ಬೆಂಗಳೂರು ಒತ್ತುವರಿದಾರರೇ ಎಚ್ಚರ, ಬರಲಿವೆ ಬುಲ್ಡೋಜರ್‌ಗಳು: ಬಿಬಿಎಂಪಿ ಅಲರ್ಟ್
ಬೆಂಗಳೂರು, ಜುಲೈ 24: ಬೆಂಗಳೂರಿನಲ್ಲಿ ಈ ವರ್ಷ ಅತ್ಯಧಿಕ ಮಳೆ ಇಲ್ಲದಾಗಿದೆ. ಕೆಲವು ದಿನಗಳ ಕಾಲ ಅಬ್ಬರಿಸಿದ್ದ ಮಳೆ ಮತ್ತೆ ನಗರದಲ್ಲಿ ತೀವ್ರಗೊಳ್ಳಲೇ ಇಲ್ಲ. ಈ ಮಧ್ಯೆ ಮಳೆ ನೀರು ಸರಿಯಾಗಿ ಹೋಗಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಸೂಚನೆ ನೀಡಿದೆ. ಮುಲಾಜಿಲ್ಲದೇ ಒತ್ತುವರಿ ಜಾಗ ತೆರವುಗೊಳಿಸಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆ, ಕೆರೆಗಳ ಒತ್ತುವರಿಗಳನ್ನು ಭೂದಾಖಲೆಗಳು ಹಾಗೂ ಕಂದಾಯ ಇಲಾಖೆಗಳ ಸಮನ್ವಯದೊಂದಿಗೆ ಗುರುತಿಸಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆ ಹಾಗೂ ಕೆರೆಗಳ ಒತ್ತುವರಿ ತೆರುವು ಕಾರ್ಯಾಚರಣೆ ಕುರಿತು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರು ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಸರ್ವೇ ನಡೆಸಿ ಗುರುತು ಮಾಡಿ, ತಹಶೀಲ್ದಾರ್‌ರವರು ಒತ್ತುವರಿದಾರರನ್ನು ಗುರುತಿಸಿ ವಿಶೇಷ ಜಿಲ್ಲಾಧಿಕಾರಿರವರಿಗೆ ಸಲ್ಲಿಸಿ ಸೂಕ್ತ ಆದೇಶಗಳನ್ನು ಜಾರಿ ಮಾಡಿರುವಂತಹ ಒತ್ತುವರಿಗಳನ್ನು ಕೂಡಲೆ ಹಂತ-ಹಂತವಾಗಿ ತೆರವುಗೊಳಿಸಬೇಕು. ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿಕೊಂಡು ತೆರವು ಕಾರ್ಯಾಚರಣೆ ನಡೆಸುವಂತೆ ಅವರು ಹೇಳಿದರು.
4316 ಒತ್ತುವರಿ ಪತ್ತೆ: ತೆರವಿಗೆ ಕಟ್ಟುನಿಟ್ಟಿನ ಕ್ರಮ
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಒತ್ತುವರಿಗಳು ಸೇರಿದಂತೆ 4316 ಒತ್ತುವರಿಗಳನ್ನು ಗುರುತಿಸಲಾಗಿದೆ, ಅದರಲ್ಲಿ 2473 ಒತ್ತುವರಿಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಇನ್ನು 1648 ಒತ್ತುವರಿಗಳನ್ನು ತೆರವುಗೊಳಿಸಬೇಕಾಗಿದ್ದು, 195 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿರುತ್ತದೆ.
ಭೂಮಾಪನಾ ಇಲಾಖೆಯಲ್ಲಿ 889 ಒತ್ತುವರಿಗಳು, ಕಂದಾಯ ಇಲಾಖೆಯಲ್ಲಿ 615 ಒತ್ತುವರಿಗಳು ಹಾಗು ಪಾಲಿಕೆಯಲ್ಲಿ 144 ಒತ್ತುವರಿ ಪ್ರಕರಣಗಳಿದ್ದು, ಆಯಾ ಇಲಾಖೆಗಳಿಗೆ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ತಹಶಿಲ್ದಾರರಿಂದ ಆದೇಶಗಳನ್ನು ಜಾರಿಗೊಳಿಸಿದ ನಂತರ, ಹಂತ-ಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದೆಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಕೆರೆಗಳ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಲು ಸೂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 183 ಕೆರೆಗಳು ಜೀವಂತ ಕೆರೆಗಳಿವೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಕರೆಗಳ ಪೈಕಿ 159 ಕೆರೆಗಳಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ರಿಯಾ ಯೋಜನೆಯ ಪ್ರಕಾರ ಕ್ರಮ ವಹಿಸಲು ತಹಶೀಲ್ದಾರರಿಗೆ ಪತ್ರಗಳನ್ನು ಬರೆಯಲಾಗಿದೆ.
ಈ ಪೈಕಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು 124 ಕೆರೆಗಳ ಸಮೀಕ್ಷೆ ಮಾಡಿ ಗಡಿ ಗುರುತಿಸಿರುವ ಕೆರೆಗಳಿಗೆ ಸಂಬಂಧಿಸಿದಂತೆ 82 ಕೆರೆಗಳ ನಕ್ಷೆ ನಿಡಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಕ್ರಮವಹಿಸುವುದು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಕೆ.ಎ. ದಯಾನಂದ್, ಭೂಮಾಪನ, ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್, ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಸ್ನೇಹಲ್, ರಮ್ಯಾ, ಕರೀಗೌಡ, ರಮೇಶ್, ಶಿವಾನಂದ್ ಕಪಾಶಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಜಂಟಿ ಆಯುಕ್ತರು ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.











Click it and Unblock the Notifications