22 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಲ್ಲಿ ಬಿಬಿಎಂಪಿಯಿಂದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯೊಂದಿಗೆ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಅದು ವಾಹನಗಳನ್ನು ನಿಲ್ಲಿಸುವುದಕ್ಕೆ ಇರುವ ಸಮಸ್ಯೆ. ವಾಹನಗಳನ್ನು ಪಾರ್ಕಿಂಗ್ ಮಾಡುವುದಕ್ಕೆ ಜಾಗ ಸಿಗದೆ ವಾಹನ ಸಾವರರು ಬೆಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿ ಇದೆ. ಇದೀಗ ಬೆಂಗಳೂರಿನ ಪ್ರಮುಖ ಮಾರುಕಟ್ಟೆಯ ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
ಬೆಂಗಳೂರಿನ ಪ್ರಮುಖ ಮಾರುಕಟ್ಟೆಯ ಪ್ರದೇಶಗಳಲ್ಲಿ ಒಂದಾಗಿರುವ ಚಿಕ್ಕಪೇಟೆಯ ಗಾಂಧಿಬಜಾರ್‌ನಲ್ಲಿ ನಿರ್ಮಿಸಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಇದನ್ನು ಸಾರ್ವಜನಿಕ ಸೇವೆಗೆ ಒದಗಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಗಾಂಧಿ ಬಜಾರ್‌ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಈ ಸಂಬಂಧ ಕೂಡಲೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರೊಂದಿಗೆ ದಿನಾಂಕ ನಿಗದಿಪಡಿಸಿಕೊಂಡು ಕಟ್ಟಡ ಲೋಕಾರ್ಪಣೆ ಮಾಡಿ ಸಾರ್ವಜನಿಕ ಸೇವೆ ಸಮರ್ಪಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
22 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ: ಇನ್ನು ಬೆಂಗಳೂರಿನಲ್ಲಿ ಬರೋಬ್ಬರಿ 22 ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ ಮಾಡಲಾಗಿದೆ. ತಳ ಮಹಡಿ ಹಾಗೂ ನೆಲ ಮಹಡಿಯಲ್ಲಿ ವ್ಯಾಪಾರಕ್ಕಾಗಿ 50 ಮಳಿಗೆಗಳನ್ನು ನಿರ್ಮಿಸಲಾಗಿದೆ. ಮೊದಲನೇ ಮಹಡಿಯಿಂದ 4ನೇ ಮಹಡಿಯವರೆಗೆ ಕಾರ್‌ಗಳ ನಿಲುಗಡೆಗೆ ವ್ಯವಸ್ಥೆ (ಒಂದು ಮಹಡಿಯಲ್ಲಿ 31 ವಾಹನ) ಮಾಡಲಾಗಿದೆ. ಒಟ್ಟು 124 ವಾಹನಗಳನ್ನು ನಿಲುಗಡೆ ಮಾಡಬಹುದು. ಒಂದು ಲಿಪ್ಟ್, 6 ಶೌಚಾಲಯ, ಸ್ಟೆಪ್ಸ್ ಹಾಗೂ ಮೇಲ್ಚಾವಣಿಯಲ್ಲಿ ಟೆನ್ಸೆಲ್ ರೂಫಿಂಗ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗಾಂಧಿ ಬಜಾರ್ ರಸ್ತೆ ಪರಿಶೀಲನೆ: ಗಾಂಧಿ ಬಜಾರ್ ಮುಖ್ಯ ರಸ್ತೆಯ ಪ್ರವೇಶ ಹಾಗೂ ಗಾಂಧಿ ಬಜಾರ್ ವೃತ್ತದಲ್ಲಿ ಅಳವಡಿಸಿರುವ ಗ್ರಾನೈಟ್ ಕಾಬುಲ್ ಸ್ಟೋನ್, ಪಾದಚಾರಿ ಮಾರ್ಗದಲ್ಲಿ ಬೊಲಾರ್ಡ್ಸ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲಿಸಿ, ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಒಂದೇ ಮಾದರಿಯ ಛತ್ರಿಗಳನ್ನು ನೀಡಿ: ಗಾಂಧಿ ಬಜಾರ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಈಗಾಗಲೇ ಗಡಿಗಳನ್ನು ನಿಗದಿಪಡಿಸಲಾಗಿದೆ. ಆ ಪ್ರದೇಶದಲ್ಲೇ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ತಡೆಯಬೇಕು. ಇನ್ನು ಪ್ರಮುಖವಾಗಿ ಮಾರುಕಟ್ಟೆ ಆಕರ್ಷಕವಾಗಿ ಕಾಣಬೇಕಾದರೆ ಎಲ್ಲಾ ವ್ಯಾಪಾರಿಗಳಿಗೆ ಒಂದೇ ಮಾದರಿಯ ಛತ್ರಿಯನ್ನು ವಿನ್ಯಾಸಗೊಳಿಸಿ ಅದನ್ನು ವ್ಯಾಪಾರಿಗಳಿಗೆ ನೀಡಬೇಕು. ಈ ನಿಟ್ಟಿನಲ್ಲಿ ಯಾವ ಮಾದರಿಯ ಛತ್ರಿಗಳನ್ನು ನೀಡಬೇಕು ಎಂಬುದರ ಬಗ್ಗೆ ಅವಲೋಕಿಸಿ ವಿನ್ಯಾಸ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಸ-ರಸ ಘಟಕವನ್ನು ಮಾದರಿ ಸ್ಥಳವನ್ನಾಗಿ ರೂಪಿಸಿ: ಕೋರಮಂಗಲದಲ್ಲಿರುವ ಕಸ-ರಸ ಘಟಕವನ್ನು ಮಾದರಿ ಸ್ಥಳವನ್ನಾಗಿ ರೂಪಿಸಬೇಕು. ಈ ಸ್ಥಳಕ್ಕೆ ಅಧ್ಯಯನ ಮಾಡಲು/ತರಬೇತಿಗೆ ಬರುವವರಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕು. ಕಸ-ರಸ ಘಟಕದಲ್ಲಿ ಪುನರ್ಬಳಕೆ ಮಾಡಬಹುದಾದ ಸಾಮಗ್ರಿಗಳ ಸಂಗ್ರಹ ಘಟಕ, ಒಣತ್ಯಾಜ್ಯ ಸಂಗ್ರಹಣಾ ಘಟಕ, ಜೈವಿಕ ಅನಿಲ ಘಟಕ ಹಾಗೂ ಮಿನಿ ಟ್ರಾನ್ಸಫರ್ ಸ್ಟೇಷನ್ ಇದ್ದು, ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಹಾಗೂ ದುರ್ವಾಸನೆ ಬಾರದಂತೆ ಕಾಲಕಾಲಕ್ಕೆ ಸ್ಪ್ರೇ ಮಾಡಲು ಹೇಳಿದ್ದಾರೆ.












Click it and Unblock the Notifications