₹250 ಕೋಟಿ ಮಂಜೂರು: ಕೆಪಿಸಿಸಿ ವಕ್ತಾರ ಮೇಲೆ 4 ಜಿಲ್ಲೆಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲು: ಬಿಜೆಪಿ ನಾಯಕ
ಬೆಂಗಳೂರು, ಏಪ್ರಿಲ್ 02: ಕೋಟ್ಯಂತರ ರೂಪಾಯಿ ಹಣ ಮಂಜೂರು ಆರೋಪಗಳ ಕುರಿತಂತೆ ಇಬ್ಬರು ಕಾಂಗ್ರೆಸ್ ಮುಖಂಡರ ವಿರುದ್ಧ ಬಿಜೆಪಿ ನಾಯಕರ ಮಾನನಷ್ಟ ಮೊಕದ್ದಮೆ ದಾಖಲಿಸಿದ ಘಟನೆ ಜರುಗಿದೆ. ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.
ಬೆಂಗಳೂರಿನ ಯಡಿಯೂರ ವಾರ್ಡಿನಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಮತ್ತು ಮಾಜಿ ಎಂ.ಎಲ್.ಸಿ. ರಮೇಶ್ ಬಾಬು ರವರುಗಳ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಎನ್. ಆರ್.ರಮೇಶ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಆರೋಪವೇನು, ದೂರುದಾರರು ನೀಡಿದ ಸತ್ಯಾಂಶಗಳೇನು, ನಿಮ್ಮ ವಾರ್ಡಿಗೆ ಬಿಡುಗಡೆಯಾದ ಖಚಿತ ಅನುದಾನ ಕುರಿತು ವಿವರಿಸಿದ ಅಂಕಿ ಅಂಶಗಳ ಮಾಹಿತಿ ಇಲ್ಲಿ ತಿಳಿಯಬಹುದು.
ಇತ್ತೀಚೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಎಂ. ಲಕ್ಷ್ಮಣ್ ಹಾಗೂ ರಮೇಶ್ ಬಾಬು ರವರು ಅವರು ಶುಕ್ರವಾರದಂದು ಮಾರ್ಚ್ 31ರಂದು ಸುದ್ದಿಗೋಷ್ಠಿಯಲ್ಲಿ ನನ್ನ ವಿರುದ್ಧ ಯಡಿಯೂರು ವಾರ್ಡಿಗೆ 250 ಕೋಟಿ ರೂಪಾಯಿಗಳಷ್ಟು ಅನುದಾನ ಕುರಿತು ಆರೋಪ ಮಾಡಿದ್ದಾರೆ. ಇದು ಸತ್ಯವಲ್ಲ ಎಂದು ಎನ್. ಆರ್. ರಮೇಶ್ ತಿಳಿಸಿದ್ದಾರೆ.
ರಸ್ತೆ ಅಭಿವೃದ್ಧಿಯಾಗಿದ್ದು ಮೂರು ಬಾರಿ
ನಾನು ನನ್ನ ಪತ್ನಿ ಯಡಿಯೂರು ವಾರ್ಡಿನ ಪಾಲಿಕೆ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಯಡಿಯೂರ ವಾರ್ಡ್‌ಗೆ 250 ಕೋಟಿ ರೂಪಾಯಿ ಅನುದಾನ ಮಂಜೂರಾಗಿಲ್ಲ. 2010-11 ರಿಂದ 2022-23 ರವರೆಗಿನ 14 ವರ್ಷದ ಅವಧಿಯಲ್ಲಿ ವಾರ್ಡಿಗೆ ಎಲ್ಲ ವಿಧಧ ಅನುದಾನ ಸೇರಿ ಒಟ್ಟು 87.42 ಕೋಟಿ ರೂ.ಮಾತ್ರ ಬಿಡುಗಡೆಯಾಗಿದೆ.

