ಬಿಬಿಎಂಪಿಯಿಂದ ಮಕ್ಕಳಿಗೆ ವಿಶೇಷ ಕೋವಿಡ್ ಕೇಂದ್ರ ಸ್ಥಾಪನೆ
ಬೆಂಗಳೂರು, ಜುಲೈ 16: ಸಂಭಾವ್ಯ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ವ್ಯಕ್ತಗೊಂಡಿರುವ ಹಿನ್ನೆಲೆಯಲ್ಲಿ ಹಲವು ಸಿದ್ಧತೆಗಳನ್ನು ಕೈಗೊಂಡಿದ್ದು, ಪದ್ಮನಾಭನಗರದಲ್ಲಿ ಮಕ್ಕಳಿಗಾಗಿ ವಿಶೇಷ ಕೊರೊನಾ ಆರೈಕೆ ಕೇಂದ್ರ ತೆರೆದಿರುವುದಾಗಿ ಬಿಬಿಎಂಪಿ ತಿಳಿಸಿದೆ.
"ಮಕ್ಕಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆಯನ್ನು ಕೆಲವು ತಜ್ಞರು ನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಚಿಕಿತ್ಸೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸೋಂಕಿತ ಮಕ್ಕಳೊಂದಿಗೆ ಇರಲು ತಾಯಂದಿರಿಗೂ ಅವಕಾಶ ಕಲ್ಪಿಸಲಾಗುವುದು" ಎಂದು ಬೆಂಗಳೂರು ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದ್ದಾರೆ.
"ಸದ್ಯಕ್ಕೆ ಪದ್ಮನಾಭನಗರದ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಕೋಆಪರೇಟಿವ್ ಮ್ಯಾನೇಜ್ಮೆಂಟ್‌ನಲ್ಲಿ 42 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಮೂಲಸೌಕರ್ಯ ಹಾಗೂ ಆಮ್ಲಜನಕ ಸೌಲಭ್ಯವನ್ನು ಈ ಆಸ್ಪತ್ರೆ ಹೊಂದಿದ್ದು, ಕೇವಲ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಮಕ್ಕಳ ಚಿಕಿತ್ಸೆಗೆ ಸಹಕಾರಿಯಾಗಲಿದೆ" ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

"ಮಕ್ಕಳನ್ನು ಆಸ್ಪತ್ರೆಯಲ್ಲಿರಿಸುವುದು ಕಷ್ಟ. ಹೀಗಾಗಿ ಅವರಿಗಿಷ್ಟವಾಗುವಂತೆ ಪ್ರಾಣಿ, ಪಕ್ಷಿ ಹಾಗೂ ಕಲಾಕೃತಿಗಳನ್ನು ಗೋಡೆ ಮೇಲೆ ಬಿಡಿಸಿ ವಿಶೇಷವಾಗಿ ಅಲಂಕರಿಸಲಾಗಿದೆ" ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ಅಂತಸ್ತಿನ ಆಸ್ಪತ್ರೆಯ ನೆಲಮಾಳಿಗೆಯನ್ನು ಗರ್ಭಿಣಿಯರ ಚಿಕಿತ್ಸೆಗೆ ಮೀಸಲಿರಿಸಲಾಗಿದೆ.












Click it and Unblock the Notifications