹಜ ಎನ್ನುವಂತ ಸ್ಥಿತಿ ಇದೆ. ಅವೈಜ್ಞಾನಿಕ ಕಾಮಗಾರಿಗಳು, ಕಳಪೆ ಕಾಮಗಾರಿಗಳ ಕಾರಣ ರಸ್ತೆಗಳಲ್ಲಿ ಗುಂಡಿ ಬೀಳುತ್ತಲೇ ಇದೆ. ಹಲವರ ಪ್ರಾಣವನ್ನು ಬಲಿ ಪಡೆದ ನಿದರ್ಶನಗಳೂ ಇದೆ.
ಅವಧಿಗೂ ಮೊದಲೇ ಮಳೆಗಾಲ ಶುರುವಾಗಿದೆ. ಗುಂಡಿಗಳ ಸಮಸ್ಯೆ ಬಗ್ಗೆ ಜನರ ಆಕ್ರೋಶ ಹೆಚ್ಚಾಗಿದೆ. ಸಮೀಪದಲ್ಲೇ ಬಿಬಿಎಂಪಿ ಚುನಾವಣೆಯೂ ಇದೆ. ಹಾಗಾಗಿ ದಿಢೀರ್ ಎಚ್ಚೆತ್ತ ಬಿಬಿಎಂಪಿ ಗುಂಡಿ ಮುಚ್ಚಲು ಸಿದ್ಧವಾಗಿದೆ.
ಮಳೆಗಾಲದಲ್ಲಿ ಡಾಂಬರು ಹಾಕಿ ಗುಂಡಿ ಮುಚ್ಚುವುದು ಕಷ್ಟ. ಹಾಗಾಗಿ ಬಿಬಿಎಂಪಿ ಹದಗೆಟ್ಟ ರಸ್ತೆಗಳ ಗುಂಡಿ ಮುಚ್ಚಲು ಕೋಲ್ಡ್ ಮಿಕ್ಸ್ ಬಳಸಲು ಚಿಂತನೆ ನಡೆಸಿದೆ.
ಡಾಂಬರೀಕರಣಕ್ಕೆ ಹೋಲಿಸಿಕೊಂಡರೆ ಕೋಲ್ಡ್ ಮಿಕ್ಸ್ ಬಳಕೆ ಅಗ್ಗವಾಗಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಬಳಸಬಹುದು ಎನ್ನುತ್ತಾರೆ ಅಧಿಕಾರಿಗಳು. ಪ್ರತಿದಿನ 250 ಚೀಲ ಕೋಲ್ಡ್ ಮಿಕ್ಸ್ ತಯಾರಿಸುವ ಘಟಕ ಸ್ಥಾಪಿಸಲು 6 ಕೋಟಿ ರುಪಾಯಿ ಖರ್ಚು ಮಾಡಲು ಯೋಜನೆ ರೂಪಿಸಿದೆ.

ಕೆಂಗೇರಿಯಲ್ಲಿ ಉತ್ಪಾದನಾ ಘಟಕ
ಮೂರು ವರ್ಷಗಳ ಅವಧಿಗೆ ಕೆಂಗೇರಿಯಲ್ಲಿರುವ ಬ್ಯಾಚ್ ಮಿಕ್ಸ್ ಪ್ಲಾಂಟ್‌ನ ಪಕ್ಕದಲ್ಲಿ ಸಿದ್ಧ ಡಾಂಬರು ಕೋಲ್ಡ್ ಮಿಕ್ಸ್ ಪರಿವರ್ತಕಗಳನ್ನು ಒದಗಿಸಲು ಕಳೆದ ತಿಂಗಳು ನಾಗರಿಕ ಸಂಸ್ಥೆ ಟೆಂಡರ್ ಕರೆದಿದೆ. ಬಿಡ್ ಪೂರ್ವ ಸಭೆಯಲ್ಲಿ ಭಾಗವಹಿಸಿದ ಬಿಡ್ಡರ್‌ಗಳು ಕನಿಷ್ಠ 35 ಪ್ರಶ್ನೆಗಳನ್ನು ಕೇಳಿದ್ದರು, ಟೆಂಡರ್ ಷರತ್ತುಗಳನ್ನು ಕಳಪೆಯಾಗಿ ರಚಿಸಲಾಗಿದೆ ಎಂದು ದೂರಲಾಗಿದೆ.
ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರಸ್ತುತ ಕಣ್ಣೂರಿನಲ್ಲಿ ತನ್ನದೇ ಆದ ಬ್ಯಾಚ್ ಮಿಕ್ಸ್ ಪ್ಲಾಂಟ್ ಅನ್ನು ಬಳಸಿಕೊಂಡು ಗುಂಡಿಗಳನ್ನು ಮುಚ್ಚುತ್ತಿದೆ. ಗುಂಡಿಗಳನ್ನು ಮುಚ್ಚುವ ಸ್ವಯಂಚಾಲಿತ ಯಂತ್ರವನ್ನುನಿಯೋಜಿಸಿದೆ.

ಮಳೆಗಾಲದಲ್ಲಿ ಕೋಲ್ಡ್ ಮಿಕ್ಸ್ ಸೂಕ್ತ
ಮಳೆಗಾಲದಲ್ಲಿ ಹಾಟ್ ಮಿಕ್ಸ್ ಡಾಂಬರು ಬಳಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಕೋಲ್ಡ್ ಮಿಕ್ಸ್ ಡಾಂಬರು ಹೆಚ್ಚು ಕಾಲ ಉಳಿಯುವುದಿಲ್ಲ ಆದರೆ ಮಳೆಗಾಲದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹೊಸ ಸ್ಥಾವರವು ಗಂಟೆಗೆ 100 ರಿಂದ 120 ಟನ್ ಶೀತ ಮಿಶ್ರಣವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಗುಂಡಿಗಳನ್ನು ಮುಚ್ಚಲು ಬಳಸಲಾಗುತ್ತದೆ" ಎಂದು ಅಧಿಕಾರಿಯೊಬ್ಬರು ಹೇಳಿದರು.

ಅರ್ಧ ಕಿ.ಮೀ. ಉದ್ದದ ರಸ್ತೆಯಲ್ಲಿ 40 ಗುಂಡಿಗಳು
ಬೆಂಗಳೂರು-ಮೈಸೂರು ರಸ್ತೆಯಲ್ಲಿ ನೈಸ್ ಜಂಕ್ಷನ್‌ನಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ಅರ್ಧ ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಗುಂಡಿಗಳಿವೆ. ವಾಹನ ಸವಾರರು ಗುಂಡಿಗಳ ಕಾರಣ ನರಕ ಯಾತನೆ ಅನುಭವಿಸುತ್ತಿದ್ದಾರೆ. ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸುವ ಪರಿಸ್ಥಿತಿ ಇಲ್ಲಿದೆ.
ಇಲ್ಲಿನ ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬ ವಾಹನ ಸವಾರನು ಸರ್ಕಾರಕ್ಕೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾನೆ. ಅಷ್ಟರ ಮಟ್ಟಿಗೆ ಈ ರಸ್ತೆಯಲ್ಲಿ ಗುಂಡಿಗಳಿವೆ. ಇಲ್ಲಿ ನೋಡಿದರೆ ರಸ್ತೆಯಲ್ಲಿ ಗುಂಡಿಯೋ, ಗುಂಡಿಯಲ್ಲಿ ರಸ್ತೆಯೋ ಎನ್ನುವಂತಿದೆ.
ಕಳೆದ ಆರು ತಿಂಗಳಿನಿಂದ ರಸ್ತೆ ಹಾಳಾಗಿದ್ದು, ಇಂದಿಗೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇನ್ನು ಈ ರಸ್ತೆ ಬಿಎಂಆರ್‌ಸಿಎಲ್ ಅಧೀನದಲ್ಲಿದ್ದು ಬಿಬಿಎಂಪಿ ಸುಪರ್ದಿಗೆ ಇನ್ನೂ ಹಸ್ತಾಂತರಿಸಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ರಂಗನಾಥ್ ಸೂಚನೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರದ ಎಲ್ಲಾ ಗುಂಡಿಗಳನ್ನು ಮುಚ್ಚಲು ಎಂಜಿನಿಯರ್‌ಗಳಿಗೆ ಸೂಚಿಸಿದ್ದರು ಮತ್ತು ಜೂನ್ 6 ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದರು. ಆದರೆ ಇನ್ನೂ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣವಾಗಿಲ್ಲ.
ಪ್ರತಿ ಮಳೆಗಾಲ ಬಂದಾಗಲೂ ಅಥವಾ ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿ ಯಾರಾದರೂ ಸತ್ತಾಗ ಒಂದೆರಡು ದಿನ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಗ ಗುಂಡಿ ಮುಚ್ಚುತ್ತೇವೆ ಎಂದು ಭರವಸೆ ನೀಡುವ ಸಚಿವರು, ಬಿಬಿಎಂಪಿ ಜನರ ಕಣ್ಣೊರೆಸಲು ಗುಂಡಿ ಮುಚ್ಚುತ್ತಾರೆ. ಗುಂಡಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.












Click it and Unblock the Notifications