KPSC: PDO ಪರೀಕ್ಷೆ ಅಕ್ರಮ ಆರೋಪ: ವಿಡಿಯೋ ಸಮೇತ ವಿವರಿಸಿದ ಬಸನಗೌಡ ಯತ್ನಾಳ್
ಬೆಂಗಳೂರು, ಡಿಸೆಂಬರ್ 15: ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿ ಇದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಒಂದಷ್ಟು ಲೋಪದೋಷ ಆಗಿದೆ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ ಬೆನ್ನಲ್ಲೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪರೀಕ್ಷೆ ನಡೆದ ದಿನ ಏನಾಯಿತು ಎಂಬುದರ ವಿಡಿಯೋ ಸಮೇತ ವಿವರಿಸಿದ್ದಾರೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
PDO ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ತಡವಾಗಿ ಬಂತೆಂದು ಪ್ರತಿಭಟಿಸಿದ ಪರೀಕ್ಷಾರ್ಥಿಗಳ ಮೇಲೆ ಕಾಂಗ್ರೆಸ್ ರಾಜ್ಯ ಸರ್ಕಾರ ಎಫ್.ಐ.ಆರ್ ಹಾಕಿದೆ. ಈ ಅಕ್ರಮದ ಬಗ್ಗೆ ನ್ಯಾಯಯುತವಾಗಿ ಪ್ರತಿಭಟನೆ ಮಾಡಿದ ಪರೀಕ್ಷಾರ್ಥಿಗಳ ತಮ್ಮ ಮೇಲೆ ಪ್ರಕರಣ ದಾಖಲಾಗಿದ್ದಕ್ಕೆ ಪರದಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ವಿಡಿಯೋದಲ್ಲಿ ಪ್ರಶ್ನೆ ಪ್ರತ್ರಿಕೆ ತಡವಾಗಿದ್ದು ಸ್ವತಃ ಸಿಬ್ಬಂದಿ ಒಪ್ಪಿಕೊಂಡ ವಿಡಿಯೋದ ಡಿಟೇಲ್ ಮಾಹಿತಿ ಇಲ್ಲಿದೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ಸಮನ್ವಯದ ಕೊರತೆ ಹಾಗೂ ಬೇಜವಾಬ್ದಾರಿಯಿಂದ ಪ್ರಶ್ನೆ ಪತ್ರಿಕೆ 45 ನಿಮಿಷ ತಡವಾಗಿ ಬಂದದ್ದನ್ನು ಕರ್ತವ್ಯನಿರತ ಸಿಬ್ಬಂದಿಗಳೇ ಒಪ್ಪಿಕೊಂಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಪ್ರಮುಖ ವಿಷಯವೆಂದರೆ ಪ್ರಶ್ನೆ ಪತ್ರಿಕೆಗಳಿದ್ದ ಕವರ್ ಸೀಲ್ ಮೊದಲೇ ತೆರೆದಿದ್ದು, ಒಂದು ಕವರ್ ನಲ್ಲಿ 24 ಪ್ರಶ್ನೆ ಪತ್ರಿಕೆ ಇರಬೇಕಾದದ್ದ ಕಡೆ ಕೇವಲ 12 ಪ್ರಶ್ನೆ ಪತ್ರಿಕೆಗಳು ಇವೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಗಳು ಇವೆ. ಸ್ಥಳದಲ್ಲಿದ್ದವರೇ ನೋಡಿದ್ದಾರೆ.
ಪರೀಕ್ಷಾರ್ಥಿಗಳ ಮೇಲೆ ಸುಳ್ಳು ಪ್ರಕರಣ
ಕರ್ನಾಟಕ ಲೋಕಸೇವಾ ಆಯೋಗ (KPSC) ಒಂದರ ಮೇಲೊಂದು ಲೋಪಗಳನ್ನು ಎಸಗುತ್ತಾ ಪರೀಕ್ಷಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವುದಲ್ಲದೆ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ಕೋರ್ಟ್ ಕಚೇರಿ ಅಲೆಯುವಂತೆ ಮಾಡುತ್ತಿರುವುದು ಬೇಜವಾಬ್ದಾರಿ ಸಂಗತಿಯಾಗಿದೆ. ಇದು ಸರ್ಕಾರ ಅಸಮರ್ಥತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಕೂಡಲೇ ಪರೀಕ್ಷಾರ್ಥಿಗಳ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಾಸ್ ಪಡೆಯಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ರಾಝ್ಯ ಸರ್ಕಾರ ಅಧಿಕಾರಿಗಳ ಹಾಗೂ ಲೋಕ ಸೇವಾ ಆಯೋಗದ ತಪ್ಪಿನಿಂದ ಆದ ಪ್ರಮಾದವನ್ನು ಒಪ್ಪಿಕೊಂಡು, ವಿದ್ಯಾರ್ಥಿಗಳ ಮೇಲಿನ ಪ್ರಕರಣವನ್ನು ವಾಪಾಸ್ ಪಡೆಯಬೇಕು. ಇಲ್ಲವಾದರೆ ಲೋಕ ಸೇವಾ ಆಯೋಗದ ಕಚೇರಿಯ ಮುಂದೆ ಪರೀಕ್ಷಾರ್ಥಿಗಳ ಜೊತೆ ಪ್ರತಿಭಟಿಸುತ್ತೇವೆ ಎಂದು ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಿಡಿಯೋದಲ್ಲಿ ಏನಿದೆ?
ಕೆಪಿಎಸ್‌ಸಿ ನಡೆಸುವ ಪಿಡಿಒ ಪರೀಕ್ಷೆ ರಾಯಚೂರಿನ ಸಿಂಧನೂರಿನ ಸರ್ಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಸುಮಾರು 45 ನಿಮಿಷಗಳ ಕಾಲ ತಡವಾಗಿಸಿಬ್ಬಂದಿ ಪ್ರಶ್ನೆ ಪತ್ರಿಕೆ ತರುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋವನ್ನು ಶಾಸಕ ಯತ್ನಾಳ್ ಅವರು ಹಂಚಿಕೊಂಡಿದ್ದಾರೆ.
ವಿಡಿಯೋ ಸೆರೆ ಹಿಡಿದ ವ್ಯಕ್ತಿಯೊಬ್ಬರು, ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದ ಸಿಬ್ಬಂದಿಯನ್ನು ಪ್ರಶ್ನಿಸುತ್ತಾರೆ. ಚೀಫ್ ಪ್ರಶ್ನೆ ಪತ್ರಿಕೆ ಈಗ ಕೊಟ್ಟಿದ್ದಾರೆ ಎಂದು ಸಮಯ ತೋರಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅಲ್ಲದೇ ಪ್ರಶ್ನೆ ಪತ್ರಿಕೆ ಕವರ್ ಓಪನ್ ಆಗಿತ್ತು. ಅದರಲ್ಲಿ ಕಡಿಮೆ ಪ್ರಶ್ನೆ ಪತ್ರಿಕೆಗಳು ಇದ್ದವು ಎಂದು ತಿಳಿದು ಬಂದಿದೆ. ಲೋಪದೋಷ ಸಿಬ್ಬಂದಿಯೇ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರು ಹಾಗೂ ಪರೀಕ್ಷಾರ್ಥಿಗಳು ಗರಂ ಆಗಿದ್ದಾರೆ.












Click it and Unblock the Notifications