ಬೆಂಗಳೂರಿನ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ಘರ್ಜಿಸಿದ ಬುಲ್ಡೋಜರ್‌ಗಳು: ಅಂಗಡಿಗಳು ನೆಲಸಮ, ವ್ಯಾಪಾರಿಗಳ ಸಂಘರ್ಷ
ಬೆಂಗಳೂರಿನ ಐತಿಹಾಸಿಕ ಗಾಂಧಿ ಬಜಾರ್ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಜೆಸಿಬಿಗಳು ಅಂಗಡಿಯನ್ನು ಧ್ವಂಸಗೊಳಿಸಿದವು. ಇದನ್ನು ಮೂಖಸಾಕ್ಷಿಯಾಗಿ ನಿಂತಿದ ಸ್ಥಳೀಯ ವ್ಯಾಪಾರಿಗಳು ಬೆಚ್ಚಿಬಿದ್ದರು. ಇಲ್ಲಿದೆ ಸಂಪೂರ್ಣ ವರದಿ
ಬೆಂಗಳೂರು, ಮಾರ್ಚ್ 07: ಬೆಂಗಳೂರಿನ ಐತಿಹಾಸಿಕ ಗಾಂಧಿ ಬಜಾರ್ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಜೆಸಿಬಿಗಳು ಅಂಗಡಿಯನ್ನು ಧ್ವಂಸಗೊಳಿಸಿದವು. ಇದನ್ನು ಮೂಖಸಾಕ್ಷಿಯಾಗಿ ನಿಂತಿದ ಸ್ಥಳೀಯ ವ್ಯಾಪಾರಿಗಳು ಬೆಚ್ಚಿಬಿದ್ದರು. ವ್ಯಾಪಾರಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 37 ವ್ಯಾಪಾರಿಗಳಿಗೆ ಒತ್ತುವರಿ ತೆರವು ನೋಟಿಸ್ ನೀಡಿದ ನಂತರ ಬುಲ್ಡೋಜಿಂಗ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಇದನ್ನು ವ್ಯಾಪಾರಿಗಳು ಒಪ್ಪಿಕೊಳ್ಳದಿರುವುದು ಸಂಘರ್ಷಕ್ಕೆ ಕಾರಣವಾಗಿದೆ.
'ನಾವಿನ್ನೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕಿತ್ತು. ಮಾತುಕತೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಆದರೆ, ಇಂತಹ ಕಠಿಣ ಕ್ರಮವನ್ನು ನಾವು ನಿರೀಕ್ಷಿಸಿರಲಿಲ್ಲ' ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಇದಕ್ಕು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.

'ಅವರು ಇಂದು ನನ್ನ ಅಂಗಡಿಯನ್ನು ಕೆಡವಿದರು. ವಸ್ತುಗಳು ಮತ್ತು ದಾಖಲೆಗಳನ್ನು ಹೊರತರಲು ನನಗೆ ಅವಕಾಶ ನೀಡಲಿಲ್ಲ. ನಮ್ಮ ಜೀವನೋಪಾಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲ' ಎಂದು ಸುಮಾರು 30 ವರ್ಷಗಳಿಂದ ಮಾರುಕಟ್ಟೆಯಲ್ಲಿ ಪ್ಲಂಬಿಂಗ್ ಸರ್ವೀಸ್ ಅಂಗಡಿ ನಡೆಸುತ್ತಿರುವ ಸುಬ್ಬಣ್ಣನವರು ಹೇಳಿದ್ದಾರೆ.
ಮಾರುಕಟ್ಟೆ ಶಿಥಿಲಗೊಂಡಿದೆ. ಇದು ಅಪಾಯದ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ನಾವು ಕೂಡಲೇ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿತ್ತು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಇದರಿಂದ ವ್ಯಾಪಾರಿಗಳಿಗೂ ಅಪಾಯವಿದೆ ಎಂದಿರುವ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು, 'ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಬೆನ್‌ಎಸ್‌ಸಿಎಲ್) ಮಾರುಕಟ್ಟೆಯನ್ನು ಪುನಃ ಮಾಡಲು ಪ್ರಸ್ತಾಪಿಸಿದೆ. ನಾವು ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಮತ್ತು ನಂತರ ಅನೇಕ ಸೂಚನೆಗಳನ್ನು ನೀಡಿದ್ದೇವೆ' ಎಂದು ತಿಳಿಸಿದ್ದಾರೆ.
