BBMP Tax: ಹೊಸ ತೆರಿಗೆಯಿಂದ ಬಿಬಿಎಂಪಿ ಆದಾಯ ಏರಿಕೆ! ಒಂದೇ ತಿಂಗಳಲ್ಲಿ ₹230 ಸಂಗ್ರಹ
ಬೆಂಗಳೂರು, ಮೇ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆದಾರರಿಗೆ ಶೇಕಡಾ 05ರಷ್ಟು ರಿಯಾಯಿತಿ ನೀಡಿದರೂ ಸಹಿತ ದಾಖಲೆ ಆದಾಯ ಸಂಗ್ರಹವಾಗಿದೆ. ಇತ್ತೀಚೆಗೆ ಪಾಲಿಕೆಯು ಆಸ್ತಿ ತೆರಿಗೆ ಜೊತೆ ಕಟ್ಟಡಗಳ ವಿಸ್ತೀರ್ಣದ ಆಧಾರದಲ್ಲಿ ಕಸ ಸೆಸ್ (BBMP Garbage Cess) ವಿಧಿಸಿತ್ತು. ಇದು ಹೇರಿಕೆ ಆಗಿ ಮೊದಲ ತಿಂಗಳಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪಾಲಿಕೆ ದಾಖಲೆ ಬರೆದಿದೆ.
ಹೌದು, ಏಪ್ರಿಲ್ 01ರಿಂದ ಗಾರ್ಬೆಜ್ ಸೆಸ್ ವಿಧಿಸಿದ್ದ ಬಿಬಿಎಂಪಿ ಆ ಕರವನ್ನು ಆಸ್ತಿ ತೆರಿಗೆ ಜೊತೆಗೆ ವಸೂಲಿ ಮಾಡುವುದಾಗಿ ತಿಳಿಸಿತ್ತು. ಕಳೆದ ಏಪ್ರಿಲ್ ತಿಂಗಳಲ್ಲಿ 'ಕಸ ತೆರಿಗೆ' ಮೂಲಕ 230 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಮೊದಲ ತಿಂಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹೊಸ ತೆರಿಗೆಯು ಪಾಲಿಕೆಗೆ ಅಧಿಕ ಆದಾಯ ತಂದು ಕೊಟ್ಟಿದೆ. ಏಪ್ರಿಲ್‌ನಲ್ಲಿ ಪಾಲಿಕೆ ಆದಾಯ 1,417 ಕೋಟಿ ರೂ.ಗೆ ತಲುಪಿದೆ. 2024ರ ಏಪ್ರಿಲ್ ನಲ್ಲಿ 985 ಕೋಟಿ ರೂ.ನಷ್ಟು ಆದಾಯ ಸಂಗ್ರಹವಾಗಿತ್ತು. ಈ ಬಾರಿ ಏರಿಕೆ ಆಗಿದೆ ಎಂದು ವರದಿ ಆಗಿದೆ.

ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ
ಆಸ್ತಿ ತೆರಿಗೆದಾರರಿಗೆ ಶೇಕಡಾ 5ರಷ್ಟು ಮೇ ಅಂತ್ಯದವರೆಗೆ ವಿಸ್ತರಣೆ ಮಾಡಲಾಗಿದೆ. ಹೊಸ ತೆರಿಗೆಯು ಆದಾಯ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಆಸ್ತಿ ಮಾಲೀಕರು ಬಾಕಿ ತೆರಿಗೆಯನ್ನು ಸಕಾಲಕ್ಕೆ ಕಟ್ಟುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ .
