BBMP: ಮಳೆಗಾಲದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ತೊಂದರೆ ಆಗದಂತೆ ಕ್ರಮವಹಿಸಲು ಸೂಚನೆ, ವಿವರಗಳು
ಬೆಂಗಳೂರು, ಸೆಪ್ಟಂಬರ್ 14: ಮಳೆಗಾಲದಲ್ಲಿ ಸಮಸ್ಯೆಯಾಗದಂತೆ ಪ್ರವಾಹ ಪೀಡಿತ ಪ್ರದೇಶಗಳ ಸಮಸ್ಯೆ ನಿವಾರಿಸಲು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ತ್ವರಿತವಾಗಿ ರಸ್ತೆಗುಂಡಿ ಮುಚ್ಚುವರ ಜೊತೆಗೆ ಕೆರೆ ಹೂಳು ತೆರವು ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆ ವಿಭಾಗ ಹಾಗೂ ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ, ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ಮಹತ್ವದ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್ ಅವರು, ನಗರದಲ್ಲಿ 198 ಪ್ರವಾಹ ಪೀಡಿದ ಸೂಕ್ಷ್ಮ ಪ್ರದೇಶಗಳ ಪೈಕಿ 124 ಸ್ಥಳಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಬಾಕಿ 74 ಪ್ರಾವಾಹ ಪೀಡಿತ ಪ್ರದೇಶಗಳಲ್ಲಿ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಿರಲು ಆಯಾ ವಲಯ ವ್ಯಾಪ್ತಿಯ ಪಾಲಿಕೆ ಹಿರಿಯ ಅಧಿಕಾರಿಗಳು ಪ್ರಮುಖ ಪ್ರವಾಹ ಪೀಡಿದ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನಿಡಿ, ಆ ಸ್ಥಳಗಳಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದರು.
ಬೃಹತ್ ನೀರು ಗಾಲುವೆಯ ಒತ್ತುವರಿ ತೆರವುಗೊಳಿಸಿ
ನಗರದಲ್ಲಿ ಬೃಹತ್ ನೀರುಗಾಲುವೆ ಒತ್ತುವರಿಯಾಗಿದ್ದು, ಅವುಗಳ ತೆರವು ಕಾರ್ಯಚರಣೆ ಸಂಬಂಧ ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ತಹಶಿಲ್ದಾರ್ ರವರು ತೆರವು ನೋಟೀಸ್ ಜಾರಿ ಮಾಡಲಿದ್ದಾರೆ. ನಂತರ ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ರಾಜಕಾಲುವೆಯ ಒತ್ತುವರಿ/ಅತಿಕ್ರಮಣ ತೆರವು ಜವಾಬ್ದಾರಿ ನೀಡಲಾಗಿದೆ. ನಿಗದಿತ ಸಮಯದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕೆಂದು ಹೇಳಿದರು.
ಹೈಕೋರ್ಟ್ ಗೆ ನೀಡಲಾಗಿರುವ ಕಾರ್ಯಸೂಚಿಯಂತೆ ಬೃಹತ್ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರು 10 ದಿನಗಳಲ್ಲಿ ಹೊಸ ಒತ್ತುವರಿಗಳನ್ನು ಗುರುತಿಸಬೇಕಿದೆ. ಇದು ಕೊನೆಯ ಅವಕಾಶವಾಗಿರುತ್ತದೆ. ಒಂದು ವೇಳೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಲ್ಲಿ ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನೀರುಗಾಲುವೆಗಳು ಒತ್ತುವರಿಯಾಗಿದ್ದಲ್ಲಿ ಅದನ್ನು ಭೂಮಾಪಕರ ಮೂಲಕ ಸಮೀಕ್ಷೆ ನಡೆಸಿ ತಹಶೀಲ್ದಾರರ ಮೂಲಕ ಒತ್ತುವರಿದಾರರಿಗೆ ನೋಟಿಸ್ ನೀಡಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು.

ಕೆರೆಗಳ ಒತ್ತುವರಿ ತೆರವು, ಮಾಹಿತಿ ಒದಗಿಸಿ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಯಾವ್ಯಾವ ಕೆರೆಯಲ್ಲಿ ಒತ್ತುವರಿಯಾಗಿದೆ ಎಂಬುದರ ಬಗ್ಗೆ ಕೆರೆಗಳ ವಿಭಾಗದ ಕಾರ್ಯಪಾಲಕ ಅಭಿಯಂತರರು 3 ದಿನಗಳಲ್ಲಿ ಆಯಾ ವಲಯ ಉಪ ವಿಭಾಗಗಳಲ್ಲಿ ಬರುವ ಕಾರ್ಯಪಾಲಕ ಅಭಿಯಂತರರಿಗೆ 7 ದಿನದೊಳಗಾಗಿ ಒತ್ತುವರಿ ಆಗಿದೆಯೇ ಎಂದು ಮಾಹಿತಿ ನೀಡಬೇಕು. ಬಳಿಕ ತಹಶೀಲ್ದಾರರು 7 ದಿನಗಳಲ್ಲಿ ಸರ್ವೇ ನಡೆಸಿ ಒತ್ತುವರಿ ಆಗಿದ್ದರೆ, ಒತ್ತುವರಿ ಮಾಡಿರುವವರಿಗೆ ನೋಟೀಸ್ ಜಾರಿ ಮಾಡಬೇಕು.
ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ
ಅನಂತರ ಸಕ್ಷಮ ಪ್ರಾಧಿಕಾರದಡಿ ಕಾಲಾವಕಾಶ ನೀಡಿ ಆ ಸಮಯದಲ್ಲಿ ಒತ್ತುವರಿ ತೆರವಾಗದಿದ್ದಲ್ಲಿ ಕೂಡಲೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಆಯಾ ವಲಯದ ಎಲ್ಲಾ ಮುಖ್ಯ ಅಭಿಯಂತರರು ಸೂಕ್ತ ಕ್ರಮಗಳನ್ನು ಕೈಗೊಂಡು ಕೂಡಲೆ ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕು ಎಂದರು.
ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ನಿರ್ದೇಶಿಸಿದರು.
ಫಿಕ್ಸ್ ಮೈ ಸ್ಟ್ರೀಟ್ ತಂತ್ರಾಂಶದಲ್ಲಿ ಬರುವಂತರ ದೂರುಗಳ ಆಧಾರದ ಮೇಲೆ ರಸ್ತೆ ಗುಂಡಿಗಳನ್ನು ತ್ವರಿತ ಗತಿಯಲ್ಲಿ ಮುಚ್ಚಬೇಕು. ಈ ಸಂಬಂಧ ಆಯಾ ವಲಯ ವ್ಯಾಪ್ತಿಯಲ್ಲಿ ನಿಯೋಜನೆ ಮಾಡಿರುವ ಗುತ್ತಿಗೆದಾರರಿಂದ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಹಾಗೂ ದೋಷ ಮುಕ್ತ ಅವಧಿ (DLP)ಯಲ್ಲಿರುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದದ್ದರೆ ಸಂಬಂಧಪಟ್ಟ ಗುತ್ತಿಗೆದಾರರಿಂದಲೇ ರಸ್ತೆಗುಂಡಿಗಳನ್ನು ಮುಚ್ಚಿಸಬೇಕು ಎಂದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ, ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್, ಎಲ್ಲಾ ವಲಯ ಜಂಟಿ ಆಯುಕ್ತರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ಇನ್ನಿತರ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications