ಬಿಎಂಟಿಸಿ ಬಸ್‌ಗಳಲ್ಲಿ ಎಚ್ಚರವಾಗಿರಿ..ಇಂತವರೂ ಇರ್ತಾರೆ!
ಬೆಂಗಳೂರು, ಸೆಪ್ಟೆಂಬರ್ 04: ಉದ್ಯಾನನಗರಿ ಜನರ ಜೀವನಾಡಿ ಎಂದು ಕರೆಸಿಕೊಂಡಿರುವ ಬಿಎಂಟಿಸಿಯು ಪ್ರಯಾಣಿಕರಿಗೆ ಸುಖಕರ ಪ್ರಯಾಣದ ಸೇವೆಯನ್ನು ಕಲ್ಪಿಸುತ್ತಿದೆ. ಬೆಂಗಳೂರಿನಲ್ಲಿ ಸಾವಿರಾರು ಬಿಎಂಟಿಸಿ ಬಸ್‌ಗಳು ಸಾರ್ವಜನಿಕರನ್ನು ಕರೆದೊಯ್ಯುತ್ತಿವೆ. ಆದರೆ, ಇದೇ ವೇಳೆ ಪ್ರಯಾಣಿಕರಿಗೆ ಮೊಬೈಲ್ ಕಳ್ಳರ ಆತಂಕ ಕೂಡ ಶುರುವಾಗಿದೆ.
ಬಸ್‌ಗಳಲ್ಲಿ ಹೆಚ್ಚು ದಟ್ಟಣೆ ಇರುವುದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಖದೀಮರು ಪ್ರಯಾಣಿಕರ ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸದ್ದಿಲ್ಲದೆ ಎಗರಿಸುವ ವಿಚಾರ ಆಗಾಗ ಹೊರಬರುತ್ತಲೇ ಇವೆ. ಈಗ ಇಂತದ್ದೇ ಮತ್ತೊಂದು ಪ್ರಕರಣ ಹೊರಬಂದಿದ್ದು, ವ್ಯಕ್ತಿಯೊಬ್ಬ ಬರೋಬ್ಬರಿ 60ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪ್ರಯಾಣಿಕರಿಂದ ಎಗರಿಸಿದ್ದಾನೆ.

ಈ ಕಳ್ಳನ ಹಿನ್ನೆಲೆ ಕೇಳಿದ್ರೆ, ನೀವು ಶಾಕ್ ಆಗೋದಂತೂ ಗ್ಯಾರಂಟಿ. ಈತ ಕಳ್ಳತನವನ್ನೇ ಪ್ರೊಫೆಷನ್ ಮಾಡಿಕೊಂಡಿದ್ದು, ಈ ಘನಂದಾರಿ ಕೆಲಸ ಮಾಡೋಕೆ ಈತ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದನಂತೆ. ಹೌದು ಎಲ್ಲರೂ ಬೆಂಗಳೂರನ್ನು ನೋಡಿ, ಸುತ್ತಾಡಿ ಹೋಗೋಣ ಅಥವಾ ಇಲ್ಲಿ ಕೆಲಸ ಹುಡುಕಿಕೊಂಡು ಸೆಟಲ್ ಆಗೋಣ ಅಂತ ಬಂದ್ರೆ, ಆಂಧ್ರಪ್ರದೇಶ ಮೂಲದ ರವಿ ಎನ್ನುವ ವ್ಯಕ್ತಿ 'ಮೊಬೈಲ್ ಕದ್ದು ಹೋಗೋಣ' ಅನ್ಕೊಂಡು ಸೀದಾ ಬೆಂಗಳೂರು ಬಸ್ ಹತ್ತುತ್ತಿದ್ದನಂತೆ.
ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಈತನ ಫ್ರೆಂಡ್ಸ್ ಇಲ್ಲಿಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಪ್ರಯಾಣಿಕರಂತೆ ಬಿಎಂಟಿಸಿ ಬಸ್ ಹತ್ತುತ್ತಿದ್ದ ಈತ, ಜನರ ಗಮನ ಬೇರೆಡೆಗೆ ಸೆಳೆದು ಮೊಬೈಲ್‌ಗಳನ್ನು ಕದಿಯುತ್ತಿದ್ದ. ಒಂದಷ್ಟು ಮೊಬೈಲ್ ಕದ್ದ ಮೇಲೆ ಸೀದಾ ಆಂಧ್ರಪ್ರದೇಶಕ್ಕೆ ವಾಪಸ್ ಹೋಗುತ್ತಿದ್ದ. ಇಲ್ಲಿ ಕದ್ದ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಮಾರಿಕೊಂಡು ಖರ್ಚಿಗೆ ಕೈತುಂಬಾ ದುಡ್ಡು ಮಾಡಿಕೊಳ್ಳುತ್ತಿದ್ದ ಅಂತಾರೆ ಪೊಲೀಸರು.

