ಮೇಯರ್ ಚುನಾವಣೆಯಲ್ಲಿ ಗಮನ ಸೆಳೆದ ದೇವದಾಸ್ ಕಾವೇರಪ್ಪ
ಬೆಂಗಳೂರು, ಸೆಪ್ಟೆಂಬರ್ 28 : ಗದ್ದಲ, ಕೂಗಾಟ, ತಳ್ಳಾಟದ ನಡುವೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಗಿದಿದೆ. ಮೇಯರ್ ಆಗಿ ಗಂಗಾಂಬಿಕೆ, ಉಪ ಮೇಯರ್ ಆಗಿ ರಮೀಳಾ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಗಮನ ಸೆಳೆದಿದ್ದು ಬಿಟಿಎಂ ಲೇಔಟ್ ಕ್ಷೇತ್ರದ ಜೆಡಿಎಸ್ ಕಾರ್ಪೊರೇಟರ್ ದೇವದಾಸ್ ಕಾವೇರಪ್ಪ. ಮೊದಲು ಬಿಜೆಪಿ ಬೆಂಬಲಿಸುವೆ ಎಂದು ಹೇಳಿದ್ದ ಅವರು, ಕೊನೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಬೆಂಬಲ ನೀಡಿದರು.
ದೇವದಾಸ್ ಕಾವೇರಪ್ಪ ಅವರು ಶುಕ್ರವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, 'ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ನಾನು ಬಿಜೆಪಿಗೆ ಬೆಂಬಲ ನೀಡುವೆ. ಪಕ್ಷ ವಿಪ್ ಜಾರಿ ಮಾಡಿರುವ ಬಗ್ಗೆ ನನಗೆ ಏನೂ ತಿಳಿದಿಲ್ಲ' ಎಂದು ಹೇಳಿದ್ದರು.

ಆದರೆ, ಚುನಾವಣೆ ಪ್ರಕ್ರಿಯೆ ಆರಂಭವಾದಾಗ ದೇವದಾಸ್ ಕಾವೇರಪ್ಪ ಅವರು ಜೆಡಿಎಸ್ ನಾಯಕರ ಜೊತೆಗೆ ಕುಳಿತರು. ಮೇಯರ್ ಆಯ್ಕೆಯಲ್ಲಿಯೂ ಗಂಗಾಂಬಿಕೆ ಮಲ್ಲಿಕಾರ್ಜುನ ಅವರ ಪರವಾಗಿ ಮತದಾನ ಮಾಡಿದರು.
ದೇವದಾಸ್ ಕಾವೇರಪ್ಪ ಜೆಡಿಎಸ್ ಪಕ್ಷದ ಹಿರಿಯ ಕಾರ್ಪೊರೇಟರ್. ಸಾಮಾಜಿಕ ಜಾಲತಾಣದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ಅವರು ಬಿಟಿಎಂ ಲೇಔಟ್ ಕ್ಷೇತ್ರದಿಂದ ರಾಮಲಿಂಗಾ ರೆಡ್ಡಿ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು.












Click it and Unblock the Notifications