ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಒಣತ್ಯಾಜ್ಯ ಮಾರಿಬಿಡಿ!
ಬೆಂಗಳೂರು, ಆ.5: ಆನ್‌ಲೈನ್‌ಲ್ಲಿ ಹಳೇಯ ವಸ್ತುಗಳನ್ನು ಮಾರಾಟ ಮಾಡುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಇನ್ನು ಮುಂದೆ ಬಿಬಿಎಂಪಿಯ ವೆಬ್‌ಸೈಟ್‌ನಲ್ಲೇ ನೀವು ನಿಮ್ಮ ಮನೆಯಲ್ಲಿರುವ ಕಬ್ಬಿಣ,ಕಟ್ಟಿಗೆ, ಬಾಟಲಿ, ಪ್ಲಾಸ್ಟಿಕ್ ಇತ್ಯಾದಿ ಒಣ ತ್ಯಾಜ್ಯಗಳನ್ನು ಮಾರಾಟ ಮಾಡಬಹುದು.
ನಗರದಲ್ಲಿ ಹಸಿ ತ್ಯಾಜ್ಯದೊಂದಿಗೆ ಒಣ ತ್ಯಾಜ್ಯವನ್ನು ಮಿಶ್ರಣ ಮಾಡಿ ಸುರಿಯುತ್ತಾರೆ. ಇದನ್ನು ವಿಂಗಡನೆ ಮಾಡುವುದೇ ಬಿಬಿಎಂಪಿಗೆ ದೊಡ್ಡ ಸಮಸ್ಯೆ. ಈ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ ಇದೀಗ ಆನ್‌ಲೈನ್‌ನಲ್ಲೇ ಒಣತ್ಯಾಜ್ಯವನ್ನು ಮಾರಾಟ ಮಾಡುವ ವಿನೂತನ ಉಪಾಯವನ್ನು ಕಂಡು ಹುಡುಕಿದ್ದು ಸದ್ಯದಲ್ಲೇ ಈ ವೆಬ್‌ಸೈಟ್ ಜನರ ಸೇವೆಗೆ ಲಭ್ಯವಾಗಲಿದೆ.[ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು ಬೆಳಗಿದ ಹಸಿ ತ್ಯಾಜ್ಯ]
ಈ ವೆಬ್‌ಸೈಟ್‌ನಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿದರೆ ಸಮೀಪದಲ್ಲಿರುವ ಚಿಂದಿ ಆಯುವವರು ನಿಮಗೆ ಕರೆ ಮಾಡಿ ಮಾಹಿತಿ ಪಡೆಯುತ್ತಾರೆ. ಬಳಿಕ ನೀವು ಹೇಳಿದ ಸಮಯಕ್ಕೆ ಬಂದು ಒಣತ್ಯಾಜ್ಯವನ್ನುಸಂಗ್ರಸಹಿಸುತ್ತಾರೆ.

ಒಣ ತ್ಯಾಜ್ಯ ಸಂಗ್ರಹಣೆ ಉತ್ತೇಜಿಸಲು ಮತ್ತು ಚಿಂದಿ ಕಾಗದ ಆಯುವವರ ಜೀವನಾಧರ ಭದ್ರತೆಗೆಗಾಗಿ ಕೇಂದ್ರ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಯೋಜನೆ ರೂಪಿಸಿದ್ದು ಈ ಯೋಜನೆಗೆ ಸಮರ್ಥ ಎಂದು ಹೆಸರಿಡಲಾಗಿದೆ. ಇದರ ಅಂಗವಾಗಿ ಒಣತ್ಯಾಜ್ಯ ಮಾರಾಟ ಮಾಡಲು ಪ್ರತ್ಯೇಕ ವೆಬ್‌ಸೈಟ್ ತೆರೆಯಲಿದ್ದು ಬಿಬಿಎಂಪಿಯ ವೆಬ್‌ಸೈಟ್‌ಗೆ ಸಮರ್ಥ ವೆಬ್‌ಸೈಟ್‌ನ ಲಿಂಕ್‌ನ್ನು ಜೋಡಣೆ ಮಾಡಲಾಗುತ್ತದೆ.[ಬೆಂಗಳೂರಿನ ಕಸ ಸಮಸ್ಯೆ ನಿವಾರಿಸಲು ಮನಿಲಾ ಮಂತ್ರ]
ವೆಬ್‌ಸೈಟ್‌ನಲ್ಲಿ ಮಾರಾಟ ಮಾಡುವುದು ಹೇಗೆ? ವೆಬ್‌ಸೈಟ್‌ನಲ್ಲಿ ಒಣತ್ಯಾಜ್ಯದ ವಿವರ, ಅದರ ತೂಕದ ಮಾಹಿತಿ, ಮತ್ತು ಆ ತ್ಯಾಜ್ಯದಿಂದ ಎಷ್ಟು ಹಣವನ್ನು ಬಯಸುತ್ತೀರಿ ಎನ್ನುವ ವಿವರವನ್ನು ದಾಖಲಿಸಿ ಸಬ್‌ಮಿಟ್ ಬಟನ್ ಒತ್ತಬೇಕು. ಈ ಮಾಹಿತಿಯನ್ನು ನಿಯಂತ್ರಣ ಕಚೇರಿಯಲ್ಲಿರುವ ಸಿಬ್ಬಂದಿಗಳು ಚಿಂದಿ ಆಯುವವರಿಗೆ ವರ್ಗಾಯಿಸಿ ಅವರು ನಿಮಗೆ ಕರೆ ಮಾಡಿ ಒಣ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಮಾರಾಟ ಮಾಡಿದ ಬಳಿಕ ಈ ಸೇವೆ ತೃಪ್ತಿ ತಂದಿದೆಯೇ ಎಂಬುದನ್ನು ದಾಖಲಿಸಬೇಕಾಗುತ್ತದೆ.
ಚಿಂದಿ ಆಯುವವರಿಗೆ ಸ್ಮಾರ್ಟ್‌ಫೋನ್: ಬಿಬಿಎಂಪಿಯ ಎಂಟು ವಲಯದಲ್ಲಿ ಚಿಂದಿ ಆಯುವವರ 20 ಗುಂಪುಗಳನ್ನು ರಚಿಸಲಾಗಿದೆ. ಈ ಗುಂಪಿನಲ್ಲಿ 8-10 ಮಂದಿ ಸದಸ್ಯರಿದ್ದು ಅವರ ತಂಡದ ಒಬ್ಬ ಸದಸ್ಯರಿಗೆ ಇದಕ್ಕಾಗಿ ಒಂದೊಂದು ಸ್ಮಾರ್ಟ್‌ಫೋನ್ ನೀಡಲಾಗುತ್ತದೆ.


Click it and Unblock the Notifications