ಐಫೋನ್ ಅಂದ್ರೆ ಎಲ್ಲರಂತೆ ಇವನಿಗೂ ಕ್ರೇಜ್ ಇತ್ತಂತೆ. ಹಾಗಾಗಿ ಬೆಲೆ ಬಾಳುವ ಫೋನ್‌ಗಳನ್ನೇ ಹೆಚ್ಚಾಗಿ ಎಗರಿಸುತ್ತಿದ್ದ. ಐಫೋನ್ ಸ್ಪೇರ್ಸ್‌ಗಳನ್ನು ಬಿಚ್ಚಿ, ಅದನ್ನೂ ಮಾರಾಟ ಮಾಡುತ್ತಿದ್ದ. ಕದ್ದ ಎಲ್ಲ ಮೊಬೈಲ್‌ಗಳನ್ನು ಸಕ್ಸಸ್‌ಫುಲ್ ಆಗಿ ಮಾರಿದ ಮೇಲೆ, ಮತ್ತೆ ಬೆಂಗಳೂರು ಬಸ್ ಹತ್ತಿ ಸಿಲಿಕಾನ್ ಸಿಟಿಗೆ ಕಾಲಿಡುತ್ತಿದ್ದ ಎಂಬ ಅಚ್ಚರಿಯ ವಿಚಾರವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ತಗಲಾಕೊಂಡಿದ್ದು ಹೇಗೆ?: ಆನೇಕಲ್ ತಾಲ್ಲೂಕಿನ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕಳವಾಗಿದ್ದರ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು, ಚಾಲಾಕಿ ರವಿಯನ್ನು ಲಾಕ್ ಮಾಡಿದ್ದಾರೆ. ಈತನ ಬಳಿ ವಿವಿಧ ಬ್ರ್ಯಾಂಡ್‌ನ 60 ಮೊಬೈಲ್ ಫೋನ್ ಇಟ್ಟುಕೊಂಡಿದ್ದ. ಇವುಗಳ ಬೆಲೆ ಸುಮಾರು ₹10 ಲಕ್ಷ ಎಂದು ಹೇಳಲಾಗಿದೆ. ಈ ಎಲ್ಲವನ್ನೂ ಪೊಲೀಸರು ಸೀಜ್ ಮಾಡಿ, ಆತನನ್ನು ಕಂಬಿ ಎಣಿಸಲು ಬಿಟ್ಟಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲಿ ನೂಕುನುಗ್ಗಲು ಇರುವ ಪರಿಸ್ಥಿತಿಯನ್ನೇ ಇಂತಕ ಕದೀಮರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೇ ಭದ್ರತಾ ಕ್ರಮಗಳನ್ನು ತೆಗೆದುಕೊಂಡರೂ ಮೊಬೈಲ್ ಕಳ್ಳತನದ ಪ್ರಕರಣಗಳು ಆಗಾಗ ಕೇಳಿಬರುತ್ತಲೇ ಇವೆ. ಇಂತವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.












Click it and Unblock the Notifications