ಬಿಬಿಎಂಪಿ ಚುನಾವಣೆ : ಮತದಾರರ ಪಟ್ಟಿಗೆ ಹೆಸರು ಸೇರಿಸಿ
ಬೆಂಗಳೂರು, ಜೂ.26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣಾ ದಿನಾಂಕ ಘೋಷಣೆಯಾಗಿದೆ. ನಗರದ 198 ವಾರ್ಡ್‌ಗಳಲ್ಲಿ ಒಂದೇ ಹಂತದಲ್ಲಿ ಜುಲೈ 28ರಂದು ಮತದಾನ ನಡೆಯಲಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಜುಲೈ 15ರ ತನಕ ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ವಾರ್ಡ್‍ವಾರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನದವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ]

ಬಿಬಿಎಂಪಿ ವೆಬ್‍ಸೈಟ್ www.bbmp.gov.in ನಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮತದಾರರ ಪಟ್ಟಿಯನ್ನು ಹಾಕಲಾಗುತ್ತದೆ. ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಮತ್ತು ತಮ್ಮ ಮತಗಟ್ಟೆಗಳ ವಿಳಾಸ ಮತ್ತು ಮತಗಟ್ಟೆ ಸಂಖ್ಯೆಯನ್ನು ಜನರು ವೆಬ್‌ಸೈಟ್‌ಗೆ ಭೇಟಿ ನೀಡಿ ತಿಳಿಯಬಹುದಾಗಿದೆ.
71,22,165 ಜನರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಇವರಲ್ಲಿ ಪುರುಷ ಮತದಾರರು 37,38,808, ಮಹಿಳಾ ಮತದಾರರು 33,82,231, ಇತರೆ ಮತದಾರರು 1,126. ಹೊಸದಾಗಿ ಹೆಸರು ಸೇರಿಸಿದ ನಂತರ ಪಟ್ಟಿ ಪುನಃ ಪರಿಷ್ಕರಣೆಯಾಗಲಿದೆ.
ಬಿಬಿಎಂಪಿಯ ಪ್ರತಿ ವಾರ್ಡ್ ಕಚೇರಿಯಲ್ಲಿ ಸದ್ಯದಲ್ಲೇ ಆಯೋಗ ಸಹಾಯ ಕೇಂದ್ರಗಳನ್ನು ಆರಂಭಿಸಲಿದ್ದು, ಅಲ್ಲಿ ಪಟ್ಟಿಗೆ ಹೆಸರು ಸೇರಿಸುವ ಕುರಿತು ಮಾಹಿತಿ ಲಭ್ಯವಾಗಲಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಈ ಕುರಿತು ಜನರು ಮಾಹಿತಿ ಪಡೆಯಬಹುದಾಗಿದೆ. [ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ?]
http://voterreg.kar.nic.in/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ಹೆಸರು ನೋಂದಾವಣೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರತಿ ವಿಧಾನದ ಮಾಹಿತಿಯೂ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಯಾವ ದಾಖಲೆ ಬೇಕು : ಹೆಸರು ನೋಂದಣು ಮಾಡಿಸುವಾಗ ಎಸ್ಎಸ್ಎಲ್ ಸಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ವಿವಾಹ ನೋಂದಣಿ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮುಂತಾದ ವಯೋಮಿತಿ ತಿಳಿಸುವ ದಾಖಲೆಗಳನ್ನು ನೀಡಬೇಕಾಗುತ್ತದೆ.












Click it and Unblock the Notifications