ಬೆಂಗಳೂರಿನ ಅನಧಿಕೃತ ಪಬ್ಸ್, ಬಾರ್‌ಗಳ ಮೇಲೆ BBMP ಸಮರ, ಈ ದಿಢೀರ್ ನಿರ್ಧಾರ ಏಕೆ?, ಇಲ್ಲಿದೆ ಮಾಹಿತಿ
ಬೆಂಗಳೂರು, ಅಕ್ಟೋಬರ್, 21: ಕೋರಮಂಗಲದ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಬಿದ್ದು ವ್ಯಕ್ತಿಯೋರ್ವ ಬಿಲ್ಡಿಂಗ್‌ನಿಂದ ಹಾರಿ ಬಿದ್ದ ಘಟನೆ ಇನ್ನೂ ಕಣ್ಣಿಗೆ ಕಟ್ಟಿದ ಹಾಗೇ ಇದೆ. ಈ ಘಟನೆ ನಡೆದ ಬಳಿಕ ನಗರದಲ್ಲಿ ಸಾಕಷ್ಟು ಅನಧಿಕೃತ ಬಾರ್ ಮತ್ತು ಪಬ್ಸ್ ಇರುವುದು ಬೆಳಕಿಗೆ ಬಂದಿದೆ. ಅಂತಹ ಅನಧಿಕೃತ ಪಬ್ಸ್, ಬಾರ್‌ಗಳ ಮೇಲೆ ಬಿಬಿಎಂಪಿ ಸಮರ ಸಾರಿದೆ.
ಕೆಲವು ಕಟ್ಟಡಗಳ ರೂಪ್‍ಟಾಪ್‍ಗಳ ಮೇಲೆ ನಿರ್ಮಾಣ ಮಾಡಿರುವ ಬಾರ್‌ಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಈ ರೀತಿಯ ರೂಪ್ ಟಾಪ್ ನಿರ್ಮಾಣ ಮಾಡುವಾಗ ಅನುಮತಿ ತೆಗೆದುಕೊಳ್ಳುವ ಅನಿವಾರ್ಯತೆಯಿದೆ. ಆದರೆ ನಗರದ ಅದೆಷ್ಟೋ ಕಡೆ ಅನುಮತಿ ಪಡೆಯದೇ ನಾಯಿ ಕೊಡೆಯಂತೆ ಅಕ್ರಮ ರೂಪ್‍ಟಾಪ್ ಬಾರ್‌ಗಳ ನಿರ್ಮಾಣ ಆಗಿದೆ. ಈ ಹಿನ್ನೆಲೆ ರೂಪ್ ಟಾಪ್ ಬಾರ್ ಮೇಲೆ ಬಿಬಿಎಂಪಿ ದಾಳಿ ನಡೆಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿ ನೋಟಿಸ್ ನೀಡಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದ್ದು, ನ್ಯೂನ್ಯತೆಗಳು ಕಂಡುಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗಿರುತ್ತದೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದ್ದು, ಈ ಪೈಕಿ ನಿನ್ನೆ (ಅಕ್ಟೋಬರ್ 20) 232 ಉದ್ದಿಮೆಗಳನ್ನು ಪರಿಶೀಲನೆ ಮಾಡಲಾಗಿದೆ. ಅದರಲ್ಲಿ 86 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ 12 ಉದ್ದಿಮೆಗಳನ್ನು ಮುಚ್ಚಲಾಗಿರುತ್ತದೆ. ಸದರಿ ವಿವರ ಕೆಳಕಂಡಂತಿರುತ್ತದೆ.
| ಕ್ರಮ ಸಂಖ್ಯೆ, | ವಲಯ | ಪರವಾನಿಗೆ ನೀಡಿರುವ ಸಂಖ್ಯೆ | ತಪಾಸಣೆ ನಡೆಸಿರುವ ಸಂಖ್ಯೆ | ನೋಟಿಸ್ ನೀಡಿರುವ ಸಂಖ್ಯೆ | ಮುಚ್ಚಿರುವ ಸಂಖ್ಯೆಯ ವಿವರ |
| 1 | ದಕ್ಷಿಣ | 248 | 30 | 10 | 0 |
| 2 | ಪಶ್ಚಿಮ | 167 | 78 | 20 | 0 |
| 3 | ಪೂರ್ವ | 222 | 25 | 18 | 07 |
| 4 | ರಾಜರಾಜೇಶ್ವರಿನಗರ | 75 | 08 | 06 | 0 |
| 5 | ದಾಸರಹಳ್ಳಿ | 34 | 29 | 08 | 0 |
| 6 | ಯಲಹಂಕ | 110 | 18 | 0 | 0 |
| 7 | ಮಹದೇವಪುರ | 161 | 36 | 16 | 03 |
| 8 | ಬೊಮ್ಮನಹಳ್ಳಿ | 101 | 08 | 08 | 02 |
| ಒಟ್ಟು | 1118 | 232 | 86 | 12 | |












Click it and Unblock the Notifications