ಏಕ ಬಳಕೆ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಮಳಿಗೆಗಳಿಗೆ ಬೀಗ ಜಡಿದ ಬಿಬಿಎಂಪಿ, ವಿಧಿಸಿದ ದಂಡ?
ಬೆಂಗಳೂರು, ಡಿಸೆಂಬರ್ 15: ಬೆಂಗಳೂರಿನಲ್ಲಿ ಅದೆಷ್ಟೋ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಕರೆ ಕೊಟ್ಟಿದೆ. ಜಾಗೃತಿ ಮೂಡಿಸಿದರೂ ಸಹಿತ ಬಳಕೆ ಮಾಡುತ್ತಿದ್ದ ಕೆಲವು ಮಳಿಗೆಗಳಿಗೆ ಖುದ್ದು ಅಧಿಕಾರಿಗಳೇ ಮುಂದೆ ನಿಂತು ಬೀಗ ಜಡಿದಿದ್ದಾರೆ.
ಹೌದು, ಎಂಟು ವಲಯಗಳಲ್ಲಿ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಏಕ ಬಳಕೆ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿರುವ ಮಳಿಗೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಕಂಡು ಬಂದ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ 6 ಮಳಿಗೆಗಳಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಬೀಗ ಹಾಕಿ ಸೀಲ್ ಮಾಡಿದ ಘಟನೆ ಗುರುವಾರ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿಯು, ರಾಜರಾಜೇಶ್ವರಿ ನಗರದ ಜೆ.ಪಿ ಪಾರ್ಕ್ ವಾರ್ಡ್ ನ ಮೋಹನ್ ಕುಮಾರ್ ಮುಖ್ಯ ರಸ್ತೆಯಲ್ಲಿ ಬರುವ ಮಳಿಗೆಗಳು ಹಾಗೂ ರಾಜರಾಜೇಶ್ವರಿ ನಗರ ವಾರ್ಡ್ ನ ಐಡಿಯಲ್ ಹೋಮ್ಸ್ ನಲ್ಲಿನ ಜವಹಾರ್ ಲಾಲ್ ನೆಹರು ರಸ್ತೆಯಲ್ಲಿರುವ ಮಳಿಗೆಗಳಿಗೆ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಈಗಗಾಲೇ ಸೂನಚೆ ನೀಡಲಾಗಿತ್ತು.
ಈ ಅಂಗಡಿಗಳು ಮುಂದಿನ ಆದೇಶವರೆಗೆ ಬಂದ್
ಹೀಗಿದ್ದರೂ ಸಹಿತ ಗುರುವಾರ ಪರಿಶೀಲನೆ ನಡೆಸಿದ ವೇಳೆ ಏಕ ಬಳಕೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿರುವುದು ಪತ್ತೆ ಆಗಿದೆ. ಇದನ್ನು ಗಮನಿಸಿದ ಅಧಿಕಾರಿಗಳು ಜೆಪಿ ಪಾರ್ಕ್ ವಾರ್ಡ್ ನಲ್ಲಿ ಆರ್.ಎಸ್ ವೆಜಿಟೆಬಲ್ ಮಳಿಗೆ, ಗ್ರೀನ್ ವಾಲಿ ಫಾರಂ, ಜಾಫರ್ ಫೋಟ್ ಶಾಪ್ ಹಾಗೂ ಆರ್.ಆರ್ ನಗರ ವಾರ್ಡ್ ನಲ್ಲಿ ಮಾತಾಜಿ ಡಿಪಾರ್ಟ್ಮೆಂಟಲ್ ಸ್ಟೋರ್ಸ್, ಸತೀಶ್ ಸ್ಟೋರ್ಸ್, ಕನಕಶ್ರೀ ಕ್ರೀಯೇಷನ್ಸ್ ಸೇರಿದಂತೆ ಒಟ್ಟು ಆರು ಮಳಿಗೆಗಳಿಗೆ ಬೀಗ ಹಾಕಿ ಬಂದ್ ಮಾಡಿಸಿದ್ದಾರೆ.

