Bbmp: ಕೋಟಿ.. ಕೋಟಿ ಆದಾಯ ಹರಿದು ಬಂದರೂ ಈ ಕೆಲಸ ಮಾತ್ರ ಮಾಡದ ಬಿಬಿಎಂಪಿ!
Potholes in Bengaluru: ಬೆಂಗಳೂರಲ್ಲಿ ಈ ಬಾರಿ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯು ಐತಿಹಾಸಿಕ ಹಾಗೂ ಆಸ್ತಿ ತೆರಿಗೆ ಆದಾಯ ಸಂಗ್ರಹದಲ್ಲಿ ಹೊಸ ದಾಖಲೆ ಬರೆದಿದೆ. ಇದರಿಂದ ಕೋಟ್ಯಾಂತರ ರೂಪಾಯಿ ದುಡ್ಡು ಸಂಗ್ರಹಿಸಿದೆ. ಆದರೆ, ಇಷ್ಟೆಲ್ಲ ದುಡ್ಡು ಸಂಗ್ರಹ ಮಾಡುತ್ತಿದ್ದರೂ, ಬೆಂಗಳೂರಿನಲ್ಲಿ ಕನಿಷ್ಠ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಬಿಬಿಎಂಪಿ ಮುಂದಾಗ್ತಿಲ್ಲ. ಫೆಂಗಲ್ ಚಂಡಮಾರುತದ ಪ್ರಭಾವದಿಂದ ಬೆಂಗಳೂರಿನಲ್ಲಿ ಮಳೆಯಾಗಿದೆ. ಆದರೆ, ಕೆಲವು ದಿನಗಳ ಹಿಂದೆಯಾದಷ್ಟು ಮಳೆಯಾಗಿಲ್ಲ. ಆದರೆ, ಸಾಧಾರಣ ಮಳೆಗೆ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗಿದ್ದು, ವಾಹನ ಸವರಾರು ಹಾಗೂ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಬಿಬಿಎಂಪಿಯು ಈ ಆರ್ಥಿಕ ವರ್ಷ ಮುಗಿಯುವುದಕ್ಕೂ ಮುಂಚೆಯೇ 4284 ಕೋಟಿ ರೂಪಾಯಿ ಮೊತ್ತವನ್ನು ಸಂಗ್ರಹಿಸಿದೆ. ಅದು ಸಹ ಆಸ್ತಿ ತೆರಿಗೆಯಿಂದ 30.11.24ಕ್ಕೆ ಈ ಮೊತ್ತ ಪಾಲಿಕೆಗೆ ಹರಿದು ಬಂದಿದೆ. ಈ ಮೊತ್ತವು ಪಾಲಿಕೆಯಲ್ಲಿ ಇಲ್ಲಿಯವರೆಗೆ ಸಂಗ್ರಹವಾಗಿರುವ ಅತ್ಯಧಿಕ ತೆರಿಗೆ ಸಂಗ್ರಹವಾಗಿರುತ್ತದೆ. ಅಲ್ಲದೇ ಮಾರ್ಚ್ 2025ರ ವೇಳೆಗೆ ಬರೋಬ್ಬರಿ 5200 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನೂ ಬಿಬಿಎಂಪಿ ಹಾಕಿಕೊಂಡಿದೆ. ಆದರೆ, ಬಿಬಿಎಂಪಿಯು ಇಲ್ಲಿಯ ವರೆಗೆ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಮನಸ್ಸು ಮಾಡದೆ ಇರುವುದು ಬೆಂಗಳೂರಿಗರನ್ನು ಕೆರಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ಆದಾಯ ಸಂಗ್ರಹ ಪ್ರಮಾಣ ಹೆಚ್ಚಳವೇನೋ ಆಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಮೂಲಸೌಕರ್ಯಕೊಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ವಾಹನ ಸವಾರರ ಪರದಾಟ: ಬೆಂಗಳೂರಿನಲ್ಲಿ ಸುರಿದ ಸಣ್ಣ ಮಳೆಯಿಂದಾಗಿ ಬೆಂಗಳೂರಿನಲ್ಲಿ ಅಲ್ಲಲ್ಲಿ ರಸ್ತೆಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಸಾಕಪ್ಪಾ ಸಾಕು ಈ ರೋಡ್‌ಗಳಲ್ಲಿ ವಾಹನ ಓಡಿಸೋದು ಅಂತಿದ್ದಾರೆ. ಬೆಂಗಳೂರಿನ ಎಲ್ಲಾ ರಸ್ತೆಗುಂಡಿಗಳನ್ನು ಬಿಬಿಎಂಪಿ ಮುಚ್ಚಿ ಕನಿಷ್ಠ ಮೂರು ತಿಂಗಳು ಸಹ ಆಗಿಲ್ಲ.
