ಸಿಲಿಕಾನ್ ಸಿಟಿ ಜನರಿಗೆ ದಿಢೀರ್ ಶಾಕ್: ಇನ್ಮುಂದೆ ಕಸಕ್ಕೂ ಕಟ್ಟಬೇಕು ಟ್ಯಾಕ್ಸ್
ಬೆಂಗಳೂರು, ಮಾರ್ಚ್ 31: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸುವ ಮೂಲಕ ಜನರಿಗೆ ಗುಡ್ ನ್ಯೂಸ್ ನೀಡಿತ್ತು. ಇದೀಗ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳು ಸೇರಿದಂತೆ ವಿದ್ಯುತ್, ಹಾಲಿನ ದರವನ್ನ ಸರ್ಕಾರ ಹೆಚ್ಚಳ ಮಾಡುವ ಮೂಲಕ ಜನರಿಗೆ ಶಾಕ್ ಕೊಟ್ಟಿದ್ದು, ಇದೀಗ ಏಪ್ರಿಲ್ 1 ರಿಂದ ಬೆಂಗಳೂರು ನಿವಾಸಿಗಳಿಗೆ ಡಬಲ್ ಡಬಲ್ ಶಾಕ್ ಎದುರಾಗಲಿದೆ.
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಬೆಂಗಳೂರು ಜನತೆಗೆ ಏಪ್ರಿಲ್ ಒಂದರಿಂದ ಮತ್ತೊಂದು ಆಘಾತ ಎದುರಾಗಿದ್ದು, ಈಗಾಗಲೇ ಘೋಷಣೆಯಾಗಿರುವಂತೆ ಬಸ್ ದರ ಏರಿಕೆ ಮಾಡುವ ಮೂಲಕ ಜನರಿಗೆ ಹೊರೆಯಾಗಿದೆ. ಈ ನಡುವೆ ಬಜೆಟ್ ಬಳಿಕ ಹಾಲು, ವಿದ್ಯುತ್ ದರ ಏರಿಕೆ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಅದರ ಜತೆ ಜತೆಗೇ ಬಿಸಾಡುವ ಕಸಕ್ಕೂ ತೆರಿಗೆ ಪಾವತಿಸಬೇಕಾಗಲಿದ್ದು, ಏಪ್ರಿಲ್ ಒಂದರಿಂದ ಬಿಬಿಎಂಪಿ ಕಸ ತೆರಿಗೆ ಜಾರಿಗೆ ಬರಲಿದೆ.

ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲು, ವಿದ್ಯುತ್ ದರ ಏರಿಕೆ ಮಾಡಿದ್ದು, ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಅದರೊಂದಿಗೆ, ಕಸಕ್ಕೂ ತೆರಿಗೆ ಪಾವತಿ ಮಾಡಬೇಕಾಗಿ ಬರಲಿದೆ. ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸೂಚಿಸಿದೆ. ಈ ವಿಚಾರವಾಗಿ ಬಿಬಿಎಂಪಿ ಬಜೆಟ್ನಲ್ಲೂ ಘೋಷಣೆ ಮಾಡಲಾಗಿದ್ದು, ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿದೆ.
ಅಂಗಡಿ, ಹೊಟೇಲ್, ರೆಸಿಡೆನ್ಸಿಯಲ್ ಕಟ್ಟಡಗಳಿಗೆ ವಿಭಿನ್ನ ರೀತಿಯ ತೆರಿಗೆ ವಿಧಿಸಲಾಗುತ್ತಿದೆ. ಹೊಟೆಲ್‌ಗಳಿಗೆ ಈ ಮೊದಲು ಒಂದು ಕೆಜಿ ಕಸಕ್ಕೆ ಐದು ರೂಪಾಯಿ ನಿಗಧಿ ಮಾಡಲಾಗಿತು. ಇದೀಗ 12 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ರೆಸಿಡೆನ್ಶಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಅಲೆಕ್ಕದಲ್ಲಿ ಸೆಸ್ ದರ ನಿಗಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಂಗಡಿ-ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಅಲ್ಲದೇ ಕಟ್ಟಡದ ವಿಸ್ತೀರ್ಣದ ಆಧಾರತದ ಮೇಲೆ ಕಸದ ಶುಲ್ಕ ನಿಗದಿಪಡಿಸಲಾಗುತ್ತದೆ. ಆಸ್ತಿ ತೆರಿಗೆ ಜೊತೆಯೇ ಕಸ ತೆರಿಗೆಯನ್ನೂ ಪಾಲಿಕೆ ಸಂಗ್ರಹ ಮಾಡಲಿದೆ ಎಂದು ಹೇಳಿದೆ. ಬೆಂಗಳೂರಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಪ್ರತೀ ಮನೆ ಬಾಗಿಲಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುವುದು ಮತ್ತು ವಿಲೇವಾರಿ ಮಾಡುತ್ತದೆ. ಹೀಗಾಗಿ ಈ ಶುಲ್ಕ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿತ್ತು.
ಕಟ್ಟಡದ ವಿಸ್ತೀರ್ಣದ ಮೇಲೆ ತೆರಿಗೆ ನಿಗದಿಪಡಿಸಲಾಗುತ್ತದೆ. 600 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 10 ರೂ. ತೆರಿಗೆ ವಿಧಿಸಿಲಾಗುತ್ತದೆ. ಅಲ್ಲದೇ 600 ಚದರ ಅಡಿಯಿಂದ 1000 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 50 ರೂ. ತೆರಿಗೆ ನಿಗದಿಪಡಿಸಲಾಗುತ್ತದೆ. ಸಾವಿರದಿಂದ 2 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 100 ರೂ, 2 ಸಾವಿರದಿಂದ 3 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 150 ರೂ, 3 ಸಾವಿರ ದಿಂದ 4 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 200 ರೂ. ಹಾಗೂ 4 ಸಾವಿರ ಚದರ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 400 ರೂ. ಕಸ ತೆರಿಗೆ ವಿಧಿಸಲಾಗುತ್ತದೆ.












Click it and Unblock the Notifications