ಬಿಬಿಎಂಪಿ ಚುನಾವಣೆ ಮುಂದೂಡಲು ಕೊನೆ ಪ್ರಯತ್ನ
ಬೆಳಗಾವಿ, ಜೂ. 29 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಲು ಸರ್ಕಾರ ಕೊನೆಯ ಅಸ್ತ್ರವನ್ನು ಪ್ರಯೋಗಿಸಿದೆ. 2011ರ ಮೀಸಲಾತಿ ಪಟ್ಟಿ ಅನ್ವಯ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಿದೆ.
ಸೋಮವಾರ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 5ರೊಳಗೆ ಚುನಾವಣೆ ನಡೆಸುವಂತೆ ನೀಡಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದೆ. ಜುಲೈ 1ರ ನಂತರ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. [ಬಿಬಿಎಂಪಿ ಚುನಾವಣೆ ಘೋಷಣೆ]

ಈಗಾಗಲೇ ರಾಜ್ಯ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜುಲೈ 28ರಂದು ಚುನಾವಣೆ ನಡೆಯಲಿದ್ದು, ಜುಲೈ 31ರಂದು ಮತ ಎಣಿಕೆ ನಡೆಯಲಿದೆ. ಇದರ ನಡುವೆಯೇ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. [ಕರ್ನಾಟಕ ಸರ್ಕಾರದ ಅರ್ಜಿ ವಜಾ]
ಹೈಕೋರ್ಟ್ ಅರ್ಜಿ ವಜಾಗೊಳಿಸಿತ್ತು : 2011ರ ಜನಗಣತಿ ಅನ್ವಯ ಕ್ಷೇತ್ರ ಪುನರ್ ವಿಂಗಡನೆ ಮಾಡಲು ಕಾಲಾವಕಾಶ ನೀಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆದ್ದರಿಂದ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿತ್ತು.
ಏನಿದು ಅರ್ಜಿ? : ಕರ್ನಾಟಕ ಸರ್ಕಾರ 2011ರ ಜನಗಣತಿ ಆಧರಿಸಿ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿ ನಿಗದಿ ಮಾಡುತ್ತೇವೆ. ಇದಕ್ಕೆ ಸಮಯಾವಕಾಶ ಬೇಕಾಗಿದೆ. ಆದ್ದರಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ.
ಮೂರು ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ ಎಂದು ಸುಪ್ರೀಂಕೋರ್ಟ್ 2015ರ ಮೇನಲ್ಲಿ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಆದ್ದರಿಂದ ಪುನಃ ಸುಪ್ರೀಂಕೋರ್ಟ್ ಮೊರೆ ಹೋಗಿದೆ.












Click it and Unblock the Notifications