ಹತ್ತು ಸಾವಿರ ರೂಪಾಯಿಗೆ ತಾಯಿಯನ್ನೇ ಕೊಂದ ಮಗ
ಬೆಂಗಳೂರು, ನ 12: ಎರಡು ತಿಂಗಳ ಹಿಂದೆ ನಡೆದ ಕೊಲೆ ರಹಸ್ಯವನ್ನು ಭೇದಿಸುವಲ್ಲಿ ಬೆಂಗಳೂರು ವಿವೇಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ತು ಸಾವಿರ ರೂಪಾಯಿ ನೀಡದ ತಾಯಿಯನ್ನು ತಾನೇ ಕೊಂದಿರುವುದಾಗಿ ಮಗ ಒಪ್ಪಿ ಕೊಂಡಿರುತ್ತಾನೆ.
ಘಟನೆಯ ವಿವರ: ಸೆಪ್ಟಂಬರ್ ಹದಿನೇಳರಂದು ವಿವೇಕನಗರ ಪೊಲೀಸ್ ಠಾಣಾ ಸರಹದ್ದಿನ ಈಜಿಪುರದಲ್ಲಿ ಸುಮಾರು 60 ವರ್ಷ ವಯಸ್ಸಿನ ಮೈಲಾವತಿ ಎಂಬ ಮಹಿಳೆಯನ್ನು ಯಾರೋ ಅಪರಿಚಿತ ಆಸಾಮಿಗಳು ಕೊಂದಿದ್ದರು.
ಆಕೆಯ ಸೀರೆಯಿಂದ ಕೈಕಾಲು, ಬಾಯಿ ಮುಖವನ್ನು ಕಟ್ಟಿ, ಕೊಲೆ ಮಾಡಿ ಆಕೆಯ ಕೊರಳಿನಲಿದ್ದ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಹೋಗಿರುತ್ತಾರೆಂದು ಮೃತಳ ಮಗಳು ಶ್ರೀಮತಿ ಯೋಗಿತಾ ಆನಂದನ್ ಎಂಬುವರು ವಿವೇಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.(ಮಂಡ್ಯದಲ್ಲಿ ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು)
ದೂರಿನ ಮೇರೆಗೆ ಪೊಲೀಸರು ಐಪಿಸಿ ಕಲಂ 302 ಮೇಲೆ ಪ್ರಕರಣವನ್ನು ದಾಖಲು ಮಾಡಿ, ತನಿಖೆ ಆರಂಭಿಸಿದ್ದರು. ಮೇಲಿನ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಮೊಬೈಲ್ ಹಾಗೂ ಕಳುವಾಗಿದ್ದ ಚಿನ್ನದ ಸರದ ಮುಖಾಂತರ ಮಾಹಿತಿಯನ್ನು ಸಂಗ್ರಹಿದ್ದರೂ, ಯಾವುದೇ ಹೆಚ್ಚಿನ ಸುಳಿವು ಪತ್ತೆಯಾಗಿರಲಿಲ್ಲ.

ಅಕ್ಕಪಕ್ಕದ ಮನೆಯವರ ವಿಚಾರಣೆಯ ಸಂದರ್ಭದಲ್ಲಿ, ಮೃತಳ ಮನೆಯಲ್ಲಿದ್ದ ನಾಯಿಯು ಕೃತ್ಯ ನಡೆದ ದಿನದಂದು ಹೆಚ್ಚಾಗಿ ಬೊಗಳದಿರುವುದನ್ನು ವಿವರಿಸಿದ್ದರು. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿದ ತನಿಖಾಧಿಕಾರಿಯವರು, ಈ ಕೃತ್ಯವು ಮನೆಯ ಪರಿಚಿತರಿಂದಲೇ ನಡೆದಿರಬಹುದೆಂಬ ಸಂಶಯದ ಮೇರೆಗೆ ತನಿಖೆಯನ್ನು ಮುಂದುವರೆಸಿದ್ದರು.
ಪ್ರಕರಣದ ಆರೋಪಿಯ ಪತ್ತೆಗಾಗಿ ಎಲ್ಲಾ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಅವರ ಚಲನವಲನದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸಿದಾಗ, ಕೊಲೆಯನ್ನು ಮೃತಳ ಮಗನಾದ ಗಿರೀಶ್ ಗಹನ್ (22) ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತದೆ. ವಿಚಾರಣೆ ವೇಳೆಯಲ್ಲಿ ಮೃತಳ ಮಗನೇ ಕೃತ್ಯ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ತನಿಖಾ ಸಂದರ್ಭದಲ್ಲಿ ಆರೋಪಿಯು, ತನ್ನ ದ್ವಿಚಕ್ರ ವಾಹನದ ರಿಪೇರಿಯ ಸಲುವಾಗಿ ಹತ್ತು ಸಾವಿರ ರೂಪಾಯಿ ಹಣವನ್ನು ತಾಯಿ ಬಳಿ ಕೇಳಿದ್ದೆ, ಆದರೆ ಆಕೆ ಹಣ ನೀಡಲು ನಿರಾಕರಿಸಿದಳು. ಆಗ ತಾಯಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದೆ.
ತಾಯಿ ಅದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದಾಗ ಆಕೆಯನ್ನು ಗೋಡೆಗೆ ಜೋರಾಗಿ ತಳ್ಳಿದೆ, ಆಗ ತಲೆಗೆ ಪೆಟ್ಟಾಗಿ ಆಕೆ ಪ್ರಜ್ಞೆ ತಪ್ಪಿಬಿದ್ದಳು. ನಂತರ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದೆ ಎಂದು ತಪ್ಪೊಪ್ಪಿ ಕೊಂಡಿದ್ದಾನೆ.
ಕೊಲೆಯನ್ನು ಹಣಕ್ಕಾಗಿ ಮಾಡಿರುವ ಕೃತ್ಯೆವೆಂದು ಕಾಣಿಸಲು, ತಾಯಿಯನ್ನು ಸೀರೆಯಿಂದ ಸುತ್ತಿ ಆಕೆಯ ಸರ ಹಾಗೂ ಮೊಬೈಲ್ ಫೋನ್ ತೆಗೆದುಕೊಂಡು ಹೋದೆ, ನಂತರ ಯಾವುದೇ ಸುಳಿವು ದೊರೆಯದಂತೆ ನೋಡಿಕೊಳ್ಳಲು ಚಿನ್ನದ ಸರ ಮತ್ತು ಮೊಬೈಲ್ ಫೋನ್‍ನ್ನು ಆಡುಗೋಡಿಯ ಮೋರಿಗೆ ಬಿಸಾಡಿರುವುದನ್ನು ಮಗ ಗಿರೀಶ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. (ಮಾಹಿತಿ: ಡಿಸಿಪಿ ಕಚೇರಿ, ಬೆಂಗಳೂರು ಕ್ರೈಂ)












Click it and Unblock the Notifications