ಕೋವಿಡ್; ಬೆಂಗಳೂರಿನ ಶಾಲೆಗಳಿಗೆ ಬಿಬಿಎಂಪಿಯಿಂದ ಹೊಸ ಮಾರ್ಗಸೂಚಿ
ಬೆಂಗಳೂರು, ಜೂನ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ 2 ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಯಾವುದೇ ರೀತಿಯ ಊಹಾಪೋಹಗಳಿಗೆ ಭಯ ಪಡದೆ ಶಾಲೆಯ ಆಡಳಿತ ಮಂಡಳಿ ಮತ್ತು ಮಕ್ಕಳ ಪೋಷಕರು ಬಿಬಿಎಂಪಿ ಸೂಚಿಸುವ ಈ ಕೆಳಕಂಡ ಕ್ರಮಗಳನ್ನು ಪಾಲಿಸಬೇಕೆಂದು ಬಿಬಿಎಂಪಿ ಮನವಿ ಮಾಡಿದೆ.
ವಿದ್ಯಾಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು:
1. ತಮ್ಮ ಸಂಸ್ಥೆಯ ದ್ವಾರದಲ್ಲಿ ಪ್ರತೀ ದಿನ ಬೆಳಿಗ್ಗೆ ಪ್ರಾರಂಭದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡುವುದು.
2. ಸಂಸ್ಥೆಯ ಯಾವುದೇ ವಿದ್ಯಾರ್ಥಿಗಳು / ಸಿಬ್ಬಂದಿಗಳಲ್ಲಿ ಕೋವಿಡ್-19 ಸೋಂಕಿನ ಯಾವುದೇ ರೀತಿಯ ಲಕ್ಷಣ ಕಂಡು ಬಂದಲ್ಲಿ ಅಂತಹವರಿಗೆ ತಕ್ಷಣವೇ ಕೋವಿಡ್-19 ಪರೀಕ್ಷೆ ನಡೆಸಿ, ನಂತರ ಫಲಿತಾಂಶ ಬರುವವರೆಗೂ ಪ್ರತ್ಯೇಕವಾಗಿ ಇರಿಸುವುದು.

3. ಸಂಸ್ಥೆಯ ಆವರಣದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡಿರುವುದನ್ನು ಎಲ್ಲಾ ಸಮಯದಲ್ಲೂ ಖಚಿತಪಡಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡುವುದು ಇತ್ಯಾದಿ ಕೋವಿಡ್-19 ಖಾಯಿಲೆ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು.
4. ಸಂಸ್ಥೆಯ ಆವರಣದಲ್ಲಿ ಮುಖ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು.
ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ವಿದ್ಯಾಸಂಸ್ಥೆಗಳು/ಪೋಷಕರುಗಳು ಕೋವಿಡ್-19 ಮುಂಜಾಗ್ರತಾ ಕ್ರಮಕೈಗೊಳ್ಳುವ ಕುರಿತು ಪಾಲಿಸಬೇಕಾದ ಕ್ರಮಗಳು:#BBMPCares #BBMPFightsCovid19 @CMofKarnataka @BSBommai @mla_sudhakar @BBMPAdmn @KarnatakaVarthe pic.twitter.com/qLThlZYlhV
— Tushar Giri Nath IAS (@BBMPCOMM) June 14, 2022
5. ಸಂಸ್ಥೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು.
6. ಸಂಸ್ಥೆಯ ಎಲ್ಲಾ ಅರ್ಹ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು. ಲಸಿಕೆ ಪಡೆಯದ ಯಾವುದೇ ಅರ್ಹ ಸಿಬ್ಬಂದಿ ಇದ್ದಲ್ಲಿ, ಅವರಿಗೆ ಕೂಡಲೇ ಲಸಿಕೆ ಪಡೆಯುವಂತೆ ವ್ಯವಸ್ಥೆ ಮಾಡುವುದು.
7. ಸಂಸ್ಥೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಪಡೆಯುವಂತೆ ಪ್ರೇರೇಪಿಸಿ, ಅಗತ್ಯ ಕ್ರಮ ಕೈಗೊಳ್ಳುವುದು.

ನಾಗರೀಕರು / ಪೋಷಕರು ಅನುಸರಿಸಬೇಕಾದ ಕ್ರಮಗಳು
1. ಮನೆಯಲ್ಲಿರುವ ಎಲ್ಲಾ ಅರ್ಹ ಸದಸ್ಯರುಗಳು ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು.
2. ಮನೆಯಲ್ಲಿರುವ ಯಾವುದೇ ಸದಸ್ಯರಿಗೆ ಕೋವಿಡ್-19 ಖಾಯಿಲೆಯ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಉಚಿತ ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡುವುದು.
3. ಮನೆಯಲ್ಲಿರುವ ಎಲ್ಲಾ ಅರ್ಹ ಮಕ್ಕಳು ಕೋವಿಡ್-19 ಲಸಿಕೆ ಪಡೆಯಲು ಪ್ರೇರೆಪಿಸುವುದು.
4. ಮನೆಯಲ್ಲಿರುವ ಶಾಲಾ ವಯಸ್ಸಿನ ಮಕ್ಕಳಲ್ಲಿ ಕೋವಿಡ್-19 ಖಾಯಿಲೆಯ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಉಚಿತ ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸುವುದು ಹಾಗೂ ಫಲಿತಾಂಶ ಬರುವವರೆಗೂ ಅವರನ್ನು ಶಾಲೆಗೆ ಕಳುಹಿಸದೇ ಪ್ರತ್ಯೇಕವಾಗಿ ಇರಿಸುವುದು.
5. ಮನೆಯಲ್ಲಿರುವ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಎರಡು ಶಾಲೆಯಲ್ಲಿ ಮಾತ್ರವಷ್ಟೇ ಸೋಂಕು ಕಾಣಿಸಿಕೊಂಡಿದೆ. ಆದ್ದರಿಂದ ಶಾಲೆಗಳು ಪೋಷಕರು ಭಯಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಸರ್ಕಾರ ಬಿಡುಗಡೆ ಮಾಡಿರುವ ಎಸ್ಓಪಿಯನ್ನು ಸರಿಯಾಗಿ ಪಾಲಿಸಿದರೇ ಯಾವುದೇ ತೊಂದರೆ ಎದುರಾಗುವುದಿಲ್ಲ.












Click it and Unblock the Notifications