ಗುಂಡಿ ಇಲ್ಲದ ರಸ್ತೆ ನಮ್ಮಲ್ಲೇಕಿಲ್ಲ? ಸಿದ್ದು ಅಮಾಯಕ ಪ್ರಶ್ನೆ!
ಬೆಂಗಳೂರು, ಸೆಪ್ಟೆಂಬರ್ 16: ಮುಖ್ಯಮಂತ್ರಿಯಾದನಂತರ ಚೊಚ್ಚಲ ವಿದೇಶ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ ಅವರು ನಿನ್ನೆಯಷ್ಟೇ ಚೀನಾದಿಂದ ಮರಳಿದ್ದಾರೆ. ಆದರೆ ಅವರ ಈ ಭೇಟಿಯಲ್ಲಿ ಅನೇಕ ಹೊಸ ಹೊಳಹುಗಳನ್ನು ಕಂಡಿದ್ದಾರೆ.
China-returned ಸಿಎಂ ಸಿದ್ದರಾಮಯ್ಯ ಅವರು ಇಂಜಿನಿಯರುಗಳ ದಿನಾಚರಣೆ ಅಂಗವಾಗಿ ರಾಜ್ಯದ ಇಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಅಲ್ರೀ ಚೀನಾದ ನಗರಗಳಲ್ಲಿ ಹುಡುಕಿದರೂ ಒಂದು ರಸ್ತೆ ಗುಂಡಿ ಸಿಗುವುದಿಲ್ಲ. ನಿಮಗೆ ಬೇಕು ಅಂದರೂ ಅವು ಕಾಣುವುದಿಲ್ಲ. ನಮ್ಮಲ್ಲಿ ಏಕೆ ಹಾಗಿಲ್ಲ? ಹೋಗಲಿ ಆ ಮಟ್ಟಕ್ಕೆ ಬೇಡ. ನಮ್ಮ ಮಟ್ಟಕ್ಕಾದರೂ ರಸ್ತೆಗಳು ಚೆನ್ನಾಗಿರಬೇಡವೇ?' ಎಂದು ಸಭೆಯಲ್ಲಿದ್ದ ಸಾವಿರಾರು ಇಂಜಿನಿಯರುಗಳತ್ತ ಅಮಾಯಕರಾಗಿ ಪ್ರಶ್ನಿಸಿದ್ದಾರೆ.

2 ವರ್ಷಕ್ಕೆ ಮುಗಿಯಬೇಕಾದ ಕಾಮಗಾರಿ 4 ವರ್ಷವಾದರೂ ಏಕೆ ಮುಗಿಯುವುದಿಲ್ಲ? ಎಂದೂ ಪ್ರಶ್ನಿಸಿದ್ದಾರೆ. ಹಾಗಂತ ಮುಗ್ಧ ಮನಸ್ಸಿನ ಸಿದ್ದರಾಮಯ್ಯನವರಿಗೆ ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲ ಅಂತಲ್ಲ. In fact ನಾಲ್ಕಾರು ದಶಕಗಳಿಂದ ರಾಜಕೀಯ ಮಾಡಿಕೊಂಡುಬಂದಿರುವ ಅವರಿಗೇ ಇದರ ಬಗ್ಗೆ ಹೆಚ್ಚು ತಿಳಿದಿರುವುದು. ಗಮನಾರ್ಹವೆಂದರೆ ಸಿದ್ದು ಅವರು ಚೀನಾ ಪ್ರವಾಸಕ್ಕೆ ಕೆಲವೇ ಗಂಟೆಗಳ ಮೊದಲು ಬೆಂಗಳೂರು ಸಿಟಿ ರೌಂಡ್ಸ್ ಹೊಡೆದು, ಇಲ್ಲಿನ ರಸ್ತೆಗಳ ನರಕ ದರ್ಶನ ಪಡೆದಿದ್ದರು.
ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರು ಚೀನಾ ಪ್ರವಾಸದ ತಮ್ಮ ಅನುಭವ ಬುತ್ತಿಯನ್ನು ಇನ್ನೂ ಹಂಚಿಕೊಂಡಿದ್ದಾರೆ. 'ಚೀನಾದ ಶಾಂಘೈ ಸಿಟಿಯ ಬಗ್ಗೆ ಹೇಳುವಂತೆಯೇ ಇಲ್ಲ. ಈ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ 50 ಕಿಮೀ ಅಲ್ಲಿರುವ ಮ್ಯಾಗ್ನೆಟಿಕ್ ರೈಲು ಬರೀ 6 ನಿಮಿಷಕ್ಕೆ ಏರ್ ಪೋರ್ಟ್‌ಗೆ ತಂದು ಬಿಡುತ್ತದೆ. ಅಂದರೆ, ರೈಲು 450 ಕಿಮೀ ವೇಗದಲ್ಲಿ ಚಲಿಸುತ್ತದೆ. ಅಲ್ಲಿನ ತಂತ್ರಜ್ಞಾನ ಬಗ್ಗೆ ಹೇಳುವಂತಿಲ್ಲ ಬಿಡಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೀನಾ ಮುಂದುವರಿದಿದ್ದು, ಭಾರತ ಹಿಂದುಳಿದಿರುವ ಬಗ್ಗೆಯೂ ಅವರು ನಿರಾಶೆ/ ಬೇಸರ ವ್ಯಕ್ತಪಡಿಸಿದ್ದಾರೆ. 'ಅಲ್ರೀ, ಚೀನಾದವರು ನಮಗಿಂತ ಎರಡು ವರ್ಷ ತಡವಾಗಿ ಸ್ವಾತಂತ್ರ್ಯ ಪಡೆದವರು. ಈಗ ನಮಗಿಂತ ವೇಗವಾಗಿ ಹೋಗುತ್ತಿದ್ದಾರೆ. ಆದರೂ ಚೀನಾಕ್ಕಿಂತ ನಾವೂ ಏನೂ ಕಡಿಮೆ ಇಲ್ಲ. ಆದರೆ, ನಮ್ಮಲ್ಲಿ ಇಚ್ಛಾಶಕ್ತಿ ಇಲ್ಲ. ಆದ್ದರಿಂದ ಇಂಜಿನಿಯರುಗಳೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿರುವವರು ಕನಿಷ್ಠ ಪ್ರಾಮಾಣಿಕತೆ, ಶಿಸ್ತು ಅಳವಡಿಸಿಕೊಳ್ಳಬೇಕು' ಎಂದು ಉಚಿತ ಸಲಹೆ ನೀಡಿದ್ದಾರೆ.
ಅಂದಹಾಗೆ ಖುದ್ದು ಸಿದ್ದರಾಮಯ್ಯನವರೇ ಪ್ರಸ್ತುತ ನಾಡಿನ ದೊರೆಯಾಗಿದ್ದಾರೆ. ತೀರಾ ಚೀನಾದಂತೆ ಎಲ್ಲೆಡೆಯೂ ಗುಂಡಿಗಳಿಲ್ಲದೆ ರಸ್ತೆಯನ್ನೇ ನಿರ್ಮಿಸಿಕೊಡಿ ಎಂದು ಕೇಳುವುದು ತರವಲ್ಲ. ಆದರೆ ಅವರೇ ಹೇಳಿದಂತೆ ಒಂದಷ್ಟು ಇಚ್ಛಾಶಕ್ತಿಯನ್ನು ಅವರೂ ಹೊಂದಲಿ. ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿಕೊಡಲಿ ಎಂದು ಆಶಿಸೋಣವೇ?












Click it and Unblock the Notifications