ಬೀದಿ ಬದಿ ಕಸ ಎಸೆದರೆ ದಂಡ: ಬಿಬಿಎಂಪಿ ಮೇಯರ್
ಬೆಂಗಳೂರು, ಡಿ.04: ಜನವರಿ 01ರಿಂದ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ, ಉಗುಳುವಂತಿಲ್ಲ. ಒಂದುವೇಳೆ ಈ ಕೃತ್ಯ ಎಸಗುವುದು ಕಂಡು ಬಂದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಮೇಯರ್ ಬಿ.ಎನ್ ಮಂಜುನಾಥ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರ ಮೈದಾನದಲ್ಲಿ ಗುರುವಾರ ಬಿಬಿಎಂಪಿ ಆಯೋಜಿಸಿದ್ದ ಕಸ ವಿಂಗಡಣೆ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಹೊಸ ವರ್ಷದಿಂದ ಬೀದಿಬದಿಯಲ್ಲಿ ಕಸ ಎಸೆಯುವರರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದರು.[ಪ್ಯಾರಿಸ್ ಶೃಂಗಸಭೆಯಲ್ಲಿ ಗಾರ್ಡನ್ ಸಿಟಿಯ ಸ್ಕ್ರಾಪ್ ಡೀಲರ್]
ತ್ಯಾಜ್ಯ ವಿಂಗಡಣೆ ಸಮಸ್ಯೆ: ಕಸ ವಿಂಗಡಣೆ ಮಾಡದೆ ಇರುವುದೇ ಸಮಸ್ಯೆ ಉಲ್ಬಣಕ್ಕೆ ಮುಖ್ಯ ಕಾರಣವಾಗಿದೆ. ಇದರಿಂದ ಕಸ ವಿಲೇವಾರಿ ಹಾಗೂ ನಿರ್ವಹಣೆ ಕಷ್ಟವಾಗುತ್ತಿದ್ದು, ಸಾಕಷ್ಟು ಸಮಯ ಹಾಳಾಗುತ್ತಿದೆ ಎಂದರು.

ದಿನ ನಿತ್ಯ ಮನೆ ಬಳಿಗೆ ಬರುವ ಪೌರಕಾರ್ವಿುಕರಿಗೆ ಕಸ ನೀಡದೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಪಕ್ಕದ ಖಾಲಿ ಸೈಟು, ರಸ್ತೆಯ ಮೂಲೆಯಲ್ಲಿ ಕಸದ ರಾಶಿ ಹಾಕುವ ಅಭ್ಯಾಸ ಇರಿಸಿಕೊಂಡವರಿಗೆ ಪಾಠ ಕಲಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಈ ರೀತಿಯ ಅಭ್ಯಾಸ ತಡೆಗಟ್ಟುವ ಸಲುವಾಗಿ ರಸ್ತೆ ಪಕ್ಕ ಕಸ ಎಸೆಯುವರಿಗೆ ಮೊದಲು ನೋಟಿಸ್ ನೀಡಲಾಗುವುದು. ಆ ನಂತರ ಕಸ ಎಸೆದರೆ 500 ರು. ದಂಡ ವಿಧಿಸಲಾಗುವುದು. ಅದು ಪುನರಾವರ್ತನೆಯಾದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು. [ಬೆಂಗಳೂರಿನ ರಸ್ತೆಗಳ ತುಂಬಾ ರಾಶಿ-ರಾಶಿ ಕಸ]
ಹಸಿ ಕಸವನ್ನು ಗೊಬ್ಬರವನ್ನಾಗಿ ತಯಾರಿಸಬಹುದು. ಆದರೆ, ಅದರೊಂದಿಗೆ ಒಣ ಕಸ ಸೇರ್ಪಡೆಯಾದರೆ ಆ ಪ್ರಕ್ರಿಯೆ ಅಸಾಧ್ಯ. ಅಲ್ಲದೆ, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕೂಡ ಕಸ ಬೇರ್ಪಡಿಸಿಯೇ ಘಟಕಗಳಿಗೆ ಸರಬರಾಜು ಮಾಡಬೇಕು ಎಂದು ಆದೇಶಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಕಸ ಶೇಖರಿಸುವ ಡಬ್ಬಿಗಳನ್ನು ವಿತರಿಸಲಾಯಿತು. ಈ ವೇಳೆ ಸಚಿವ ದಿನೇಶ್ ಗುಂಡೂರಾವ್, ಶಾಸಕ ಗೋಪಾಲಯ್ಯ, ಉಪ ಮೇಯರ್ ಹೇಮಲತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications