ಬೆಂಗಳೂರು: ನೀರುಗಾಲುವೆ-ಕೆರೆ ಒತ್ತುವರಿ ತೆರವು ಮಾಡಿದ್ದರ ಲೆಕ್ಕ ಕೊಟ್ಟ ಬಿಬಿಎಂಪಿ
ಬೆಂಗಳೂರು, ಡಿಸೆಂಬರ್ 15: ಬೆಂಗಳೂರಿನಲ್ಲಿ ಬೃಹತ್ ನೀರುಗಾಲುವೆ, ಕೆರೆ ಒತ್ತುವರಿ ಆಗಿದ್ದಕ್ಕೆ ಈ ಹಿಂದೆ ಬಿಬಿಎಂಪಿ ಆಯುಕ್ತರು ಸೂಚಿಸಿದ್ದರು. ಅದರಂತೆ ಅಧಿಕಾರಿಗಳು ಅಕ್ರಮ ಒತ್ತುವರಿ ತೆರವು ಮಾಡಿದ್ದರ ಕುರಿತು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರ ಅಂಕಿ ಸಂಖ್ಯೆಗಳು ಇಲ್ಲಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ಶುಕ್ರವಾರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೃಹತ್ ನೀರುಗಾಲುವೆ ಹಾಗೂ ಕೆರೆಗಳಲ್ಲಿ ಸರ್ವೇ ಮಾಡಲು ಹೆಚ್ಚು ಭೂಮಾಪಕರ ಅವಶ್ಯಕತೆ ಇದೆ. ಕಂದಾಯ ಇಲಾಖೆಯ ಅಡಿ ಬರುವ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗೆ ಪತ್ರ ಬರೆದು ಹೆಚ್ಚು ಭೂಮಾಪಕರನ್ನು ನಿಯೋಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಸರ್ವೇ ನಡೆಸಿ ಮಾರ್ಕ್ ಮಾಡಬೇಕು. ತಹಶೀಲ್ದಾರ್ ರವರಿಂದ ಆದೇಶಗಳನ್ನು ಜಾರಿ ಮಾಡಿರುವಂತಹ ಒತ್ತುವರಿಗಳನ್ನು ಕೂಡಲೆ ತೆರವುಗೊಳಿಸಬೇಕು. ಹೈಕೋಟ್ ತಡೆಯಾಜ್ಞೆಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಎಂದರು.
ಒತ್ತುವರಿ ತೆರವುಗೊಳಿಸಿರುವ ವಿವರ
ನಗರದಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕ್ರಿಯೆ ಸಕ್ರಿಯವಾಗಿ ನಡೆಯುತ್ತಿದೆ. ಕಳೆದ 15 ದಿನಗಳಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿ ಬರುವ ಎಬಿಕೆ, ಗುಂಜೂರು, ಕರಿಯಮ್ಮನ ಅಗ್ರಹಾರ, ಬೆಳ್ಳತ್ತೂರಿನಲ್ಲಿ ಹಾಗೂ ಕೆ.ಆರ್ ಪುರದ ಸರ್ವೇ ಸಂಖ್ಯೆ 69ರಲ್ಲಿ ಬರುವ 3 ಅಂತಸ್ತಿನ ಕಟ್ಟಡದಲ್ಲಿ ಬರುವ 10 ಮಳಿಗೆಗಳು ಸೇರಿದಂತೆ 62 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ಇನ್ನು ಯಲಹಂಕ ವಲಯ ವ್ಯಾಪ್ತಿಯಲ್ಲಿ 8 ಒತ್ತುವರಿಗಳು ಹಾಗೂ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 5 ಒತ್ತುವರಿಗಳು ಸೇರಿದಂತೆ ಒತ್ತು 75 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ಬೃಹತ್ ನೀರುಗಾಲುವೆ ಒತ್ತುವರಿ-ತೆರವು ಮಾಹಿತಿ
ನಗರದಲ್ಲಿ ಹೊಸ ಒತ್ತುವರಿಗಳು ಸೇರಿದಂತೆ 3176 ಒತ್ತುವರಿಗಳನ್ನು ಗುರುತಿಸಲಾಗಿದ್ದು, 2322 ಒತ್ತುವರಿಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಇನ್ನು 854 ಒತ್ತುವರಿಗಳನ್ನು ತೆರವುಗೊಳಿಸುವುದು ಬಾಕಿ ಇದೆ. ಈ ಪೈಕಿ 155 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿರುತ್ತದೆ. 487 ಒತ್ತುವರಿಗಳಿಗೆ ಆದೇಶಗಳನ್ನು ಜಾರಿಗೊಳಿಸುವ ಹಂತದಲ್ಲಿದೆ.

ಇನ್ನು 162 ಒತ್ತುವರಿಗಳಿಗೆ ತಹಶಿಲ್ದಾರಿಂದ ಆದೇಶಗಳನ್ನು ಜಾರಿಗೊಳಿಸಲಾಗಿದ್ದು, ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕಿದೆ ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಕೆರೆಗಳ ಒತ್ತುವರಿಗಳ ಸರ್ವೇಗೆ ಸೂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 159 ಕೆರೆಗಳಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಗುರುತಿಸಲಾಗಿದೆ. ಅದರಂತೆ 140 ಕೆರೆಗಳಲ್ಲಿ ಒತ್ತುವರಿಯಾಗಿರುವ ಬಗ್ಗೆ ತಹಶೀಲ್ದಾರರಿಗೆ ಪತ್ರಗಳನ್ನು ಬರೆಯಲಾಗಿದೆ. ಈ ಪೈಕಿ 40 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, 100 ಕೆರೆಗಳಲ್ಲಿ ಸರ್ವೇ ಕಾರ್ಯ ನಡೆಸಬೇಕಿದೆ. ಉಳಿದ ಕೆರೆಗಳಲ್ಲಿ ಸರ್ವೇಕಾರ್ಯವನ್ನು ತ್ವರಿತವಾಗಿ ನಡೆಸಲು ಆಯುಕ್ತರು ನಿರ್ದೇಶಿಸಿದರು.
ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಬಿಎಂಟಿಎಫ್ ಸೂಪರಿಡೆಂಟ್ ಆಫ್ ಪೊಲೀಸ್ ಡಾ. ವಿ.ಜೆ ಶೋಭಾ ರಾಣಿ, ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಪ್ರಧಾನ ಅಭಿಯಂತರರು ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications