Holiday: ರಂಜಾನ್ ರಜೆಯಲ್ಲಿದ್ದವರಿಗೆ ಶಾಕ್, ಸರ್ಕಾರಿ ರಜೆ ಇದ್ರೂ ಕೆಲಸ ಮಾಡಲು ಸೂಚನೆ
ರಂಜಾನ್ ಪ್ರಯುಕ್ತ ಸೋಮವಾರದಂದು (ಮಾರ್ಚ್ 31) ಸರ್ಕಾರಿ ರಜೆ ಘೋಷಣೆಯಾಗಿದೆ. ಯುಗಾಗಿ ಹಾಗೂ ಈದ್ ಪ್ರಯುಕ್ತ ಸರಣಿ ರಜೆ ಇರುವ ಕಾರಣ ಬಹುತೇಕರು ಮನೆಯಲ್ಲಿ ಹಬ್ಬ ಆಚರಿಸಿ, ಹೊರಗೆ ಸುತ್ತಾಡಿಕೊಂಡು ಬರೋಣ ಅಂತಾ ಪ್ಲ್ಯಾನ್ ಕೂಡ ಮಾಡಿಕೊಂಡಿರುತ್ತಾರೆ. ಸರ್ಕಾರಿ ನೌಕರರು ಕೂಡ ರಜೆಗಾಗಿ ಕಾಯುತ್ತಿರುತ್ತಾರೆ. ರಜೆ ಅಂತಾ ನೆಮ್ಮದಿಯಾಗಿ ಇರೋಣ ಎಂದುಕೊಂಡಿದ್ದ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದೊಡ್ಡ ಶಾಕ್ ನೀಡಿದೆ.
ಹೌದು, ಮಾರ್ಚ್ 30 ಹಾಗೂ 31ರಂದು ಸರ್ಕಾರಿ ರಜೆ ಇದ್ದರೂ ಆ ಎರಡು ದಿನ ಬಿಬಿಎಂಪಿ ಅಧಿಕಾರಿಗಳಿಗೆ ರಜೆ ಭಾಗ್ಯವಿಲ್ಲ. ರಜೆ ಇದ್ದರೇನು? ಎಲ್ಲರೂ ತಪ್ಪದೇ ಬಂದು ಕೆಲಸಕ್ಕೆ ಹಾಜರಾಗಿ ಎಂದು ಖಡಕ್ ಸೂಚನೆ ನೀಡಲಾಗಿದೆ. ಏಕೆಂದರೆ 2024-25ನೇ ಸಾಲಿನ ಆರ್ಥಿಕ ವರ್ಷ ಮುಗಿಯುತ್ತಿರುವ ಕಾರಣ ಮಾರ್ಚ್ 30 ಹಾಗೂ 31ರಂದು ಸರ್ಕಾರಿ ರಜೆ ಇದ್ದರೂ ಸಹ ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಟ್ಟಡಗಳಿಂದ ಪಾವತಿ ಮಾಡಬೇಕಾದ ಆಸ್ತಿ ತೆರಿಗೆ ಹಾಗೂ ಸೇವಾ ಶುಲ್ಕವನ್ನು ಮಾರ್ಚ್ 31ರೊಳಗೆ ಪಾವತಿಸುವುದರಿಂದ ಅದರ ಬಡ್ಡಿ ಮೊತ್ತವನ್ನು ಮನ್ನಾ ಮಾಡುವ ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಸದ್ಯ ಜಾರಿಯಲ್ಲಿದೆ. ಅಲ್ಲದೆ ಬಾಕಿ ಇರುವ ಆಸ್ತಿ ತೆರಿಗೆ ಹಾಗೂ ಸೇವಾಶುಲ್ಕವನ್ನು ಕೂಡ ವಸೂಲಾತಿ ಮಾಡಬೇಕಾಗಿದೆ. ಮತ್ತೊಂದೆಡೆ ಸರ್ಕಾರದ ಅಧಿಸೂಚನೆಯಂತೆ ಏಪ್ರಿಲ್ 1ರಿಂದ ಬಾಕಿ ಆಸ್ತಿ ತೆರಿಗೆ ಮೇಲೆ ದಂಡ ಕೂಡ ವಿಧಿಸಲಾಗುತ್ತಿದೆ. ಈ ಹಿನ್ನೆಲೆ ತೆರಿಗೆದಾರರು ಬಾಕಿ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆಯ ಕಚೇರಿಗಳಿಗೆ ಭೇಟಿ ನೀಡಲಿರುವ ಕಾರಣ ಈ ಎರಡೂ ದಿನ ಯಾವುದೇ ರಜೆ ಇಲ್ಲದೆ ಕೆಲಸಕ್ಕೆ ಬಂದು ಹಾಜರಾಗುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಈ ಕಾರಣಕ್ಕೆ ಸಿಬ್ಬಂದಿಗೆ ರಜೆ ನಿರಾಕರಿಸಲಾಗಿದೆ. ಹಾಗಾಗಿ ಸೋಮವಾರದಂದು ರಂಜಾನ್ ರಜೆ ಬದಿಗಿಟ್ಟು, ಪಾಲಿಕೆಯ ಕಂದಾಯ ವಿಭಾಗದ ಎಲ್ಲ ಸಿಬ್ಬಂದಿ ತಮ್ಮ ಉಪವಿಭಾಗ ಮತ್ತು ವಾರ್ಡ್‌ನ ಕಚೇರಿಗಳಲ್ಲಿ ಕೆಲಸ ಮಾಡಲೇಬೇಕಾಗಿದೆ. ಸಿಬ್ಬಂದಿಯು ಬಾಕಿ ಆಸ್ತಿ ತೆರಿಗೆ ವಸೂಲಾತಿಗೆ ಎಲ್ಲ ರೀತಿಯ ಕ್ರಮ ವಹಿಸುವಂತೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಅಧಿಕಾರಿ ಮುನೀಶ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಬಜೆಟ್ ಮಂಡಿಸಿದ ಬಿಬಿಎಂಪಿ: ಬೆಂಗಳೂರಿನ ಭವಿಷ್ಯಕ್ಕಾಗಿ ಮಾರ್ಚ್ 29ರಂದು ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಗಾರರಾದ ಎಸ್.ಆರ್ ಉಮಾಶಂಕರ್ ಅವರ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರು ಬಜೆಟ್ ಮಂಡಿಸಿದರು. 2025-26ನೇ ವರ್ಷದಲ್ಲಿ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 19,930.64 ಕೋಟಿ ರೂಪಾಯಿಗಳಷ್ಟಿದ್ದು, ಒಟ್ಟು ಖರ್ಚು 19,927.08 ಕೋಟಿ ರೂಪಾಯಿ ಎನ್ನಲಾಗಿದೆ.












Click it and Unblock the Notifications