Bengaluru Karaga: ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಲ್ವಾ?
ಬೆಂಗಳೂರಿನಲ್ಲಿ ನಡೆಯುವ ಐತಿಹಾಸಿಕ ಕರಗ ಮಹೋತ್ಸವವು ತಡರಾತ್ರಿ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿಯಾಗಿ ಕರಗವನ್ನು ಕಣ್ತುಂಬಿಕೊಂಡಿದ್ದಾರೆ. ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ಈ ಕರಗ ಮಹೋತ್ಸವಕ್ಕೆ ಈ ಬಾರಿ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೆ ಸರ್ಕಾರ ಕೂಡ ಸ್ಪಷ್ಟನೆ ನೀಡಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಭಾರಿ ವಾಗ್ವಾದ ಕೂಡ ನಡೆದಿದೆ.
ಕರಗ ಉತ್ಸವಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಜೆಡಿಎಸ್ ಆರೋಪ ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್, ಕರಗ ಉತ್ಸವಕ್ಕೆ ಬಿಬಿಎಂಪಿ ವತಿಯಿಂದ ಶುಕ್ರವಾರವೇ ಹಣ ಬಿಡುಗಡೆಯಾಗಿದ್ದು, ಸರಿಯಾಗಿ ಮಾಹಿತಿ ಇಲ್ಲದೆ ಟ್ವೀಟ್ ಮಾಡುವ ಅಯೋಗ್ಯರನ್ನು ಬಿಟ್ಟು ಸ್ವಲ್ಪ ತಲೆ ಇರುವವರನ್ನು ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಿಸಲು ಇಟ್ಟುಕೊಳ್ಳಿ ಎಂದು ಟಾಂಗ್ ನೀಡಿತ್ತು.

ಚಾಮುಂಡೇಶ್ವರಿ ದೇವಸ್ಥಾನ, ಮಲೆ ಮಹದೇಶ್ವರ ಕ್ಷೇತ್ರ, ಹುಲಿಗೆಮ್ಮ ದೇವಸ್ಥಾನ, ಸವದತ್ತಿಯ ಯಲ್ಲಮ್ಮ, ಅಂಜನಾದ್ರಿ ಬೆಟ್ಟ, ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿರುವುದು ನಮ್ಮ ಕಾಂಗ್ರೆಸ್ ಸರ್ಕಾರವೇ ಹೊರತು ಹಿಂದೂ ಪರ ಎಂದು ಬೊಗಳೆ ಬಿಡುವ ನೀವಲ್ಲ. ಇದೇ ರೀತಿ ಸದಾ ಸುಳ್ಳನೇ ಹೇಳುತ್ತಾ ಹೋದರೆ, ರಾಜ್ಯದ ಜನ ಕ್ಯಾಕರಿಸಿ ಉಗಿಯುವುದು ನಿಶ್ಚಿತವಾಗಿದ್ದು, ಇದನ್ನು ನೋಡಿ ನಿಮ್ಮ ನಾಯಕರಾದ ಬ್ರದರ್ ಸ್ವಾಮಿ ಅವರು ಕಣ್ಣೀರು ಹಾಕುತ್ತಾರೆ ಅಷ್ಟೆ ಎಂದು ಲೇವಡಿ ಮಾಡಿತ್ತು.
ಇದಕ್ಕೆ ಮತ್ತೆ ತಿರುಗೇಟು ನೀಡಿದ್ದ ಜೆಡಿಎಸ್, ಕುಣಿಯಲಾರದವರು ನೆಲ ಡೊಂಕು ಎಂದರಂತೆ, ಸಚಿವ ರಾಮಲಿಂಗಾರೆಡ್ಡಿ ಅವರೇ ಇದು ನಿಮಗೆ ಒಪ್ಪುವ ಮಾತು, ಮುಜರಾಯಿ ಇಲಾಖೆಯ ಯೋಗ್ಯತೆಯನ್ನು ಸ್ವತಃ ಕರಗ ಸಮಿತಿಯವರೇ ಬಿಚ್ಚಿಟ್ಟಿದ್ದಾರೆ. ಒಮ್ಮೆ ಕಿವಿಗೊಟ್ಟು ಕೇಳಿ ಎಂದು ವಿಡಿಯೋ ಹಂಚಿಕೊಂಡಿತ್ತು. ಕರಗ ಉತ್ಸವಕ್ಕೆ ಶುಕ್ರವಾರವೇ ಹಣ ಬಿಡುಗಡೆ ಮಾಡಿದ್ದರೆ, ಕರಗ ಹೊರುವ ಅರ್ಚಕರು, ಸಮಿತಿಯವರು ಯಾಕೆ ತಮ್ಮ ಕೈಯಿಂದ ಸ್ವಂತ 60 ಲಕ್ಷ ರೂಪಾಯಿ ಹಣ ಹಾಕಿ ಉತ್ಸವ ನಡೆಸುತ್ತಿದ್ದಾರೆ? ಕರಗ ಉತ್ಸವಕ್ಕೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಮಾಧ್ಯಮಗಳ ಮುಂದೆ ಯಾಕೆ ಅಳಲು ತೋಡಿಕೊಳ್ಳುತ್ತಿದ್ದರು? ಹಣ ಬಿಡುಗಡೆಗೂ ಪರ್ಸೆಂಟೇಜ್ ವ್ಯವಹಾರವೇ? ಎಂದು ಕುಟುಕಿತ್ತು.