ಈ 14 ವರ್ಷದಲ್ಲಿ ಯಡಿಯೂರು ವಾರ್ಡ್ ವ್ಯಾಪ್ತಿಯ 18 ಬಡಾವಣೆಗಳ ವ್ಯಾಪ್ತಿಯಲ್ಲಿ ಕೇವಲ 03 ಬಾರಿ ಮಾತ್ರವೇ ರಸ್ತೆಗಳ ಡಾಂಬರೀಕರಣ ಆಗಿದೆ. ಈ ಸತ್ಯ ಆರೋಪ ಮಾಡುವವರಿಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದರು.
ಬೇರೆ ವಾರ್ಡ್‌ಗಳ್ಲಲಿ ಮಾಡುವಂತೆ ವರ್ಷಕ್ಕೆ ಒಂದು ಇಲ್ಲವೇ ಎರಡೆರಡು ಬಾರಿ ಡಾಂಬರೀಕರಣ ಮಾಡುವ ಪದ್ಧತಿ ಇಲ್ಲಿಲ್ಲ. ವೈಜ್ಞಾನಿಕವಾಗಿ ಮತ್ತು ಸಾರ್ವಜನಿಕರಿಗೆ 06 ತಿಂಗಳ ಮುಂಚಿತವಾಗಿಯೇ ಆಯಾ ರಸ್ತೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುವುದರಿಂದ ಯಡಿಯೂರು ವಾರ್ಡ್ ನಲ್ಲಿ ರಸ್ತೆ ಅಗೆತದ ಕಾರ್ಯಗಳು ಕೇವಲ ಶೇಕಡಾ 0.1 ಪ್ರತಿಶದಷ್ಟು ಮಾತ್ರ ಇರುತ್ತದೆ. ಆಗಾಗಿ ಅತ್ಯಂತ ಸುಸಜ್ಜಿತವಾದ ಮತ್ತು ಸಧೃಢವಾದ ರಸ್ತೆಗಳನ್ನು ಖುದ್ದಾಗಿ ನಿಂತು ಅನುಷ್ಠಾನಗೊಳಿಸುವುದರಿಂದ ಪ್ರತೀ ಮೂರರಿಂದ ನಾಲ್ಕು ವರ್ಷಗಳಿಗೆ ಒಮ್ಮೆ ಮಾತ್ರವೇ ಡಾಂಬರೀಕರಣ ಅಥವಾ ಕಾಂಕ್ರಿಟ್ ಕಾಮಗಾರಿಗಳನ್ನು ಈ ವಾರ್ಡ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಕೆರೆ ಅಭಿವೃದ್ಧಿಗೆ 16 ಕೋಟಿ ರೂ. ಬಿಡುಗಡೆಯಾಗಿಲ್ಲ
ವಾರ್ಡ್ ನಲ್ಲಿ ಅನುಷ್ಠಾನಗೊಂಡ ಯೋಜನೆಗಳು ಐದಾರು ದಶಕಗಳ ಕಾಲ ಶಾಶ್ವತವಾಗಿ ಸಾರ್ವಜನಿಕರ ಸೇವೆಗೆ ನಿಲುಕುವಂತಹ ಯೋಜನೆಗಳಾಗಿವೆ. ವಾರ್ಡ್ ವ್ಯಾಪ್ತಿಯಲ್ಲಿ 15 ಉದ್ಯಾನವನಗಳು ಮತ್ತು 11 ವಿವಿಧ ಯೊಜನೆಗಳ ಕಟ್ಟಡಗಳು ಮತ್ತು ಬಹು ಉದ್ದೇಶಗಳ ಕಟ್ಟಡಗಳನ್ನು ನಿರ್ಮಿಸಲಾಗಿರುತ್ತದೆ.