ಆಗಲೇ ಬೆಂಗಳೂರಿನಲ್ಲಿ ಪ್ರಮುಖ ಹಾಗೂ ಒಳ ರಸ್ತೆಗಳಲ್ಲಿ ರಸ್ತೆಗುಂಡಿಗಳು ನಿರ್ಮಾಣವಾಗಿದೆ. ರಸ್ತೆಗುಂಡಿಯಿಂದಾಗಿ ಬೆಂಗಳೂರಿನಲ್ಲಿ ಧೂಳು ಸಹ ಸಹಜವಾಗಿಯೇ ಹೆಚ್ಚಳವಾಗಿದೆ. ಅದಲ್ಲದೇ ಈ ಹಿಂದೆ ರಸ್ತೆಗುಂಡಿ ಮುಚ್ಚುವಾಗ ಹಾಕಲಾಗಿದ್ದ ಸಣ್ಣ ಜಲ್ಲಿಕಲ್ಲುಗಳು ರಸ್ತೆಗಳಲ್ಲೇ ಚಲ್ಲಾಪಿಲ್ಲಿಯಾಗಿದ್ದು, ಇದರಿಂದ ಬೈಕ್‌ಗಳು ಸ್ಕಿಡ್ ಆಗುತ್ತಿವೆ. ಇದು ಪರೋಕ್ಷವಾಗಿ ಅಪಘಾತಕ್ಕೂ ಕಾರಣವಾಗುತ್ತಿದೆ.
ಟ್ರಾಫಿಕ್ ಜಾಮ್: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲೇ ಅಲ್ಲಲ್ಲಿ ರಸ್ತೆಗುಂಡಿಗಳು ಬಾಯ್ತೆರೆದಿದ್ದು, ಇದರಿಂದ ನಗರದಲ್ಲಿ ಪೀಕ್ ಅವರ್ ಹೊರತುಪಡಿಸಿಯೂ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಈಚೆಗೆ ಸಾಧಾರಣ ಮಳೆಯಾಗಿದೆ. ಈ ಸಾಧಾರಣ ಮಳೆಯನ್ನು ನಿಭಾಯಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಬೆಂಗಳೂರಿನಲ್ಲಿ ಕಸದ ಸಮಸ್ಯೆಯೂ ಹೆಚ್ಚಳವಾಗಿದೆ.
ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿದೆ ಎಂದು ತೋರಿಸುತ್ತಿರುವ ಬಿಬಿಎಂಪಿ ಬೆಂಗಳೂರಿನ ಜನರಿಗೆ ಕನಿಷ್ಠ ಸೌಲಭ್ಯವನ್ನೂ ನೀಡದೆ ಇರುವುದಕ್ಕೆ ಬೆಂಗಳೂರಿಗರಿಂದ ಅಸಮಾಧಾನ ವ್ಯಕ್ತವಾಗಿದೆ. ಹಲವು ಬೆಂಗಳೂರಿಗರು ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲೂ ಪ್ರಸ್ತಾಪಿಸುತ್ತಿದ್ದಾರೆ.
ರಸ್ತೆಗುಂಡಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದೇನು
ಬೆಂಗಳೂರಿನಲ್ಲಿ ಮಳೆಯಿಂದ ರಸ್ತೆಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದರು. ಅಲ್ಲದೇ ಕೋಲ್ಡ್ ಮಿಕ್ಸ್ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮಳೆ ನಿಂತ ಕೂಡಲೇ ಹಾಟ್ ಮಿಕ್ಸ್ ಪ್ಲಾಂಟ್‌ನಿಂದ ಹೆಚ್ಚು ಡಾಂಬರನ್ನು ಪಡೆದು ಶೀಘ್ರದಲ್ಲೇ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹೇಳಿದ್ದರು. ಆದರೆ, ಬೆಂಗಳೂರಿನಲ್ಲಿ ಮಳೆ ಬಿಡುವುಕೊಟ್ಟರೂ ರಸ್ತೆಗುಂಡಿಗಳನ್ನು ಮುಚ್ಚುವ ಲಕ್ಷಣಗಳು ಕಾಣಿಸುತ್ತಿಲ್ಲ.












Click it and Unblock the Notifications