ಬಿಬಿಎಂಪಿ ಬಂದ್ ಮಾಡಿ ಮುಷ್ಕರ, ಸರ್ಕಾರಕ್ಕೆ ನೌಕರರ ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 27: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿರುವ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿದೆ. ಬೇಡಿಕೆ ಈಡೇರಿಸದಿದ್ದರೆ ಕೆಲಸ ಸ್ಥಗಿತಗೊಳಿಸಿ ಬಿಬಿಎಂಪಿ ಬಂದ್ ಮಾಡಿ ಧರಣಿ ಮಾಡುವುದಾಗಿ ಹೇಳಿದೆ.
ಖಾಲಿ ಹುದ್ದೆಗಳ ಭರ್ತಿ, ಸಮಾನ ಕೆಲಸಕ್ಕೆ ಸಮಾನ ವೇತನ, ಕೆಲಸ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸುವ ಕುರಿತು ಪೂರ್ವಭಾವಿ ಸಭೆಯನ್ನು ಸಹ ನಡೆಸಿದೆ.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಾಯಿಶಂಕರ್, ಎ. ಜಿ. ಬಾಬಣ್ಣ, ಉಪಾಧ್ಯಕ್ಷೆ ಡಾ. ಶೋಭಾ, ಡಿ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಕೆ. ಜಿ. ರವಿ, ಕಾರ್ಯಾಧ್ಯಕ್ಷ ಬಿ. ರುದ್ರೇಶ್ ಸೇರಿದಂತೆ ಸಂಘದ ಹಲವು ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮೇಯರ್ ಮತ್ತು ಉಪ ಮೇಯರ್ ಇಲ್ಲ. ಜನಪ್ರತಿನಿಧಿಗಳು ಇಲ್ಲದೇ ಸರ್ಕಾರ ನೇಮಕ ಮಾಡಿರುವ ಆಡಳಿತಾಧಿಕಾರಿಗಳು ಪಾಲಿಕೆ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ. ಈಗ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿರುವಾಗಲೇ ನೌಕರರು ಧರಣಿಯ ಎಚ್ಚರಿಕೆಯನ್ನು ನೀಡಿದ್ದಾರೆ.
ನೌಕರರ ಬೇಡಿಕೆಗಳು; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆ ಇದೆ. ಹಲವು ಹುದ್ದೆಗಳು ಖಾಲಿ ಇದ್ದು ನೇಮಕಾತಿಗಳು ಸಕಾಲದಲ್ಲಿ ನಡೆಯುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹೇಳಿದೆ. ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಎಂದು ಬೇಡಿಕೆ ಇಟ್ಟಿದೆ.
ವಿವಿಧ ಹುದ್ದೆಗಳು ಖಾಲಿ ಇರುವುದರಿಂದ ಪಾಲಿಕೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳಿಗೆ 5 ತಿಂಗಳ ಹಿಂದೆ ಸಹಾಯಕ ಆಯುಕ್ತ ವೃಂದಕ್ಕೆ ಹಾಗೂ ಕಂದಾಯ ಅಧಿಕಾರಿ ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ. ಆದರೆ ಸ್ಥಳ ನಿಯುಕ್ತಿಗೊಳಿಸಿಲ್ಲ ಎಂದು ಸಂಘ ಆರೋಪ ಮಾಡಿದೆ.
ಕೆಳ ಹಂತದ ನೌಕರರು ಮುಂಬಡ್ತಿ ಪಡೆಯಲು ವಂಚಿತರಾಗುತ್ತಿದ್ದಾರೆ. ವೃಂದ ಮತ್ತು ನೇಮಕಾತಿ ನಿಯಮಾವಳಿ ವಿರುದ್ಧವಾಗಿ ಕಾನೂನು ಬಾಹಿರವಾಗಿ ನಿಯಮಾವಳಿ ವಿರುದ್ಧವಾಗಿ ನಿಯೋಜನೆ/ ಎರವಲು ಸೇವೆ ಮೇಲೆ ಬಂದಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಬೇಕು ಎಂದು ಸಹ ಸಂಘ ಬೇಡಿಕೆ ಇಟ್ಟಿದೆ.
ಬಿಬಿಎಂಪಿಗೆ ಒಟ್ಟು 12,945 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ 6,414 ವಿವಿಧ ಹುದ್ದೆಗಳು ಖಾಲಿ ಇವೆ. ಇವುಗಳನ್ನು ತುಂಬಬೇಕು, ವಿವಿಧ ವೃಂದದ 5,219 ಹುದ್ದೆಗಳನ್ನು ಸೃಜಿಸಲು ಸರ್ಕಾರದ ಆರ್ಥಿಕ ಇಲಾಖೆಗೆ 3 ವರ್ಷಗಳ ಹಿಂದೆ ಪ್ರಸ್ತಾವನೆ ಕಳಿಸಲಾಗಿದೆ. ಆದರೆ ಮಂಜೂರಾತಿ ಸಿಕ್ಕಿಲ್ಲ ಎಂದು ಸಂಘ ದೂರಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ; ಬಿಬಿಎಂಪಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡುತ್ತಿರುವ ಅಧಿಕಾರಿ/ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಆದ್ದರಿಂದ ಅಗತ್ಯ ಅಧಿಕಾರಿ, ಸಿಬ್ಭಂದಿಗಳನ್ನು ನೇಮಿಸಬೇಕು. ಕಾನೂನು ಬಾಹಿರವಾಗಿ ನೇಮಕಗೊಂಡಿರುವ 800ಕ್ಕೂ ಅಧಿಕ ಮಾರ್ಷಲ್‌ಗಳ ನೇಮಕಾತಿ ರದ್ದುಗೊಳಿಸಬೇಕು ಎಂದು ಸಹ ಮನವಿ ಮಾಡಲಾಗಿದೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫ್ರೀಡಂಪಾರ್ಕ್‌ನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಮನವಿ ಸಲ್ಲಿಸಲಾಗಿದೆ. ಇದಕ್ಕೆ ತಕ್ಷಣ ಅನುಮತಿ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದೆ. ಸರ್ಕಾರ ಬೇಡಿಕೆಗಳಿಗೆ ಮನ್ನಣೆ ನೀಡದಿದ್ದರೆ ಕೆಲಸ ಸ್ಥಗಿತಗೊಳಿಸಿ, ಬಿಬಿಎಂಪಿ ಬಂದ್ ಮಾಡಿ ಮುಷ್ಕರ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.











Click it and Unblock the Notifications