ಬಿಜೆಪಿ ಕೂಡ ಇದೇ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕೈ ಕೊಟ್ಟಿದೆ ಕಾಂಗ್ರೆಸ್ ಸರ್ಕಾರ ಎಂದು ದೂರಿತ್ತು. ಕರಗ ಆರಂಭವಾಗಿ ಮುಗಿಯುವ ದಿನ ಬಂದರೂ, ಕರಗಕ್ಕೆ ಸರ್ಕಾರದಿಂದ ಇದುವರೆಗೂ ಅನುದಾನ ನೀಡಿಲ್ಲ. ಸರ್ಕಾರದ ಬಿಡಿಗಾಸು ಅನುದಾನವಿಲ್ಲದೆ, ಕರಗವೊಂದು ಮುಗಿಯುತ್ತಾ ಬಂದಿರುವುದು ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊದಲು. ಕರಗಕ್ಕೆ ಅನುದಾನ ನೀಡಲು ನಿಮ್ಮ ಸರ್ಕಾರದ ಬಳಿ ದುಡ್ಡಿಲ್ಲವೇ, ಅಥವಾ ಆ ದುಡ್ಡನ್ನು ಸಹ ಓಲೈಕೆ ರಾಜಕಾರಣಕ್ಕೆ ಮೀಸಲಿಟ್ಟಿರುವಿರೇ ಎಂದು ಕುಟುಕಿತ್ತು.
ಬಿಬಿಎಂಪಿ ಸ್ಪಷ್ಟನೆ ಏನು?
ಕರಗ ಮಹೋತ್ಸವಕ್ಕೆ ಹಣ ಬಿಡುಗಡೆ ಮಾಡಿರುವ ಸಂಬಂಧ ಬಿಬಿಎಂಪಿ ಕೂಡ ಸ್ಪಷ್ಟನೆ ನೀಡಿದೆ. ವಿಶ್ವ ವಿಖ್ಯಾತ ಬೆಂಗಳೂರು "ಕರಗ ಶಕ್ತ್ಯೋತ್ಸವ" ಆಚರಣೆಗಾಗಿ ಬಿಬಿಎಂಪಿ ವತಿಯಿಂದ ಈಗಾಗಲೇ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಾದ ಭಾರತೀಯ ಸ್ಟೇಟ್ ಬ್ಯಾಂಕ್, ಕಂದಾಯ ಭವನ, IFSC, SBINOO41072, ಖಾತೆ ಸಂಖ್ಯೆ: 64146306027ಗೆ ಸುಮಾರು 40 ಲಕ್ಷ ರೂಪಾಯಿ ಮೊತ್ತವನ್ನು ಏಪ್ರಿಲ್ 11ರಂದೇ ಬೆಳಿಗ್ಗೆ 11.15 ಗಂಟೆಗೆ ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.












Click it and Unblock the Notifications