ಮಳಿಗೆಗಳ ಮುಂದೆ ಬಿತ್ತಿಪತ್ರ
ರಾಜರಾಜೇಶ್ವರಿನಗರ ವಲಯದ ಬಿಬಿಎಂಪಿ ಆಯುಕ್ತರು, ವಲಯ ಜಂಟಿ ಆಯುಕ್ತರ ಸೂಚನೆಯಂತೆ ಈ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಮಳಿಗೆಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ. ಇನ್ನೂ ಮಳಿಗೆಗಳ ಮುಂಭಾಗದಲ್ಲಿ ಈ ಅಂಗಡಿ ಮಳಿಗಯಲ್ಲಿ ಏಕ ಬಳಕೆ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಈ ಹಿಂದೆ ಹಲವಾರು ಬಾರಿ ಸೂಚನೆ ನೀಡಿಯೂ ಸಹ ಏಕ ಬಳಕೆ ನಿಷೇದಿತ ಪ್ಲಾಸ್ಟಿಕ್ ಬಳಸುತ್ತಿರುವುದು ದೃಢಪಟ್ಟಿದೆ.
ಹೀಗಾಗಿ ಪ್ಲಾಸ್ಟಿಕ್ ನಿಷೇಧ ಅಧಿಸೂಚನೆ ನಿಯಮ 4(ಸಿ), 4(ಡಿ) ಮತ್ತು 14(1) ರ ಅನ್ವಯ ಹಾಗೂ ಹಸಿರು ನ್ಯಾಯಾಧೀಕರಣ ಮಂಡಳಿ ರಾಜ್ಯಮಟ್ಟದ ಸಮಿತಿ ರವರ ನಿರ್ದೇಶನಗಳಂತೆ ಈ ಮಳಿಗೆಯನ್ನು ಮುಂದಿನ ಆದೇಶದವರೆವಿಗೂ ಬಿಬಿಎಂಪಿಯು ಬಂದ್ ಮಾಡು ಕ್ರಮ ಕೈಗೊಂಡಿರುತ್ತದೆ ಎಂದು ಮಳಿಗೆ ಮುಂದೆ ಬಿತ್ತಿಪತ್ರವನ್ನು ಅಂಟಿಸಲಾಗಿದೆ.
ಮಳಿಗೆಗಳಿಂದ 44,400 ರೂ.ದಂಡ ವಸೂಲಿ
ಆರ್ ಆರ್ ನಗರ ವ್ಯಾಪ್ತಿಯಲ್ಲಿ ಒಮ್ಮೆ ಮಾತ್ರ ಬಳಕೆಗೆ ಯೋಗ್ಯವಾದ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳು ಸೇರದಿಂತೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ನಡೆಸುತ್ತಿದ್ದ ಮಳಿಗೆಗೆಗಳಿಂದ ಒಟ್ಟಾರೆ 44,400/- ರೂಪಾಯಿ ದಂಡವನ್ನು ಬಿಬಿಎಂಪಿ ವಸೂಲಿ ಮಾಡಿದೆ. ಮತ್ತೆ ಒತ್ತುವರಿ ಮಾಡದಂತೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಿದೆ ಎನ್ನಲಾಗಿದೆ.
ಮಾರ್ಷಲ್‌ಗಳಿಂದ ಈ ಬಗ್ಗೆ ಜಾಗೃತಿ
ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಕೈಚೀಲವನ್ನು ಬಳಸದಂತೆ ಬಿಬಿಎಂಪಿಯು ಸಾರ್ವಜನಿಕರಿಗೆ ಮಾರ್ಷಲ್ ಮೂಲಕ ಜಾಗೃತಿ ಮೂಡಿಸಿಸುತ್ತಿದೆ. ಈ ಮಾರ್ಷಲ್‌ಗಳು ಪ್ರತಿದಿನ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡುವ ಆಟೋಟಿಪ್ಪರ್‌ಗಳ ಧ್ವನಿವಧಕದ ಮೂಲಕ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಕೈಚೀಲವನ್ನು ಬಳಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಪರಿಶೀಲನೆಯ ವೇಳೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಭಿಯಂತರರು ಮತ್ತು ಸಿಬ್ಬಂದಿಗಳು, ಕಾಮಗಾರಿ ವಿಭಾಗದ ಅಭಿಯಂತರರು, ಆರೋಗ್ಯ ವಿಭಾಗದ ಅಧಿಕಾರಿಗಳು, ಮಾರ್ಷಲ್ ಗಳು ಹಾಗೂ ಸ್ಥಳೀಯ ಪೋಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು












Click it and Unblock the Notifications