ಕೇವಲ 1 ವಾರ್ಡ್‌ನಲ್ಲಿ ಬೀದಿ ದೀಪ ಅಳವಡಿಸಲು ಬಿಬಿಎಂಪಿ ಖರ್ಚು ಮಾಡೋ ಹಣ ಎಷ್ಟು ಗೊತ್ತಾ?
ಬೆಂಗಳೂರು, ಏಪ್ರಿಲ್ 22 : ಬೆಂಗಳೂರಿನ ಒಂದೇ ಒಂದು ವಾರ್ಡ್‌ನಲ್ಲಿರುವ ಪಾರ್ಕ್, ಮುಖ್ಯ ರಸ್ತೆಗಳಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬರೋಬ್ಬರಿ 4.5 ಕೋಟಿ ರೂಪಾಯಿ ಖರ್ಚು ಮಾಡುತ್ತದೆ ಎಂದು ಬೆಂಗಳೂರಿನ ನವ ನಿರ್ಮಾಣ ಪಾರ್ಟಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ತಿಳಿದು ಬಂದಿದೆ.
ಬಿಬಿಎಂಪಿ ನಗರದಲ್ಲಿರುವ ಎಲ್ಲಾ ವಾರ್ಡ್‌ಗಳಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲು ಯೋಜನೆ ಏನು ರೂಪಿಸಿದೆ, ಆದರೆ ಈವರೆಗೂ ಈ ಕಾರ್ಯ ಮಾತ್ರ ನಡೆದಿಲ್ಲ. ಆದರೆ ಇದಕ್ಕಾಗಿ ಮಾತ್ರ ಕೋಟಿ ಕೋಟಿ ಹಣ ಮಾತ್ರ ವ್ಯಯ ಮಾಡುತ್ತಿದೆ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಬಿಎನ್‌ಪಿ ಕಳೆದ ಕೆಲ ತಿಂಗಳ ಹಿಂದೆ #ಲೆಕ್ಕಬೇಕು ಎಂಬ ಅಭಿಯಾನವನ್ನು ಕೂಡ ಮಾಡಿತ್ತು. ಈ ಅಭಿಯಾನದ ಮೂಲಕ ನೂರಾರು ಕೋಟಿ ಜನರು ಕಟ್ಟುವ ತೆರಿಗೆ ಹಣವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಲಾಗುತ್ತಿತ್ತು.
ಯಾವ ವಾರ್ಡ್ ಅದು?
ಬಿಬಿಎಂಪಿ ಹೀಗೆ ಬೀದಿ ದೀಪಕ್ಕಾಗಿ 4.5 ಕೋಟಿ ಯೋಜನೆ ರೂಪಿಸಿದ ವಾರ್ಡ್ ಎಂದರೆ ಅದು ಯಲಹಂಕ ನ್ಯೂಟೌನ್. ಒಂದೇ ವಾರ್ಡ್‌ಗೆ ಇಷ್ಟೊಂದು ಹಣ ಖರ್ಚಾಗುತ್ತಿದೆ. ಆದರೆ, ನಗರದ ಹಲವು ವಾರ್ಡ್‌ಗಳಲ್ಲಿ ಈಗಲೂ ಕೂಡ ಎಲ್‌ಇಡಿ ಬೀದಿ ದೀಪಗಳಿಲ್ಲ, ಬದಲಾಗಿ ಕಳಪೆ ಗುಣಮಟ್ಟದ ದೀಪಗಳನ್ನು ಅಳವಡಿಸಲಾಗಿದೆ. ಇನ್ನು ಕೆಲವೆಡೆ ಮುಖ್ಯ ರಸ್ತೆಗಳಲ್ಲೆ ಬೀದಿ ದೀಪಗಳಿಲ್ಲದೆ, ಜನರು ಕತ್ತಲಲ್ಲಿ ಸಂಚರಿಸಬೇಕಾದ ದುಸ್ಥಿತಿ ಇದೆ. ಬಿಬಿಎಂಪಿ 4.5 ಕೋಟಿ ಖರ್ಚು ಮಾಡುತ್ತಿದ್ದರೂ ಕೂಡ ಸೆಂಟ್ರಲ್ ಮಾಲ್ ಮುಂದೆ ಇರುವ ರಸ್ತೆಯಲ್ಲೇ ಬೀದಿ ದೀಪ ಇಲ್ಲ, ಇದಿಷ್ಟೇ ಅಲ್ಲದೆ ಯಲಹಂಕ ನ್ಯೂಟೌನ್‌ನ 13ನೇ ಮಖ್ಯ ರಸ್ತೆ ಹಾಗೂ 8ನೇ ಕ್ರಾಸ್‌ನಲ್ಲೂ ಕೂಡ ಹಳೆಯ ದೀಪಗಳನ್ನ ಅಳವಡಿಸಿದ್ದು, ಅವು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ನಿತ್ಯ ಆ ರಸ್ತೆಗಳಲ್ಲಿ ಓಡಾಡುವ ಜನ ಸಾಮಾನ್ಯರಿಗೆ ಸಮಸ್ಯೆ ಉಂಟಾಗುತ್ತಿದೆ.