ಘನತ್ಯಾಜ್ಯ ನಿರ್ವಹಣೆ (SWM) ಸೇವೆ ಕೊಂಚ ವಿಳಂಬವಾಗಿದೆ. ವಿಲೇವಾರಿ ವಾಹನಗಳು ನಿತ್ಯ ಎಲ್ಲ ಕಡೆಯ ತ್ಯಾಜ್ಯ ವಿಲೇವಾರಿಗೆ ಪೂರ್ಣವಾಗಿ ಸಂಚರಿಸುವಲ್ಲಿ ವಿಫಲವಾಗುತ್ತಿವೆ ಎನ್ನಲಾಗಿದೆ. ಇದರಿಂದಾಗಿ ವಿವಿಧ ಬಡಾವಣೆಗಳ ಮನೆಗಳ ಮಾಲೀಕರು ವಿಲೇವಾರಿಗೆ ಒತ್ತಾಯಿಸಿದ್ದ ಕಂಡು ಬಂದಿದೆ.
ಘನತ್ಯಾಜ್ಯ ವಿಲೇವಾರಿಯಲ್ಲಿ ಸಮಸ್ಯೆ ಆಗುತ್ತಿರುವುದನ್ನು ವಿಲೇವಾರಿ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಒಪ್ಪಿಕೊಂಡಿದೆ. ನಗರಾದ್ಯಂತ ನಿತ್ಯ ಉತ್ಪತ್ತಿಯಾಗುವ 5,500 ಟನ್ ತ್ಯಾಜ್ಯ ವಿಲೇವಾರಿಗೆ ಒಂದಷ್ಟು ಸುಧಾರಣೆ ತರುವುದಾಗಿ ತಿಳಿಸಿದೆ. ಅದಕ್ಕಾಗಿ ಸ್ವಲ್ಪ ಸಮಯ ಬೇಕಾಗಿದೆ. ಗುತ್ತಿಗೆದಾರರ ಪಾವತಿ ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದಿದೆ.
ಆಟೋ ಬದಲಿಗೆ ಟಿಪ್ಪರ್ ಬಳಕೆ
ನಗರದಲ್ಲಿ ಆಟೋ ಗಳ ಬದಲಾಗಿ ಟಿಪ್ಪರ್ ಲಾರಿ ಮೂಲಕ ಕಸ ವಿಲೇವಾರಿ ಮಾಡಲಾಗುವುದು. ತ್ಯಾಜ್ಯ ಸಂಗ್ರಹಣೆ ಮತ್ತು ಸಾರಿಗೆ (C&T) ವ್ಯವಸ್ಥೆ ಪರಿಚಯಿಸಲಾಗುವುದು. ವಾಹನಗಳ ಟೆಂಡರ್ ಪ್ರಕ್ರಿಯೆ ಮುಗಿಸಲು ಹೈಕೋರ್ಟ್ ಗಡುವು ನೀಡಿದೆ. ಅಷ್ಟರೊಳಗೆ ಒಂದಷ್ಟು ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದೆ.
ಸಮಗ್ರ ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬಿಎಸ್‌ಡಬ್ಲ್ಯೂಎಂಎಲ್ ಶೀಘ್ರದಲ್ಲೇ ಎರಡು ಸ್ಥಳಗಳಲ್ಲಿ ಸುಮಾರು 100 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಅವರು ಘೋಷಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ತೆರಿಗೆ ವಿಧಿಸಿದ ನಂತರ ಆಸ್ತಿ ಮಾಲೀಕರಿಗೆ ಒಟ್ಟು ತೆರಿಗೆಯಲ್ಲಿ ಶೇಡಕಾ 35ರಷ್ಟು ತೆರಿಗೆ ಪ್ರಮಾಣ ಹೆಚ್ಚಾಗಿದೆ. ವಿಸ್ತೀರ್ಣ ಆಧಾರದಲ್ಲಿ ತೆರಿಗೆ ಹಂಚಿಕೆ ಮಾಡಲಾಗಿದೆ. ಬೃಹತ್ ತ್ಯಾಜ್ಯ ಉತ್ಪಾದಕರನ್ನು ಹೊರತುಪಡಿಸಿ, ಎಲ್ಲಾ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಆಸ್ತಿ ತೆರಿಗೆ ಜೊತೆಗೆ ವಸೂಲಿ ಮಾಡಲಾಗುತ್ತಿದೆ.












Click it and Unblock the Notifications