ರಾಷ್ಟ್ರಧ್ವಜ ಮಾರಾಟ ವಾಹನಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ
ಬೆಂಗಳೂರು ಆಗಸ್ಟ 12: ಸ್ವಾತಂತ್ರ್ಯೋತ್ಸವ 'ಅಮೃತ ಮಹೋತ್ಸವ' ಅಂಗವಾಗಿ ಬೆಂಗಳೂರಿನ ಯಲಹಂಕ ವಲಯ ವ್ಯಾಪ್ತಿಯಲ್ಲಿ ಶುಕ್ರವಾರ ಆಯೋಜಿಸಿದ್ದ "ಹರ್ ಘರ್ ತಿರಂಗಾ" ಅಭಿಯಾನ ಮತ್ತು ಸಂಚಾರಿ ರಾಷ್ಟ್ರಧ್ವಜ ಮಾರಾಟ ಕೇಂದ್ರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, 75ನೇ ಸ್ವಾತಂತ್ರ್ಯ ದಿನೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯ, ದೇಶಾದ್ಯಂತ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂಭಂಧ ನಡೆಸಿರುವ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಬೇಕು ಅಭಿಯಾನದಡಿ ಬೆಂಳೂರಿನ ವಿಧಾನಸೌಧ, ಎಂ.ಎಸ್ ಬಿಲ್ಡಿಂಗ್, ವಿವಿ ಟವರ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾದ 'ಬಿಬಿಎಂಪಿ ಧ್ವಜ ಮಾರಾಟ ಮೊಬೈಲ್ ಕೇಂದ್ರ' ಸ್ಥಾಪಿಸಿದೆ. ಇಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳುವ ನಗರವಾಸಿಗಳಿಗೆ ತ್ರಿವರ್ಣ ಧ್ವಜ ಖರೀಸಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಪ್ರಚಾರ ಸಾಮಗ್ರಿಗಳಾದ ಕರಪತ್ರ, ಸ್ಟಿಕ್ಕರ್ ಹಾಗೂ ಬ್ಯಾಡ್ಜಗಳನ್ನು ತುಷಾರ್ ಗಿರಿನಾಥ್ ಅನಾವರಣಗೊಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯನಲ್ಲಿ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂದೇಶದ ಜತೆಗೆ ಅಭಿನಂದನಾ ಪತ್ರವನ್ನು ಕಳುಹಿಸಿದ್ದಾರೆ ಎಂದು ಆಯುಕ್ತರು, ಆ ಅಭಿನಂದನಾ ಪತ್ರಗಳನ್ನು ಪೌರಕಾರ್ಮಿಕರಿಗೆ ನೀಡಿದರು. ಪೌರ ಕಾರ್ಮಿಕರ ಸ್ವಚ್ಚತಾ ಸೇವೆ, ನಗರದ ನೈರ್ಮಲ್ಯಕ್ಕೆ ನೀಡುತ್ತಿರುವ ಅವರ ಶ್ರಮವನ್ನು ಶ್ಲಾಘಿಸಿದರು.
ದೇಶಭಕ್ತಿ ಸಂಕೇತ ಚಿತ್ರ ರಚನೆ
ಕಾರ್ಯಕ್ರಮದಲ್ಲಿ ಕಲಾವಿದೆ ವಿಜಯಶ್ರೀ ನಟರಾಜ್ ಎಂಬುವವರು ಸ್ಥಳದಲ್ಲೇ ಕೇಳಿ ಬರುತ್ತಿದ್ದ ದೇಶಭಕ್ತಿ ಗೀತೆಗಳಿಗೆ ಅನುಗುಣವಾಗಿ ಭಾರತಾಂಬೆ, ತ್ರಿವರ್ಣ ಧ್ವಜ, ಯೋಧರ ಭಾವಚಿತ್ರಗಳನ್ನು ಬಿಡಿಸಿದರು. ಜತೆಗೆ 'ಹರ್ ಘರ್ ತಿರಂಗಾ' ನೃತ್ಯ ಪ್ರದರ್ಶನಗಳು, ಡೊಳ್ಳು ಕುಣಿತ ಸೇರಿದಂತೆ ಇನ್ನಿತರೇ ಕಾರ್ಯಕ್ರಮಗಳು ನಡೆದವು, ಕಲಾವಿದರು, ಪೌರಕಾರ್ಮಿಕರು, ಸ್ಥಳಿಯ ಪಾಲಿಕೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಅದಲ್ಲದೇ ಕಾರ್ಯಕ್ರಮಕ್ಕು ಮುನ್ನ ಶುಕ್ರವಾರ ನಿಧನರಾದ ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮೂಲಕ ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಯಲಹಂಕ ವಲಯದ ವಿಶೇಷ ಆಯುಕ್ತ ರಂಗಪ್ಪ, ವಲಯ ಜಂಟಿ ಆಯುಕ್ತೆ ಪೂರ್ಣಿಮಾ, ಖ್ಯಾತ ಗಾಯಕ ಜಯಶ್ರೀ, ಮುಖ್ಯ ಅಭಿಯಂತರರಾದ ರಂಗನಾಥ್, ಮಾಜಿ ಯೋಧರ ಸಂಘದ ಪದಾಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ನಾಗರಿಕರು, ವಿವಿಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ವಿಕಲಚೇತನರು, ಪೌರಕಾರ್ಮಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












Click it and Unblock the Notifications