ಬೆಂಗಳೂರಿನ ಹಲವು ವಾರ್ಡ್‌ಗಳಲ್ಲಿ ಸರಿಯಾದ ಬೀದಿ ದೀಪಗಳಿಲ್ಲದೆ ಇರುವುದು ಕೂಡ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬಿಬಿಎಂಪಿ ಎಲ್‌ಇಡಿ ದೀಪಗಳನ್ನ ಅಳವಡಿಸುತ್ತೇವೆ ಎಂದು ಬಾಯಿ ಮಾತಲ್ಲಿ ಹೇಳುತ್ತಿದ್ದು ಇದುವರೆಗೂ ಆ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಇದರಿಂದ ಬೀದಿ ದೀಪಗಳಿಲ್ಲದ ರಸ್ತೆಗಳಲ್ಲಿ ಸಂಚರಿಸುವ ಜನರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಕತ್ತಲಿರುವ ರಸ್ತೆಗಳಲ್ಲಿ ಸಂಚರಿಸಬೇಕಾದರೆ ಗುಂಡಿಗಳೇನಾದರೂ ಇದ್ದರೆ, ಅಪಘಾತ ಆಗುವ ಸಂಭವವೂ ಹೆಚ್ಚಿರುತ್ತದೆ. ಇನ್ನು ಪಾದಚಾರಿಗಳು ಸಹ ಧೈರ್ಯವಾಗಿ ರಾತ್ರಿ ವೇಳೆ ಸಂಚರಿಸಲು ಸಹ ಸಾಧ್ಯವಾಗುವುದಿಲ್ಲ. ಸದ್ಯ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ಬಿಬಿಎಂಪಿ ಮಾತ್ರ ಒಂದು ವಾರ್ಡ್‌ನಲ್ಲಿ ಎಲ್‌ಇಡಿ ಬೀದಿ ದೀಪ ಹಾಕಲು ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಇದರಿಂದ ಜನರಿಗೆ ಯಾವುದೇ ಅನುಕೂಲ ಮಾತ್ರ ಆಗಿಲ್ಲ.
ಬಿಬಿಎಂಪಿ ನಿರ್ಲಕ್ಷ್ಯತನದ ಬಗ್ಗೆ ಬಿಎನ್‌ಪಿಯ ಆಡಳಿತ ಮಂಡಳಿ ಸದಸ್ಯ ಡಾ. ಸುನೀಲ್ ಕುಮಾರ್ ಹೆಬ್ಬಿ ಪ್ರತಿಕ್ರಿಯೆ ನೀಡಿದ್ದು, "ಬಿಬಿಎಂಪಿ ಹೊಸ ಎಲ್‌ಇಡಿ ದೀಪಗಳನ್ನ ಅಳವಡಿಸಲು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಜನ ಸಾಮಾನ್ಯರಿಗೆ ಬೀದಿ ದೀಪಗಳು ಕೂಡ ಮೂಲಸೌಕರ್ಯವಿದ್ದಂತೆ. ಆದರೆ, ಬಿಬಿಎಂಪಿ ಇದನ್ನು ಕೂಡ ನಿರ್ಲಕ್ಷಿಸಿದರೆ ಹೇಗೆ ? ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಂಡು ಬೀದಿ ದೀಪಗಳನ್ನ ನಗರದ ಎಲ್ಲಾ ಕಡೆ ಅಳವಡಿಬೇಕಿದೆ," ಎಂದು ಒತ್ತಾಯಿಸಿದ್ದಾರೆ.

ಬಿಎನ್‌ಪಿ ಸಂಘಟನೆಯ ಮತ್ತೊಬ್ಬ ಸದಸ್ಯರಾದ ಕಮಲೇಶ್ ನಿಚಾನಿ ಮಾತನಾಡಿದ್ದು, "ಬಿಬಿಎಂಪಿಗೆ ಈ ಬಗ್ಗೆ ಎಷ್ಟೇ ದೂರುಗಳು ನೀಡಿದರು ಅದಕ್ಕೆ ಯಾವುದೇ ಉತ್ತರಗಳು ಸಿಗುತ್ತಿಲ್ಲ. ಎರಡು ವರ್ಷಗಳಿಂದ ಪಾಲಿಕೆಯು ಎಲ್‌ಇಡಿ ದೀಪಗಳನ್ನ ಅಳವಡಿಸುವುದಾಗಿ ಭರವಸೆ ನೀಡುತ್ತಿದೆ. ಆದರೆ ಇದುವರೆಗೂ ನಗರದಲ್ಲಿರುವ ಒಂದು ವಾರ್ಡ್‌ನಲ್ಲಿ ಎಲ್‌ಇಡಿ ದೀಪವನ್ನ ಅಳವಡಿಸಿಲ್ಲ. ಹೀಗಾಗಿ ಇಲ್ಲಿನ ಜನರು ಕತ್ತಲೆಯಲ್ಲೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ. ಈಗಲಾದರೂ ಬಿಬಿಎಂಪಿ ನಮ್ಮ ದೂರುಗಳನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು," ಎಂದು ಮನವಿ ಮಾಡಿಕೊಂಡಿದ್ದಾರೆ.
ಬೀದಿ ದೀಪಗಳ ಅಳವಡಿಕೆಗಾಗಿಯೇ ಕೋಟಿಗಟ್ಟಲೆ ಖರ್ಚು ಮಾಡುತ್ತಿರುವ ಬಿಬಿಎಂಪಿ. ಆದಷ್ಟು ಬೇಗ ನಗರದಲ್ಲಿರುವ ಎಲ್ಲಾ ವಾರ್ಡ್‌ಗಳಲ್ಲೂ ತ್ವರಿತವಾಗಿ ಎಲ್‌ಇಡಿ ದೀಪ ಅಳವಡಿಸಬೇಕಿದೆ. ಆ ಮೂಲಕವಾದರೂ ಕೋಟಿಗಟ್ಟಲೆ ಖರ್ಚು ಮಾಡುತ್ತಿರುವುದಕ್ಕೆ ಒಂದು ಸಾರ್ಥಕತೆ ಸಿಕ್ಕಂತಾಗುತ್ತದೆ. ಇದರಿಂದ ನಾಗರಿಕರಿಗೂ ಕೂಡ ಸಹಾಯವಾಗಲಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಸೂಚಿಸಬೇಕಿದೆ.












Click it and Unblock the Notifications