ಪಾಲಿಕೆಯಿಂದ ಭರ್ಜರಿ ಟ್ಯಾಕ್ಸ್ ಕಲೆಕ್ಷನ್: 60 ದಿನದಲ್ಲಿ 592 ಕೋಟಿ ವಸೂಲಿ
ಬೆಂಗಳೂರು, ಆಗಸ್ಟ್ 13: ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಕಾರ್ಯ ಚುರುಕುಗೊಂಡಿದ್ದು, ಒಟ್ಟು 60 ದಿನದಲ್ಲಿ ಬರೋಬ್ಬರಿ 592 ಕೋಟಿ ರೂ. ತೆರಿಗೆಯನ್ನು ವಸೂಲಿ ಮಾಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಕೊರತೆಯಿಂದಾಗಿ ಆಸ್ತಿ ತೆರಿಗೆ ಸಂಗ್ರಹ ಕುಂಠಿತಗೊಂಡಿತ್ತು.
ಮೇ ತಿಂಗಳ ಅಂತ್ಯದಲ್ಲಿ 1,139 ಕೋಟಿ ರೂ.ಗಳಿಸಿದ್ದ ತೆರಿಗೆ ಸಂಗ್ರಹ ನಂತರದ 2 ತಿಂಗಳಲ್ಲಿ 592 ಕೋಟಿ ರೂ. ಸಂಗ್ರಹಿಸಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಶೇ.5ತೆರಿಗೆ ವಿನಾಯಿತಿಯನ್ನು ಏಪ್ರಿಲ್‌ನಲ್ಲೇ ಅಂತ್ಯಗೊಳಿಸಲಾಯಿತು. ಹೀಗಾಗಿ ಈ ಆರ್ಥಿಕ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಕೇವಲ 1 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು.

ಈ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗುತ್ತಿದ್ದು, ಆಗಸ್ಟ್ ಆರಂಭಕ್ಕೆ 1,731.34 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಬಿಬಿಎಂಪಿಯ 8 ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಮಹದೇವಪುರ ವಲಯವೊಂದರಲ್ಲೇ 394.89 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಉಳಿದ 7 ವಲಯಗಳಲ್ಲಿ ದಾಸರಹಳ್ಳಿಯಲ್ಲಿ ಅತಿ ಕಡಿಮೆ ಅಂದರೆ ಕೇವಲ 48.37 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ.












Click it and Unblock the Notifications