ಕೋವಿಡ್ ಸಂಖ್ಯೆ ಕುಸಿತ; ಕೇರ್ ಸೆಂಟರ್ ಮುಚ್ಚಿದ ಬಿಬಿಎಂಪಿ
ಬೆಂಗಳೂರು, ಜುಲೈ 19; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 11,751.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚುತ್ತಿದೆ. ಈಗ ಪ್ರತಿದಿನ ಸುಮಾರು 30 ಜನರು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾಗುತ್ತಿದ್ದಾರೆ.
ಬಿಬಿಎಂಪಿ ನಗರದ 50 ಕೋವಿಡ್ ಕೇರ್ ಸೆಂಟರ್, ಟ್ರಯಾಜ್ ಸೆಂಟರ್‌ಗಳನ್ನು ಮುಚ್ಚಿದೆ. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ನಗರದಲ್ಲಿ 60 ಸಿಸಿಸಿ ಮತ್ತು ಟ್ರಯಾಜ್ ಸೆಂಟರ್ ಆರಂಭಿಸಲಾಗಿತ್ತು. ಇವುಗಳಲ್ಲಿ 30ಕ್ಕೂ ಹೆಚ್ಚು 10 ಹಾಸಿಗೆಗಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದವು.

ಪ್ರಸ್ತುತ ಬಿಬಿಎಂಪಿ 8 ಕೋವಿಡ್ ಕೇರ್ ಸೆಂಟರ್‌ಗಳನ್ನು ಇಟ್ಟುಕೊಂಡಿದ್ದು, 300 ಹಾಸಿಗೆಗಳನ್ನು ಹೊಂದಿದೆ. ಮುಂದಿನ ಮೂರು ತಿಂಗಳ ಮುನ್ಸೂಚನೆಗಳನ್ನು ಬಿಬಿಎಂಪಿ ಗಮನದಲ್ಲಿಟ್ಟುಕೊಂಡಿದೆ. ಅಗತ್ಯವಿದ್ದರೆ ತಕ್ಷಣ ಅವುಗಳನ್ನು ಆರಂಭಿಸಲು ಸಹ ತಯಾರಾಗಿರಲಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಖಾಸಗಿ ಆಸ್ಪತ್ರೆಗಳ ಬೆಡ್‌ಗಳಿಗೂ ಬೇಡಿಕೆ ತಗ್ಗಿದೆ. 13 ಸಾವಿರ ಬೆಡ್‌ಗಳ ಬೇಡಿಕೆ ಇತ್ತು, ಪ್ರಸ್ತುತ 5 ಸಾವಿರಕ್ಕೆ ಇಳಿಕೆಯಾಗಿದ್ದು, ಜುಲೈ ಅಂತ್ಯದಲ್ಲಿ ಇದು 1,800ಕ್ಕೆ ಕುಸಿಯುವ ನಿರೀಕ್ಷೆ ಇದೆ.
ಜುಲೈ 15ರ ಮಾಹಿತಿಯಂತೆ ಸರ್ಕಾರಿ ಕೋಟಾದ 6,446 ಹಾಸಿಗೆಗಳು ನಗರದಲ್ಲಿ ಲಭ್ಯವಿದೆ. ಇವುಗಳಲ್ಲಿ 350 ಮಾತ್ರ ಭರ್ತಿಯಾಗಿದೆ. ಇವುಗಳಲ್ಲಿ 92 ರೋಗಿಗಳು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ.












Click it and Unblock the Notifications