'ಆದರೆ, ವ್ಯಾಪಾರಿಗಳಲ್ಲಿ ಹಲವರು ಸುಮಾರು 10 ವರ್ಷಗಳಿಂದ ಬಾಡಿಗೆಯನ್ನು ಪಾವತಿಸಿಲ್ಲ. ಆ ಕಾರಣ, ಅವರು ಖಾಲಿ ಮಾಡುವ ಮೊದಲು ಎಲ್ಲವನ್ನೂ ಪಾವತಿಸಬೇಕಾಗುತ್ತದೆ' ಎಂದು ಅಧಿಕಾರಿ ತಿಳಿಸಿದ್ದಾರೆ.

'ಮಾನವೀಯ ಆಧಾರದ ಮೇಲೆ' BenSCL ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿಯು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ. ಆದರೆ, ಪುನರ್ ಅಭಿವೃದ್ಧಿಗೊಂಡ ಮಾರುಕಟ್ಟೆಯಲ್ಲಿ ಹೊಸ ಅಂಗಡಿಗಳನ್ನು ನೀಡುವುದುದಾಗಿ ಬಿಬಿಎಂಪಿ ಭರವಸೆ ನೀಡಿದೆ. ಆ ಹಿನ್ನೆಲೆಯಲ್ಲಿ ಕೆಲವರು ಅಂಗಡಿಗಳನ್ನು ಖಾಲಿ ಮಾಡುವುದಾಗಿ ಹೇಳಿದ್ದಾರೆ.
'ಅಂಗಡಿಗಳ ಮರು ಹಂಚಿಕೆ ಬಗ್ಗೆ ದೃಢೀಕರಣವಿಲ್ಲದೆ, ನಾವು ಹೇಗೆ ಖಾಲಿ ಮಾಡುವುದು? ಕೆಲವರು 40 ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ' ಎಂದು ಹೂವಿನ ವ್ಯಾಪಾರಿ ಗೋಪಿನಾಥ್ ತಮ್ಮ ದುಗುಡವನ್ನು ಹಂಚಿಕೊಂಡಿದ್ದಾರೆ.
ವ್ಯಾಪಾರಸ್ಥರು ಮಾರುಕಟ್ಟೆಯನ್ನು ಪುನರಾಭಿವೃದ್ಧಿ ಮಾಡುವ ಯೋಜನೆಗೆ ವಿರುದ್ಧವಾಗಿಲ್ಲ. ಆದರೆ, ಅವರು ಜೀವನ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಎಂದು ಗೋಪಿನಾಥ್ ಹೇಳಿದ್ದಾರೆ.
'ಸಾಂಕ್ರಾಮಿಕ ಕಾಲದಲ್ಲಾದ ನಷ್ಟದಿಂದ ವ್ಯಾಪಾರಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಬಾಕಿ ಪಾವತಿಸಲು ಕೆಲವು ದಿನಗಳನ್ನು ನಾವು ಕೇಳುತ್ತಿದ್ದೇವೆ. ಮರು-ಹಂಚಿಕೆಯ ಭರವಸೆಯೂ ನಮಗೆ ಬೇಕಿದೆ' ಎಂದು ಗೋಪಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಯೊಬ್ಬರು ಮಾತನಾಡಿ, 'ಬಿಬಿಎಂಪಿ ಕಾಯಿದೆ, 2020 ಭರವಸೆಯನ್ನು ಅನುಮತಿಸುವುದಿಲ್ಲ. ಆ ಕಾರಣ ಹೊಸ ಮಾರುಕಟ್ಟೆಯಲ್ಲಿ ಅಂಗಡಿಯನ್ನು ಅವರಿಗೆ ಭರವಸೆ ನೀಡುವುದು ಕಷ್ಟ. ನಾವು ಟೆಂಡರ್ ಕರೆದು ಸೂಕ್ತ ವಿಧಾನಗಳನ್ನು ಅನುಸರಿಸಬೇಕು' ಎಂದು ಸ್ಪಷ್ಟಪಡಿಸಿದ್ದಾರೆ.
ನಡೆಯುತ್ತಿರುವ ರಸ್ತೆ ಕಾಮಗಾರಿಗಳು ತಮ್ಮ ವ್ಯಾಪಾರಕ್ಕೆ ಧಕ್ಕೆ ತಂದಿವೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಈ ಯೋಜನೆಯು ಮಾರುಕಟ್ಟೆಯನ್ನು ತಲುಪಲು ಪ್ರಯತ್ನಿಸುವ ಗ್ರಾಹಕರ ಹಾದಿಯಲ್ಲಿ ತೀವ್ರ ಅಡಚಣೆಯನ್ನುಂಟು ಮಾಡಿದೆ ಎಂದು ಹೂವಿನ ಅಂಗಡಿ ಮಾಲೀಕರು ತಿಳಿಸಿದ್ದಾರೆ.
'ಬಿಬಿಎಂಪಿ ಆಸ್ತಿಯನ್ನು ನಮಗೆ (BenSCL) ಹಸ್ತಾಂತರಿಸಬೇಕು. ಅಲ್ಲಿಯವರೆಗೆ ನಾವು ಕಾಮಗಾರಿ ಆರಂಭಿಸುವುದಿಲ್ಲ. ಆದಾಗ್ಯೂ, ಗುತ್ತಿಗೆದಾರರು ಯೋಜನೆಯನ್ನು ಸಿದ್ಧಪಡಿಸುವ ಭಾಗವಾಗಿ ಜೆಸಿಬಿ ಪಡೆದಿರಬಹುದು. ಆದರೆ, ನಾವು ಈ ಯೋಜನೆಯಲ್ಲಿ ಇನ್ನೂ ಮುಂದಕ್ಕೆ ಹೋಗಿಲ್ಲ,' ಎಂದು ಯೋಜನೆಯ ಉಸ್ತುವಾರಿ ವಹಿಸಿರುವ ಹಿರಿಯ ಬೆನ್‌ಎಸ್‌ಸಿಎಲ್ ಎಂಜಿನಿಯರ್ ಹೇಳಿದರು.
ಪ್ರಸ್ತುತ ಮಾರುಕಟ್ಟೆ ಇರುವ ಪ್ರದೇಶದಲ್ಲಿ ಸುಮಾರು 180 ಕಾರುಗಳಿಗೆ ಸ್ಥಳಾವಕಾಶ ನೀಡುವ ಸಾಮರ್ಥ್ಯವಿರುವ ಮಲ್ಟಿ-ಲೆವೆಲ್ ಕಾರ್ ಪಾರ್ಕ್ (MLCP) ಅನ್ನು ಹೊಸ ಯೋಜನೆಯು ಹೊಂದಿದೆ.
ನಾಲ್ಕು ಮಹಡಿಗಳನ್ನು ಪಾರ್ಕಿಂಗ್‌ಗೆ ಮೀಸಲಿಟ್ಟರೆ, ಕೆಳಗಿನ ಮತ್ತು ಮೇಲಿನ ನೆಲ ಅಂತಸ್ತಿನಲ್ಲಿ ವ್ಯಾಪಾರಿಗಳಿಗೆ ಅಂಗಡಿಗಳಿವೆ. 20 ಕೋಟಿಯಲ್ಲಿ 47 ಮಳಿಗೆಗಳನ್ನು ನಿರ್ಮಿಸಲು ಅಧಿಕಾರಿಗಳು ಯೋಜಿಸಿದ್ದಾರೆ.












Click it and Unblock the Notifications