ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ
ಬೆಂಗಳೂರು, ನವೆಂಬರ್ 10; ಬೆಂಗಳೂರು ನಗರದ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ಅನುಮತಿ ನೀಡಿದೆ. ನವೆಂಬರ್ 29ರಿಂದ ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಪರಿಷೆ ನಡೆಸಲು ಸೂಚನೆ ನೀಡಲಾಗಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸಾಂಪ್ರದಾಯಿಕವಾಗಿ ಪರಿಷೆ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣೇಶ ದೇವಾಲಯದಲ್ಲಿ ಪ್ರತಿವರ್ಷ ಕಡಲೆಕಾಯಿ ಪರಿಷೆ ನಡೆಯುತ್ತದೆ.
ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗುತ್ತದೆ. ಮೂರು ದಿನಗಳ ಕಾಲ ಪರಿಷೆ ನಡೆಯುತ್ತದೆ. ಆದರೆ ಶನಿವಾರವೇ ಅಂಗಡಿಗಳು ಬುಲ್ ಟೆಂಪಲ್ ರಸ್ತೆಯಲ್ಲಿ ತೆರೆಯಲಿದ್ದು, ಒಂದು ವಾರದ ತನಕ ಜಾತ್ರೆ ನಡೆಯುತ್ತದೆ.

ಕಡಲೆಕಾಯಿ ಪರಿಷೆ ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ನಡೆಯುತ್ತದೆ. ಪರಿಷೆಯ ನಿಖರವಾದ ದಿನಾಂಕ ಘೋಷಣೆಯಾದ ಬಳಿಕ ವ್ಯಾಪಾರಿಗಳು ಅಂಗಡಿಗಳನ್ನು ಹಾಕಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ.
ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ದೊಡ್ಡ ಗಣಪತಿ ದೇವಾಲಯದ ಒಳಗೆ ಮಾತ್ರ ಸಂಪ್ರದಾಯದಂತೆ ಪರಿಷೆ ನಡೆಸಲಾಗಿತ್ತು. ಕಡಲೆಕಾಯಿಗಳಿಂದ ದೊಡ್ಡ ಗಣಪತಿಗೆ ಅಭಿಷೇಕ ಮಾಡಿ, ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿತ್ತು.
ಸಾಂಪ್ರಾದಾಯಿಕವಾಗಿ ಮೂರು ದಿನ ನಡೆಯಬೇಕಾದ ಕಡೆಲೆಕಾಯಿ ಪರಿಷೆ ಸುಮಾರು ಒಂದು ವಾರ ನಡೆಯುತ್ತದೆ. ಬುಲ್ ಟೆಂಪಲ್ ರಸ್ತೆಯಲ್ಲಿ ದೊಡ್ಡ ಗಣಪತಿ ದೇವಾಲಯದಿಂದ ರಾಮಕೃಷ್ಣ ಆಶ್ರಮ ಸರ್ಕಲ್ ತನಕ ಅಂಗಡಿಗಳನ್ನು ತೆರೆಯಲಾಗಿರುತ್ತದೆ.
ಸಾಲು-ಸಾಲು ಅಂಗಡಿಗಳು; ಕಡಲೆಕಾಯಿ ಪರಿಷೆ ಬೆಂಗಳೂರು ನಗರದ ದೊಡ್ಡ ಜಾತ್ರೆಯಾಗಿದೆ. ಈ ಸಮಯದಲ್ಲಿ ಜನರು ಕಡಲೆ ಬೀಜಗಳನ್ನು ರೈತರಿಂದ ನೇರವಾಗಿ ಮಾರುಕಟ್ಟೆ ದರಕ್ಕಿಂತ ಅಗ್ಗದಲ್ಲಿ ಖರೀದಿಸುತ್ತಾರೆ.
ಪರಿಷೆಯ ಸಂದರ್ಭದಲ್ಲಿ ದೊಡ್ಡ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಬೀದಿಯ ಎರಡೂ ಬದಿ ನೂರಾರು ಅಂಗಡಿಗಳು ತೆರೆದಿರುತ್ತವೆ. ಬಸವನಗುಡಿ ಮತ್ತು ಸುತ್ತಮುತ್ತಲಿನ ಜನರು ಕಡಲೆಕಾಯಿ ಪರಿಷೆಗಾಗಿ ಆಗಮಿಸುತ್ತಾರೆ.
ಪರಿಷೆ ಇತಿಹಾಸ; ಬೆಂಗಳೂರು ನಗರ ಇಷ್ಟು ದೊಡ್ಡದಾಗಿ ಬೆಳೆದು ಮಹಾ ನಗರವಾಗುವ ಮೊದಲು ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ಶೇಂಗಾ ಬೆಳೆಯುತ್ತಿದ್ದರು. ಆದರೆ ಶೇಂಗಾ ಕಟಾವಿಗೆ ಸಿದ್ಧವಾಗುವಾಗ ಬೆಳೆಯನ್ನು ಬಸವವೊಂದು ನಾಶಪಡಿಸುತ್ತಿತ್ತು.
ರೈತರು ಒಂದು ದಿನ ಕಾದು ಬೆಳೆಯನ್ನು ರಕ್ಷಿಸಿಕೊಳ್ಳಲು ಬಸವನಿಗೆ ಹೊಡೆಯಲು ಮುಂದಾಗುತ್ತಾರೆ. ಆಗ ಅದು ಕಲ್ಲಾಗಿ ಹೋಯಿತು ಎಂದು ಇತಿಹಾಸ ಹೇಳುತ್ತದೆ. ಅಂದಿನಿಂದ ರೈತರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಕಡಲೆಕಾಯಿ ಪರಿಷೆಯಲ್ಲಿ ವಿವಿಧ ಬಗೆಯ ಕಡಲೆಕಾಯಿ ಲಭ್ಯವಿರುತ್ತದೆ. ಸೇರಿಗೆ ಇಷ್ಟು ಎಂಬಂತೆ ಹಸಿ, ಒಣ ಕಡಲೆಕಾಯಿ ಮಾರಾಟವಾಗುತ್ತದೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ವ್ಯಾಪಾರಿಗಳು ಪರಿಷೆ ಸಮಯದಲ್ಲಿ ಇಲ್ಲಿ ಬಂದು ಕಡಲೆಕಾಯಿ ಮಾರಾಟ ಮಾಡುತ್ತಾರೆ.
ಎಂದಿನಂತೆ ಪರಿಷೆ ನಡೆಯಲಿದೆ; ಕಳೆದ ವರ್ಷ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕಡಲೆಕಾಯಿ ಪರಿಷೆಗೆ ಹಲವಾರು ನಿರ್ಬಂಧ ಹೇರಲಾಗಿತ್ತು. ಈ ಬಾರಿ ಎಂದಿನಂತೆ ಪರಿಷೆ ನಡೆಯಲಿದ್ದು, ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿದ್ದು, "ಕಡಲೆಕಾಯಿ ಪರಿಷೆಗೆ ಬಿಬಿಎಂಪಿಯಿಂದ ಅನುಮತಿ ನೀಡಲಾಗಿದೆ. ಎಂದಿನಂತೆ ಪರಿಷೆ ನಡೆಸಲು ಹಸಿರು ನಿಶಾನೆ ತೋರಿಸಲಾಗಿದೆ" ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಂಗಳವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 187 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,489.












Click it and Unblock the Notifications