ವಾರ್ಡಿನಲ್ಲಿರುವ ಯಡಿಯೂರು ಕೆರೆ ಅಭಿವೃದ್ಧಿಗೆ 16 ಕೋಟಿ ರೂಪಾಯಿಗಳಷ್ಟು ಹಣ ಬಿಡುಗಡೆಯಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಅವರು ನೀಡಿದ್ದಾರೆ. ಕಳೆದ 14 ವರ್ಷಗಳ ಅವಧಿಯಲ್ಲಿ ಯಡಿಯೂರು ಕೆರೆ ಅಭಿವೃದ್ಧಿಗೆ ಮತ್ತು ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣವೂ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ಕೇವಲ 4.15 ಲಕ್ಷ ರೂ. ಮಾತ್ರವೇ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ವಾರ್ಡ್ ವ್ಯಾಪ್ತಿಯ ಕಾಮಗಾರಿಗಳನ್ನು ಕೇವಲ ಮೂರು ಮಂದಿ ಗುತ್ತಿಗೆದಾರಿಗೆ ನೀಡಲಾಗಿದೆ ಎಂದು ಸುಳ್ಳು ಹೇಳಲಾಗಿದೆ. ನಮ್ಮ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು ಸಂಖ್ಯೆ 143 ಗುತ್ತಿಗೆದಾರರು ನಿರ್ವಹಿಸಿದ್ದಾರೆ. ಯಾರೋ ಮೂರು ಜನ ಮಾತ್ರವಲ್ಲ ಎಂದರು.
ಕಾಂಗ್ರೆಸ್ ಹಗರಣ ಬಯಲಿಗೆ ತಂದಿದ್ದಕ್ಕೆ ಸುಳ್ಳು ಆರೋಪ
ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದಿರುವ 122 ಕ್ಕೂ ಹೆಚ್ಚು ಬೃಹತ್ ಹಗರಣಗಳನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿದ್ದೇನೆ. ಆ ಸಂಬಂಧ ತನಿಖಾ ಸಂಸ್ಥೆಗಳಲ್ಲಿ ದೂರು ದಾಖಲಿಸಿ ಅವರ ಹಗರಣ ಬಯಲು ಮಾಡಲಾಗಿದೆ. ಅದರಲ್ಲಿ 28 ಪ್ರಕರಣಗಳನ್ನು ಕಾನೂನು ಹೋರಾಟದಲ್ಲಿ ಗೆಲ್ಲುವ ಮೂಲಕ ಸುಮಾರು 8,600 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಸರ್ಕಾರೀ ಆಸ್ತಿ ಪಾಲಿಕೆಗೆ ಮತ್ತು ಸರ್ಕಾರದ ವಶಕ್ಕೆ ವಾಪಸ್ಸು ಬರುವಂತೆ ಮಾಡಲಾಗಿದೆ.
ಈ ಎಲ್ಲ ಕಾರಣಕ್ಕೆ ಭ್ರಷ್ಟ ಕಾಂಗ್ರೆಸ್ಸಿಗರು ನನ್ನ ವಿರುದ್ಧ ದಾಖಲೆಗಳು ಇಲ್ಲದೇ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ರುಜುವಾತುಪಡಿಸಲಾಗುತ್ತಿಲ್ಲ. ಸತ್ಯಕ್ಕೆ ದೂರವಾದ ಕ್ಷುಲ್ಲಕ ವಿಷಯಗಳನ್ನು ಮಾಧ್ಯಮಗಳ ಮುಂದೆ ಪ್ರಚಾರಕ್ಕಾಗಿ ಹರಡಿದ್ದಾರೆ. ಸುಳ್ಳು ಆಪಾಧನೆ ಮೂಲಕ ಸಮಾಜದಲ್ಲಿ ನನಗೆ ವೈಯಕ್ತಿಕ ಮಾನ ನಷ್ಟವನ್ನು ಉಂಟು ಮಾಡಲು ಪ್ರಯತ್ನಿಸಿರುವ ಅವರಿಬ್ಬರ ವಿರುದ್ಧ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಎನ್.ಆರ್.ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications